ಎಮ್. ಎಫ್. ಹುಸೇನ್ ಇಲ್ಲದ ಭಾರತ.

ಎಮ್. ಎಫ್. ಹುಸೇನ್ ಇಲ್ಲದ ಭಾರತ.

ಬರಹ

ಹುಸೇನ್ ಇಲ್ಲದ ಭಾರತ!!


ಎಮ್. ಎಫ಼್. ಹುಸೇನ್ ಚಿತ್ರಗಳ ಕುರಿತು ನಮ್ಮ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಚರ್ಚಾಸ್ಪದವಾಗಿಯೇ ಮುಂದುವರಿದು ಈಗ ಹುಸೇನ್ ನಮ್ಮ ದೇಶವನ್ನು ತೊರೆದು ಬದುಕಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದೇ ಅನ್ನಬೇಕು. ಹೀಗೆ ಹೇಳಿದರೆ ನಮ್ಮ ದೇವತೆಗಳನ್ನು ನಗ್ನ ಮಾಡಿದ ಒಬ್ಬ ಮುಸಲ್ಮಾನನನ್ನು ಮೆಚ್ಚುವ ಸೆಕ್ಯೂಲರ್ ಬುದ್ದಿಜೀವಿಗಳ ಅನುಯಾಯಿ ಎಂದು ನನ್ನನ್ನು ಆಪಾದಿಸಬಹುದು. ಹೀಗೆ ಮಾತಾಡುತ್ತಾ, ಜಗಳಮಾಡುವುದರ ಬಗೆಗೆ ನನಗೆ ಆಸಕ್ತಿ ಇಲ್ಲ. ಆದರೆ ಪ್ರಖರವಾದ ಕಲಾಶಕ್ತಿಯಿರುವ ಒಬ್ಬ ಕಲಾವಿದನ ಕೃತಿಯನ್ನು ಯಾವಾಗಲೂ ಬೆರಗಿನಿಂದ ನೋಡುವ ತೆರೆದ ಮನಸ್ಥಿತಿಯನ್ನು ನಾವು ಕಳೆದುಕೊಂಡರೆ ನಮ್ಮ ಸಂವೇದನೆಗಳಿಗೆ ಆಗುವ ನಷ್ಟ ಬಹುದೊಡ್ಡದು ಎಂದು ಭಾವಿಸುತ್ತೇನೆ. ರಾಜಕೀಯ ಪ್ರೇರಿತ ಮಾತುಗಳಲ್ಲೇ ನಾವು ಕಳೆದುಹೋಗಬಾರದೆಂಬುದು ನನ್ನ ಕಳಕಳಿ.


ನಿಜ. ಮೂರ್ತಿ-ಚಿತ್ರಪಟಗಳ ಪೂಜಾವಿಧಾನದ ದೇಶನಮ್ಮದಾಗಿದೆ. ಹಾಗಂತ ನಮ್ಮ ದೇಶದ ಎಲ್ಲಾ ಸಮುದಾಯ-ಬುಡಕಟ್ಟುಗಳೂ ಮೂರ್ತಿಪೂಜೆಯನ್ನೇ ಅನುಸರಿಸುತ್ತಾವೆಂದಲ್ಲ. ಅಮೂರ್ತ ವಸ್ತುಗಳನ್ನೂ, ನಿರಾಕಾರ ದೇವರನ್ನೂ ಪೂಜಿಸುವ ಸಂಪ್ರದಾಯಗಳೂ ಇದ್ದೇ ಇದೆ. ನಾವು ಪೂಜಿಸುವ ದೇವತೆ ನಮ್ಮ ದೇಶದ ಅನೇಕ ಕಲ್ಲಿನ ದೇವಾಲಯಗಳಲ್ಲಿ ಬೆತ್ತಲಾಗಿ ಕಂಡರೆ ಅದನ್ನು ನಾವು ಸ್ವೀಕರಿಸಿಯೂ ಇದ್ದೇವೆ. ಹೆಣ್ಣನ್ನು ಮಾತೃ ಸ್ವರೂಪಿಯೆಂದು ಕರೆಯುವ ನಾವು ಸಿನಿಮಾಗಳಲ್ಲಿ ಬೆತ್ತಲಾಗುವುದನ್ನು ಸ್ವೀಕರಿಸುತ್ತೇವೆ. ಸಿನಿಮಾ ಕಲಾಪ್ರಕಾರದಲ್ಲಿ ಅದು ತನ್ನ ಅಭಿವ್ಯಕ್ತಿಗೆ ಅನುಗುಣವಾಗಿ ವ್ಯಕ್ತಿಯನ್ನು ನಗ್ನ ಮಾಡುವುದುಬೇರೆ, ಅಶ್ಲೀಲಕ್ಕೆ ಅಥವ ಹಣದೋಚುವ ಉಪಾಯವಾಗಿ ಅದನ್ನು ಬಳಸುವುದು ಬೇರೆ.


