ಎದೆ ಹಾಲಿನ ಪಾಳಿ

ಎದೆ ಹಾಲಿನ ಪಾಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಆರಿಫ್ ರಾಜಾ
ಪ್ರಕಾಶಕರು
ಸಂಗಾತ ಪುಸ್ತಕ
ಪುಸ್ತಕದ ಬೆಲೆ
150/-

"ಎದೆ ಹಾಲಿನ ಪಾಳಿ " ಲೇಖಕರಾದ ಆರಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು, ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು" ಜಗತ್ತು" ಎನ್ನುವಷ್ಟು ಆಳವಾಗಿವೆ, ಈ ಜಗದ ಸಂತೆ (ಕವಿತೆ ಒಳಗಿನ ಭಾವ) ಓದುಗರನ್ನು ಚಿಂತನೆಗೆ ಒಯ್ಯುತ್ತವೆ. ನೀರಿಗಾಗಿ ನಳದ ಮುಂದೆ (ನಲ್ಲಿ) ಪಾಳಿ, ಟಿಕೆಟ್ ಗಾಗಿ ಸಿನಿಮಾ ಥಿಯೇಟರ್ ಅಲ್ಲಿ ಪಾಳಿ, ಬ್ಯಾಂಕಿನಲ್ಲಿ ಸಂಬಳಕ್ಕಾಗಿ ಪಾಳಿ (ಈಗ ಚಿತ್ರಣ ಸ್ವಲ್ಪ ಬದಲಾಗಿದೆ), ಓಟಿಗಾಗಿ-ನೋಟಿಗಾಗಿ ಪಾಳಿ, ಭಾರತ ನೋಡದ ಸರತಿ ಸಾಲು ಇಲ್ಲವೇ ಇಲ್ಲ... ಈಗೀಗ ಪಾಳಿ(ಸರತಿ ಸಾಲು) ವಿವಿಧ ಉದ್ದೇಶ, ಅವರರವರ ಅನುಕೂಲಕ್ಕಾಗಿ ಪಾಳಿ ಬದಲಾಗಿದೆ ಅಷ್ಟೇ, ಆದರೆ ಪಾಳಿಯೇ ಇಲ್ಲ ಎಂಬುದಿಲ್ಲ.

ಜನ ಇರುವವರೆಗೂ ಪಾಳಿ ಜೀವಂತ!. ಮೊದಲೆಲ್ಲಾ ಒಂದು ಮಾತು ಇತ್ತು " ಹಾಕುವಾಗ ಎರಡು ರೊಟ್ಟಿ ಹೆಚ್ಚು ಹಾಕು, ಹಡೆಯುವಾಗ ಒಂದರೆಡು ಮಕ್ಕಳ ಹೆಚ್ಚಿಗಿ ಹಡಿ " ಎಂಬುದು.... ಹತ್ತು ಹಡೆದರೆ ನಾಕರ (ನಾಲ್ಕು) ಉಳಿವವು (ಮಕ್ಕಳು) ಎಂಬುದು ಒಂದು ವಾದ ಅವರದು, ಅಜ್ಜ, ತಂದೆಯರ ಕಾಲದಲ್ಲಿ ಇದ್ದ ಮಕ್ಕಳ ಪಾಳಿ ದೊಡ್ಡದು. ಮೊದಲ ಮಗ ಎರಡನೇ ಮಗಳು, ಮೂರನೇ ಮಗ ...ಹೀಗೆ ಪಟ್ಟಿ ಬೆಳೆಯುತ್ತಿತ್ತು. ಮಕ್ಕಳ ಪಾಳಿಯು ಅಮ್ಮನಿಗಾಗಿ ಕಾಯುತ್ತಿತ್ತು ...ಹಂತ ಹಂತವಾಗಿ ಈಗ ಬದುಕಿನ ವ್ಯವಸ್ಥೆ ಬದಲಾಗಿದೆ.

