ಎನ್ನಾಸೆ

Submitted by rajeevkc on Fri, 10/25/2019 - 11:16
ಬರಹ

ಪ್ರಕೃತಿಯ ಮಡಿಲಲಿ ಮಗುವಾಗುವಾಸೆ.
ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ.
ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ.
ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ.

ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ.
ಬಾನಂಗಳಕೆ ಹಾರಿ ಮೋಡಗಳೊಡನೆ ತೇಲುವಾಸೆ.
ಎತ್ತರಕೆ ಹಾರಿ ಭೂರಮೆಯ ವೀಕ್ಷಿಸುವಾಸೆ.
ಬೇಡನ ಬಲೆಗೆದರಿ ಗರಿಗೆದರದಿದೆ ಎನ್ನಾಸೆ.

ಮಧುರಕಂಠವನೋಲುವ ಕೋಗಿಲೆಯಾಗುವಾಸೆ.
ಇಂಪಾದ ಧನಿಬೆರೆಸಿ ಹಾಡುವಾಸೆ.
ಸಂಗೀತ ಪ್ರಿಯರ ಮನತಣಿಸುವಾಸೆ.
ಕೋಗಿಲೆ ಬಣ್ಣಕೆದರಿ ಧನಿಗೂಡದಿದೆ ಎನ್ನಾಸೆ.

ಹೂಬನಕೆ ಅಂದವನೀಯ್ಯುವ ಗುಲಬಿಯಾಗುವಾಸೆ.
ಬಗೆಬಗೆ ಬಣ್ಣದಿ, ಹೂದೋಟಕೆ ಮೆರುಗು ನೀಡುವಾಸೆ.
ಮುಡಿಸೇರಿ, ಮುಡಿದವರ ಅಂದವನೆಚ್ಚಿಸುವಾಸೆ.
ಮುಳ್ಳಿನ ಸಂಗಕೆದರಿ, ಅರಳದಿದೆ ಎನ್ನಾಸೆ.

ನಡೆನುಡಿಯನೆತ್ತಿ ತೋರುವ ಸಾಹಿತ್ಯಕೃಷಿಗೆ ಶ್ರಮಿಸುವಾಸೆ.
ಜನಮನವನೆಚ್ಚರಿಸುವ ಚಿಂತನೆಗಳ ಹಂಚಿಕೊಳುವಾಸೆ.
ಕಾವ್ಯರಸಿಕರಿಗೆ ರಸದೌತಣ ನೀಡುವಾಸೆ.
ಹಿಂದಿರುವ ಪರಿಶ್ರಮಕೆದರಿ, ಹೊರಹೊಮ್ಮದಿದೆ ಎನ್ನಾಸೆ.

ವಿದ್ಯಾಪಾಂಡಿತ್ಯವ ಪಡೆದು ಹಿರಿಮೆ ಗಳಿಸುವಾಸೆ.
ಸಂಶೊಧಕನಾಗಿ ಹೊಸ ಅನ್ವೇಷಣೆ ಮಾಡುವಾಸೆ.
ತಙ್ಞನಾಗಿ ಮನುಕುಲಕೆ ಶುಧ್ಧಪರಿಸರವ ಸೃಷ್ಠಿಸುವಾಸೆ.
ಸುಧೀರ್ಘ ಅಧ್ಯಯನಕೆದರಿ, ಮೂಡದಿದೆ ಎನ್ನಾಸೆ.

ಸರಳಜೀವನ ಆದರ್ಶಗಳ ವ್ಯಕ್ತಿತ್ವವನೋಲುವಾಸೆ.
ಸನ್ಮಾರ್ಗದಲಿ ನಡೆದು ಮುಕ್ತಿಪಥ ಸೇರುವಾಸೆ.
ನಾಡುನುಡಿಗೆ ಮಣಿದು ಹುತಾತ್ಮನಾಗುವಾಸೆ.
ತ್ಯಾಗ ಮನೋಭಾವಕೆದರಿ, ನಶಿಸಿತು ಎನ್ನಾಸೆ.

ಆಸೆಗಳನೊಲಿಸಿಕೊಳುವ ಮರ್ಮವನರಿಯಲು ನಡೆಸಿದೆ ಜಿಙ್ಞಾಸೆ.
ಪ್ರತಿಹಂತದ ಹಿಂದಿಹುದು ನೋವು ಶ್ರಮಗಳೆಂಬ ನಿರಾಸೆ.
ಈ ನಿರಾಸೆಗಳೇ ಆಸೆಗಳಾಗುವುದಕೆ, ಸ್ಪಂದಿಸಲು ಎನ್ನ ಅಭಿಲಾಷೆ,
ಮುಂದೊಂದು ದಿನ ಕೈಗೂಡುವುದು ಎನ್ನಯ ಆಸೆ.