ನಾನು ಈ ಲೇಖನವನ್ನು ಬರೆಯಲು ನನ್ನನ್ನು ಪೇರೇಪಿಸಿದ ಸಂಗತಿಗಳು ಎರಡು. ಮೊದಲನೆಯದು ನಮ್ಮ ದೇಶದ ಒಬ್ಬ ಮಹಾ ಕಲಾವಿದ ತನ್ನ ತೊಂಭತ್ತರ ಇಳಿವಯಸ್ಸಿನಲ್ಲಿ ತನ್ನ ದೇಶದಲ್ಲಿ ವಾಸಿಸಲಾಗದೇ ಹೋದದ್ದು. ಮತ್ತೊಂದು ಅವರಿಗೆ ಈ ಪರಿಸ್ಥಿತಿ ಬಂದುದರ ಕುರಿತು ವಿಜಯೋತ್ಸವ ಆಚರಿಸುತ್ತಾ ಅಂತರ್ಜಾಲದಲ್ಲಿ ಮೇಲ್ ಗಳನ್ನು ಕಳಿಸುತ್ತಾ ಸಮರ್ಥನೆ ನೀಡುತ್ತಿರುವುದು.


ನಾವು ಸ್ವೀಕರಿಸಿರುವ ಎಲ್ಲ ದೇವತೆಗಳ ರೂಪವೂ ಅನೇಕ ಕಲಾವಿದರುಗಳು ರೂಪಿಸಿದ ಚಿತ್ರಗಳೇ ಆಗಿವೆ. ದೇವರನ್ನು ಕಂಡವರಾರು? ನಾವು ಬಟ್ಟೆ ಧರಿಸಲು ಪ್ರಾರಂಭಿಸಿದ್ದೇ ಮನುಕುಲದ ಕಾಲದಲ್ಲಿ ಇತ್ತೀಚೆಗೆ. ಈಗಲೂ ಅತೀ ಕಡಿಮೆ ಬಟ್ಟೆಯನ್ನು ಧರಿಸುವ ವಿಧಾನಗಳೂಇವೆ. ಇದು ಅವರವರ ಅನುಕೂಲ - ಸಂಪ್ರದಾಯ. ಯಾವುದೇ ಸಮುದಾಯ ಉಡುಪಿನಕುರಿತಾಗಿ ಒಂದು ಕಟ್ಟಪ್ಪಣೆಯನ್ನು ನೀಡುವಂತಹ ಕಾಲಧರ್ಮ ಇವತ್ತಿನದಾಗಿಲ್ಲ. ಆಥರಹದ ಪ್ರಯತ್ನಗಳು ಇದ್ದರೂ ಅದನ್ನು ದಿಕ್ಕರಿಸುವ ಅಲೆಯೂ ಇದ್ದೇಇದೆ. ವ್ಯಕ್ತಿಸ್ವಾತಂತ್ರವನ್ನು, ಸ್ವಂತ ಅಭಿವ್ಯಕ್ತತೆಯನ್ನು ಪ್ರದರ್ಶಿಸಬೇಕೆನ್ನುವ ಈ ಕಾಲದಲ್ಲಿ ಕಟ್ಟಪ್ಪಣೆ ನೀಡುವವರು ಯೋಚಿಸಬೇಕಾದ ಕಾಲವಿದು.