ಸಮಕಾಲೀನ ಸಮಸ್ಯೆಗಳು ಹಲವು. ನಿಲ್ಲದ ಜೀವನ ಯಾನಕ್ಕೆ ರೋಚಕ ತಿರುವುಗಳು, ಏಣಿಇಲ್ಲದ ಸವಾಲುಗಳು ಪಯಣದ ದಿಕ್ಕನ್ನು ಬದಲಿಸುತ್ತವೆ. ಇಲ್ಲಿನ ಕವಿತೆಗಳು ಓದಿನ ದಿಕ್ಕನ್ನು ಬದಲಿಸುತ್ತವೆ. ಹಲವು ವಿಚಾರ ಕವಿತೆಯಾಗಿ ಮಾತನಾಡಿದೆ ಎನಿಸುತ್ತದೆ, ಇದು " ದೇವರಿಗೆ ಬಿದ್ದ ಕನಸು " ಎಂಬ ಕವನದ ಸಾಲುಗಳು

"ಜನ, ಸತ್ತಮೇಲೆ ಸತ್ತವರ ಕಣ್ಣುಮುಚ್ಚುತ್ತಾರೆ

ಸಾವಿನ ಅಮಲು ತಕ್ಷಣ ತಲೆಗೆರುವದಿಲ್ಲ

ನಿಧನಿಧಾನವಾಗಿ ರಕ್ತದಲಿ ಇಳಿದಂತೆ

ಸತ್ತವರು ಮತ್ತೇ ಜೀವಂತವಾಗುತ್ತಾರೆ .

......

ಒಳಿಗಿನ ಮಾತೇನೆಂದರೆ

ಸತ್ತವರು ಅಂದೇ ಸತ್ತಿರುವದಿಲ್ಲ

ನಾವಿರುವತನಕ ನಮ್ಮೊಂದಿಗೆ

ವಿದೇಹಿಗಳಾಗಿ ಓಡಾಡಿಕೊಂಡಿರುತ್ತಾರೆ "

ಹೌದಲ್ಲವೇ ..... ಸತ್ತವರು ನಮ್ಮಗಳ ಮನದಲ್ಲಿ ಅಜರಾಮರ ಇಲ್ಲವಾದರೆ, ಸವಿನೆನಪು, ಹಿತ ನೆನಪು ಎಂಬ ಪದಗಳು ಹೇಗೆ ಸಿಗುತ್ತವೆ ಗತಕಾಲವ ಬಣ್ಣಿಸಲು. ಇಷ್ಟಲ್ಲದೆ ಇಲ್ಲಿನ‌ ಕವಿತೆಗಳ ಹರವು ಜೀವವಿಜ್ಞಾನದ ವಿಸ್ಮಯವನ್ನು ಕವಿತೆಯಾಗಿಸಿ ಮಾಹಿತಿ ನೀಡಿದೆ " ಕಪ್ಪು ವಿಧವೆ " ಎಂಬ ಕವಿತೆಯಲ್ಲಿ ಓದಿದಾಗ ಒಂದು ಸಂಚಲನವೇ ಮೂಡುತ್ತದೆ. ಕೆಲ ಕವಿತೆಗೆ ನೀಡುರುವ ಟಿಪ್ಪಣಿಗಳು ಕವಿತೆಯ ಭಾವ ಅರಿಯಲು ಸಹಾಯಕವಾದರೆ ಮತ್ತೊಂದು ಟಿಪ್ಪಣಿ ಅಚ್ಚರಿ ಮೂಡಿಸುತ್ತದೆ .

ಈ ಕವಿತೆ ಯಲ್ಲಿ

" ಮನುಷ್ಯತ್ವವೆಂಬುದು ಸಂಪೂರ್ಣವಾಗಿ

ಲಕ್ವ ಹೊಡೆದ ಶಹರದೊಳಗೆ

ಶಾಂತಿಯ ಹೆಸರಲಿ ಕವಾಯತು ನಡೆಸುವ

ಬಾಡಿಗೆ ಸೈನ್ಯ

 

ಬೂಟುಗಾಲಿನ ಮುಂದೆ ಬೊಗಸೆ

ನೀರಿಗಾಗಿ ಸೆರಗೊಡ್ಡಿ ಬೇಡುವ ತಾಯಿ" .

