ಎರಡನೇ ದಿನದ ನವರಾತ್ರಿ ಆರಾಧನೆ - ಬ್ರಹ್ಮಚಾರಿಣೀ ದೇವಿ
*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ*
*ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|*
*ನಮಸ್ತೇ ಜಗದ್ವಂದ್ಯ ಪಾದಾರವಿಂದೇ*
*ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ*||
ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ ವಿಶ್ವರೂಪಿಣಿಯೇ, ನಿನಗೆ ನಮಸ್ಕರಿಸುತ್ತೇನೆ. ಜಗದ್ವಂದ್ಯೆಳಾದ ನೀನು ಶ್ರೇಷ್ಠಳಾಗಿರುವೆ. ಎಲ್ಲರಿಂದಲೂ ನಮಸ್ಕರಿಸಲ್ಪಡುವ ಪಾದಕಮಲಗಳನ್ನು ಹೊಂದಿದವಳು. ಜಗತ್ತಿನ ರಕ್ಷಕಳು. ಬರುವ ಎಲ್ಲಾ ದುರಂತಗಳನ್ನು ದೂರಮಾಡಿ ರಕ್ಷಿಸು ಮಹಾತಾಯೇ.
ಸೃಷ್ಟಿ -ಸ್ಥಿತಿ -ಲಯಗಳನ್ನು ಮಾಡಬಲ್ಲ ಶಕ್ತಿ ಸ್ವರೂಪಳು, ಸನಾತಳು, ತ್ರಿಗುಣಗಳಿಗೆ ಆಶ್ರಯದಾತಳು, ತ್ರಿಗುಣಮಯಳು, ನಾರಾಯಿಣಿ ನಿನಗೆ ನಮಸ್ಕರಿಸುವೆನು.
*ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿ ಭೂತೇ ಸನಾತಿನಿ|*
*ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತುತೇ||*
ನವದುರ್ಗೆಯ ಎರಡನೇ ದಿನದ ರೂಪವೇ ‘ಬ್ರಹ್ಮಚಾರಿಣೀ ದೇವಿ’. ದೈವಿಕ ಅಂಶವನ್ನು ಮೈಗೂಡಿಸಿಕೊಂಡು, ಶಕ್ತಿ ಸ್ವರೂಪಿಣಿಯಾಗಿ, ಶುದ್ಧಳಾಗಿ, ಶ್ವೇತವಸ್ತ್ರಧಾರಿಣಿಯಾಗಿ, ಗುಲಾಬಿ ಹೂವು, ಜಪಮಾಲೆ ಮತ್ತು ನೀರಿನಿಂದ ತುಂಬಿದ ಕಮಂಡಲವನ್ನು ಕರಗಳಲ್ಲಿ ಹಿಡಿದು ಶೋಭಿಸುತ್ತಿರುವಳು. ಶಾಂತಿ, ಸಮೃದ್ಧಿಯ ಅಧಿದೇವತೆಯಾಗಿ ಭಕುತವೃಂದವ ಸಲಹುವ ಮಾತೆ. ತನ್ನನ್ನೇ ನಂಬಿ ಬಂದವರಿಗೆ ಅಭಯವನ್ನು ನೀಡಿ ಹರಸುವಳು. ನಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸವನ್ನು ಮೂಡಿಸಿ, ಮನಸ್ಸಿನ ಪ್ರಶಾಂತತೆಗೆ ದಾರಿಯನ್ನು ತೋರಿಸುವಳು ಮಾತೆ.
ಹಿಮವಂತನ ಪುತ್ರಿ ಕಠಿಣ ತಪಸ್ಸನ್ನು ಮಾಡಿದ ಕಾರಣ ‘ತಪಶ್ಚಾರಿಣೀ’- ಅರ್ಥಾತ್ ‘ಬ್ರಹ್ಮಚಾರಿಣೀ’ ಎಂದು ಕರೆಯಲ್ಪಟ್ಟಳು. ಕೇವಲ ಪರ್ಣ ಎಲೆಗಳನ್ನು ಆಹಾರವಾಗಿ ಸ್ವೀಕರಿಸಿ ‘ಅಪರ್ಣಾ’ ಎಂದೂ ನಾಮಾಂಕಿತಗೊಂಡಳಂತೆ.
ಕಾಠಿಣ್ಯತೆಯಪ್ರತಿರೂಪ ಈಕೆ.ಯಾವುದೇ ಕ್ಲಿಷ್ಟ ಕರವಾದ ಸಮಸ್ಯೆಗಳಿಗೆ ಮೋಕ್ಷವನ್ನು ಕಾಣಿಸುವ ತಾಯಿ.ತನ್ನ ಭಕ್ತ ಸಂಕುಲಕ್ಕೆ ಸಂತಸವನ್ನು ನೀಡುವವಳು ಮಹಾಮಾತೆ. ನೆಮ್ಮದಿ, ಶಾಂತಿ, ಕರುಣಿಸುವ ತಾಯಿ. ಜ್ಯೋತಿರ್ಮಯವಾದ ಮತ್ತು ಭವ್ಯವಾದ ರೂಪಗುಣ ಸಂಪನ್ನಳೀಕೆ. ತಾಯಿಯ ಕಠಿಣ, ಏಕಾಗ್ರತೆ, ವೈರಾಗ್ಯ, ಪಡೆದೇ ತೀರಬೇಕೆಂಬ ಹಠ, ಹಂಬಲ ಎಲ್ದಕ್ಕೂ ಒಲಿದವ ಆ ಪರಮೇಶ್ವರನಂತೆ. ಬ್ರಹ್ಮ ಜ್ಞಾನ ಸಿದ್ಧಿಸಲು ಕಾಠಿಣ್ಯತೆ ಬೇಕು. ಯೋಗಿಗಳು, ಋಷಿಮುನಿಗಳು ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸುವಾಗ ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಾರಂತೆ.
ಈ ದಿನದ ಪೂಜೆ, ನಿಷ್ಠೆಗಳು ತಪಸ್ಸಿಗೆ ಸಮ. ಮಾಂಗಲ್ಯ ಭಾಗ್ಯವನ್ನು ಕರುಣಿಸುವ ಮಾತೆ. ನಮಗಿರುವ ಎಲ್ಲಾ ಎಡರುತೊಡರುಗಳನ್ನು ದೂರೀಕರಿಸಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ. ಲೋಕಕ್ಕೆ ಆವರಿಸಿದ ಎಲ್ಲಾ ಕಷ್ಟಗಳು ತೊಲಗಿ ಕ್ಷೇಮವುಂಟಾಗಲಿ.
(ಆಕರಗ್ರಂಥ:ಪುರಾಣ ಮಾಲಿಕಾ)
ಸಂಗ್ರಹ: ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