ಇಂತಹ ಕಾಲದಲ್ಲಿ ಒಬ್ಬ ಪ್ರಮುಖ ಕಲಾವಿದ ತನಗೆ ದೊಡ್ದ ಮನ್ನಣೆನೀಡಿದ ತಾನು ವಾಸಿಸಿದ ಬಹುಸಂಸ್ಕೃತಿಗಳ ದೇಶದಲ್ಲಿ ಆ ದೇಶದ ಬಹುಸಂಖ್ಯಾತ ಜನ ಸಮುದಾಯ ನಂಬಿರುವ ದೇವರೂಪವನ್ನು ಅವಮಾನ ಗೊಳಿಸಲು ಬರೆಯುತ್ತಿದ್ದಾನೆ ಎಂದು ನಂಬಲು ಸಾಧ್ಯವೇ?  ಅವರೇ ಹೇಳಿಕೊಂಡಂತೆ ತನ್ನ ಮನಸ್ಸಿನಲ್ಲಿ ಮೂಡಿಬಂದ ಪ್ರಾಮಾಣಿಕ ನಿರೂಪಣೆಅದು.  ನಮ್ಮ ದೇವತೆಗಳು ಅಲ್ಲಿ ಅಶ್ಲೀಲವಾಗಿ ನಗ್ನವಾಗಿಲ್ಲ. ನಿರ್ಮಲ ಪ್ರಾಕೃತಿಕ ರೂಪವದು. ಮಗುವಿಗೆ ಹಾಲುಣಿಸುವ ತಾಯಿಯ ಸ್ತನ ಕಂಡರೆ ಯಾರೂ ಕೆರಳುವುದಿಲ್ಲ. ಅಂತಹ ನಗ್ನತೆ ಅದು.


ಇನ್ನು ನಮ್ಮ ಪುರಾಣ ಕಥೆಗಳು, ಸೌಂದರ್ಯ ಲಹರಿಗಳಲ್ಲಿ ಹೆಣ್ಣಿನ ದೇಹಗಳ ವಿವರಣೆಯನ್ನು ನಮ್ಮ ಭಾಷೆಗಳಲ್ಲಿ ಕೇಳಿದರೆ ಬೆಚ್ಚಿಬೀಳುವಂಥ ಅಭಿವ್ಯಕ್ತಿಗಳು ಯಥೇಚ್ಚವಾಗಿವೆ. ಹಾಗೆಂದು ಇವು ಅಶ್ಲೀಲವೆಂದು ತಿರಸ್ಕರಿಸಬೇಕೆ? ಒಬ್ಬ ಕೃತಿಕರ್ತ ಹೀಗೆಯೇ ಆಲೋಚಿಸಬೇಕು ಮತ್ತು ನೋಡಬೇಕೆಂದು ಆದೇಶಿಸಲು ಪ್ರಾರಂಭಿಸಿದರೆ ಇಲ್ಲಿ ಹೊಸಹುಟ್ಟು, ಹೊಸ ಒಳನೋಟ, ಜೀವನದ ಹೊಸ ಅರ್ಥವಂತಿಕೆ, ಸೃಜನಶೀಲ ಸಮಾಜನಿರ್ಮಾಣ ಸಾಧ್ಯವೇ? ಸೂಕ್ಷ್ಮ ಮನಸ್ಸುಗಳ ಅಭಿವ್ಯಕ್ತಿಗೆ ಮುಕ್ತ ಸ್ವಾತಂತ್ರವಿಲ್ಲದಿದ್ದರೆ ಇದನ್ನು ಹಿಟ್ಲರ್ ನ ಕಾಲ ಎನ್ನಬಹುದು.


ನಿಜವಾಗಿ ಹುಸೇನ್ ಚಿತ್ರಿಸಿದ ಗಾಂಧಿ, ಕಾರ್ಲ್ ಮಾರ್ಕ್ಸ್, ಹಿಟ್ಲರ್ ಚಿತ್ರದಲ್ಲಿ ಈತ ನಿಜವಾಗಿ ಹಿಟ್ಲರ್ನನ್ನು ಕೆಟ್ಟದಾಗಿ ಕಾಣುವಂತೆ ಚಿತ್ರಿಸಿದ್ದಾನೆ. ಅದು ಹಾಗೆಯೇ ಪರಿಣಾಮಕಾರಿಯಾಗಿದೆ ಕೂಡ. ಇವರೆಲ್ಲರ ನಡುವೆ ನಮ್ಮ ಗಾಂಧಿ ಸರಳಾತಿಸರಳ ಮಾನವನಾಗಿ ಮನುಕುಲಕ್ಕೆ ಸ್ಪೂರ್ತಿ ನೀಡುತ್ತಾನೆ.  ಮತ್ತೊಂದು ಚಿತ್ರದಲ್ಲಿ ಒಬ್ಬ ಬ್ರಾಹ್ಮಣ ಬೆತ್ತಲೆಯಾಗಿ ಬೆನ್ನುಮಾಡಿ ನಿಂತಿದ್ದಾನೆ. ಆತನ ಪಕ್ಕ ಖಡ್ಗ ಹಿಡಿದ ಮೈತುಂಬಾ ಬಟ್ಟೆ ಧರಿಸಿದ ಮೊಗಲ್ ದೊರೆ ವಿಲನ್ ನಂತೆ ಕಾಣುತ್ತಾನೆ. ಇಲ್ಲಿ ಬ್ರಾಹ್ಮಣ ಮುಕ್ತ ಮಾನವಜೀವಿಯಾಗಿ ಪಾರಮಾರ್ಥಿಕ ವಿಚಾರಗಳ ಆಸಕ್ತನಂತೆ ಕಂಡರೆ ಈ ದೊರೆ ಅರ್ಥಹೀನ ಜೀವನದ ದಾರಿಹಿಡಿದವನಂತೆ ಕಾಣುತ್ತಾನೆ. ಇವೆಲ್ಲವೂ ಒಬ್ಬ ಕಲಾವಿದ ತನ್ನ ಒಳನೋಟದಲ್ಲಿ ಕಂಡುಕೊಂಡ ಅಭಿವ್ಯಕ್ತಿ.