 

ಇದು "ಚೇರನ್ ಹೇಳಿದ ಕವಿತೆಯ ಸಾಲುಗಳು ....

ಈ ಸಾಲುಗಳ ಅರ್ಥೈಸಲು ಅಗತ್ಯವಿಲ್ಲ .... ನಿತ್ಯವು ಒಂದಲ್ಲ ಒಂದು ರೀತಿಯಲ್ಲಿ ನಾವು ಜಗವ ಎದುರುಗೊಂಡಿರುತ್ತೇವೆ ಅಥವಾ ಒಂದಲ್ಲ ಒಂದು ದಿನ ಎದುರಾಗುತ್ತವೆ ... ಎಂಬಷ್ಟೇ ನೈಜವಾಗಿ ಕವಿತೆ ಹರಡಿದೆ. ಇಡೀ ಕವಿತೆ ಸಮಕಾಲೀನ ಸತ್ಯದೂಂದಿಗೆ ಧೂಳು ಮೆತ್ತಿದ ವಾಸ್ತವವ ತಡಕಾಡುವಂತೆ ಮಾಡುತ್ತದೆ ......

ಕವಿತೆಗಳು ಯಾವ ಹಮ್ಮು ಬಿಮ್ಮುಗಳ ತೋರುವದಿಲ್ಲ ಅಂತೆಯೇ ಕಾಣದ ಜಗದ ವೈಭವ ಈ ಕವಿತೆಗಳ ಸಾಲುಗಳು ಅಗಿಲ್ಲ. ಯಾವ ಮುಲಾಜಿಗೂ ಸಿಗದೆ ಕವಿತೆ ಸಾಗುತ್ತವೆ ನಮ್ಮೊಳಗಿನ ನಮ್ಮನ್ನು ಭೇಟಿಮಾಡುವಂತೆ ಹತ್ತಿರವಾಗುತ್ತವೆ. ಇಲ್ಲಿ ಕಲ್ಪನೆ ಅಥವಾ ದ್ವಂದ್ವಗಳಿಗೆ ಅವಕಾಶವಿಲ್ಲ ಆದರೂ ಕೆಲ ಕವಿತೆಗಳು ಸುಲಭವಾಗಿ ಓದಿಗೆ ಸಿಗುವದಿಲ್ಲ!. ಒಂದು ಬರ್ಬರ ಹೋರಾಟವು ಕವಿತೆಯಾಗಿದೆ, ಮತ್ತೊಂದು ಏಳು ತಿಂಗಳ ಕೂಸಿನ ಸೂಗಸು ಕವಿತೆಯಾಗಿದೆ !, " ಅಮ್ಮನಿಗೆ ತಾಳಿ ಇದೆ ಕೊರಳಲ್ಲಿ ನಿನಗೇಕೆ ಇಲ್ಲ ಎಂದು ಕೊರಳ ತುಂಬಾ ಕೈಹಾಕಿ ಪ್ರಶ್ನಿಸುವ ಹಾಲುಗಲ್ಲದ ಹಸುಳೆಗೆ ಯಾವ ಉತ್ತರ ನೀಡ ಬೇಕು ಆದರೆ ಈ ಪ್ರಶ್ನೆಯ ತಳ್ಳಿ ಹಾಕುವಂತೆಯೂ ಇಲ್ಲ ..... ಇಲ್ಲಿ ಭಾವನೆ ಅಷ್ಟೇ ಇಲ್ಲ ವಿಚಾರ ಧಾರೆಯು ಅಡಗಿದೆ. ಒಂದು ಕೃತಿ ಒಂದು ಜಗತ್ತು ಎಂದರ ಆರೀಪ್ ದಾದಾ ಅವರ ಒಂದು ಕವಿತೆ ಒಂದು ಜಗತ್ತು ಎನ್ನುಷ್ಟು ಗಾಢವಾಗಿವೆ.

- ರೇಶ್ಮಾ ಗುಳೇದಗುಡ್ಡಾಕರ್