ಎರಡು ಗಜಲ್ ಗಳು

ಎರಡು ಗಜಲ್ ಗಳು

ಬರಹ

ಗಜಲ್ ೧
ಬದುಕು ಕತ್ತಲಲ್ಲಿದೆ ನಿನ್ನ ಕಣ್ಣ ಬೆಳಕನ್ನಾದರೂ ನೀಡಬಾರದೆ
ಒಡಲ ತುಂಬ ನೋವಿದೆ ನಿನ್ನ ತುಟಿಯ ಬಿಸುಪನ್ನಾದರೂ ನೀಡಬಾರದೆ

ಮೈಯ ಕಸುವನ್ನೆಲ್ಲ ಬಳಸಿ ತಲೆಯೆತ್ತಿ ದೀಪದಂತೆ ಉರಿಯುತಿಹೆ ನಾನು
ಸುಳಿಗಾಳಿ ಬೀಸಿ ಆರುವ ಮುನ್ನ ಕೈತಡೆಯನ್ನಾದರೂ ನೀಡಬಾರದೆ

ಹಕ್ಕಿಕೊರಳ ಹಿಸುಕಿ ಕೇಳಲು ಅನುಗಾಲ ಯತ್ನಿಸುತಿದೆ ಜಗವು
ಹರಣಪಟವು ಹಾರಿಹೋಗುವ ಮುನ್ನ ಉಸಿರನ್ನಾದರೂ ನೀಡಬಾರದೆ

ಸುರಿಯುತಿಹ ಕಂಬನಿಯೆಲ್ಲ ಹೇಳಲಾಗದೆ, ತಾಳಲಾಗದೆ ದು:ಖಿಸುತ್ತಿದೆ
ಎದೆ ಜಲಧಿ ಬರಿದಾಗುವ ಮುನ್ನ ಮಧುಪಾತ್ರೆಯನ್ನಾದರೂ ನೀಡಬಾರದೆ

ಜೀವನದ ಚಿಟ್ಟೆ ಬಾನಂಗಳಕೆ ಹಾರಲು ನಿನ್ನನೇ ನೋಡುತ ಕಾದಿದೆ
ನಭಕೆ ಚಿಮ್ಮುವ ಮುನ್ನ ಅನುರಾಗದ ರಂಗನ್ನಾದರೂ ನೀಡಬಾರದೆ

ಗಜಲ್ ೨
ಪಿಸುಮಾತಿನಲಿ ಒಲವನೆಲ್ಲವ ಸುರುವಿ ಹೋದೆಯಲ್ಲ
ಸವಿನೆನಪುಗಳನೊಂದೆ ಚೆಲ್ಲಿ ಮೊಗದಿರುವಿ ಹೋದೆಯಲ್ಲ

ಸುಳಿಗಾಳಿ ಮಿಸುಕಾಡಿ ಮನವ ಕೊರೆಯಿತು
ಹಸಿರು, ಹೂಮೆತ್ತೆ, ಸಂಜೆಗೆಂಪ ಅರಿಯದೆ ಹೋದೆಯಲ್ಲ

ನೀಲಧಿಯ ಚಂದ್ರ, ತೇಲುತಿಹ ಚಿಕ್ಕೆಗಳು
ಧೇನಿಸುವ ನನ್ನ ಕಂಗಳಿಗೆ ಏನೊಂದನೂ ತಿಳಿಸದೆ ಹೋದೆಯಲ್ಲ

ಬಿಮ್ಮೆಂದಿಹ ಮನಸು, ರೋದಿಸುತಿವೆ ಕನಸು
ಎವೆಯಿಂದ ಜಾರುವ ಕಂಬನಿಗೆ ಪ್ರೀತಿ ತೋರದೆ ಹೋದೆಯಲ್ಲ

ಉರಿದುಹೋಗಲಿ ಗ್ರಹ, ತಾರೆ, ಮೇರೆಗಳು
ಮರಳಿ ಬರುವೆ ಕಾದಿರು ಎಂಬ ನುಡಿಯನೂ ಉಸಿರದೆ ಹೋದೆಯಲ್ಲ
-ಸಿದ್ಧರಾಮ ಹಿರೇಮಠ, ಕೂಡ್ಲಿಗಿ.