ನಿಜವಾಗಿ ನಾವು ಕಲೆಯ - ಕಲಾವಿದರ ಕುರಿತಾಗಿ ಅದನ್ನು ನೋಡಲು ಕಲಿತಿಲ್ಲ. ಇದರ ಕುರಿತಾಗಿ ನಮಗೆ ಒಳ್ಳೆಯ ಶಿಕ್ಷಣದ ಅಗತ್ಯವೂ ಇದೆ. ಹೈಸ್ಕೂಲ್ ಮಟ್ಟದಿಂದಲೇ ಲಲಿತಕಲೆಗಳ ಕುರಿತಾಗಿ ತಿಳುವಳಿಕೆ ನೀಡಬೇಕು. ನಮ್ಮ ಬದುಕನ್ನು, ಆಗು ಹೋಗುಗಳನ್ನು ಮತ್ತೆ ಮತ್ತೆ ಅರಿಯಲು ಪ್ರೇರಣೆನೀಡುವ ರೂಪಕಗಳ ಸ್ಪೂರ್ತಿಯೇ ದಕ್ಕದೇ ಮಕ್ಕಿ ಕಾಮಕ್ಕಿ ಜನಸಮುದಾಯವಾಗಿಬಿಡುತ್ತೇವೆ. ಸೃಜನಶೀಲ ಮನಸ್ಸು ತಾನು ಬದುಕುವ, ನಂಬುವ, ಅನುಭವಿಸುವ ಎಲ್ಲವನ್ನೂ ಹೊಸ ಹೊಸ ರೂಪಕಗಳಲ್ಲಿ ಪುನರ್ಸೃಷ್ಟಿಗೊಳಿಸುವಂಥ ಅವಕಾಶ ಬೇಕೇಬೇಕು.


ಲಲಿತಕಲೆಗಳ ನಿಜವಾದ ಶಕ್ತಿಯನ್ನು ನಮ್ಮ ಸಮಾಜ ತನ್ನ ಉನ್ನತಿಗಾಗಿ ಬಳಕೆಮಾಡಿಕೊಳ್ಳುತ್ತಿಲ್ಲ. ಬದಲಿಗೆ ಮಾರ್ಕೆಟ್ ಪ್ರಪಂಚ ತನ್ನ ವಸ್ತುಗಳನ್ನು ಮಾರಾಟಮಾಡಲು ಈ ಅಭಿವ್ಯಕ್ತಿಯ ಕಲಾಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ನಾವು ಹೀಗೆಯೇ ಕಲಾವಿದರನ್ನು ನಮ್ಮ ಮೂಗಿನನೇರಕ್ಕೆ ಬಗ್ಗಿಸಬೇಕೆನ್ನುವ ಪ್ರಯತ್ನದಲ್ಲಿದ್ದರೆ ಅದು ನಿಜವಾದ ಜನಪರವಿಚಾರವಲ್ಲ. ಬದಲಾಗಿ ವ್ಯಾಪಾರಿಕರಣದ ವ್ಯಾಪಕತೆಗೆ ನೀಡುವ ಸಹಕಾರವಾಗುತ್ತದೆ. 



ಕೆ.ಜಿ.ಶ್ರೀಧರ್


ವಾಸ್ತುಶಿಲ್ಪಿ, ತೀರ್ಥಹಳ್ಳಿ
೧೯/೦೩/೨೦೧೦


 


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet