ಎರಡು ಗಜಲ್ ಗಳು

ಎರಡು ಗಜಲ್ ಗಳು

ಕವನ

ಗಜಲ್ ೧

ಬೀಸುವ ಗಾಳಿಗೆ ತೂಗುತ ಲತೆಗಳು

ಚೆಲುವ ಬೀರಿದೆ ಗೆಳೆಯ|

ಹರಿವ ನೀರದು ರಾಗವ ಹಾಡುತಲಿ

ಒಲವ ತೋರಿದೆ ಗೆಳೆಯ||

 

ಕನಸು ಕಾಣುವ ಲೋಕದಿ ನಡೆಯುತ

ಬರುವ ಮೋಹಕ ಕಿನ್ನರಿ |

ಮೊಗದಿ ಮಾಸದ ನಗುವ ಚೆಲ್ಲುತಲಿ

ಗೆಲುವ ಸಾರಿದೆ ಗೆಳೆಯ||

 

ಗಂಧರ್ವ ಗಾಯನ ಸುಶ್ರಾವ್ಯ ಇಂಚರದಿ

ಗೀತೆಯ ಆಲಿಸಿ ಹೊರಟೆ|

ರಾಧೆಯು ಗೋಪಿಯ ಕಾಯುವ ತೆರದಲಿ

ಮಿಲನ ಕೋರಿದೆ ಗೆಳೆಯ||

 

ಹೃದಯ ಮಿಡಿತ ನಲ್ಲನ ಧ್ಯಾನಿಸುತ

ಪ್ರೇಮವ ಮೋಹಿಸಿ ಪಡೆದೆ|

ಮದನ ಮೋಹನ ಸುಂದರ ವಲ್ಲಭನ

ಛಲವ ಮೀರಿದೆ ಗೆಳೆಯ||

 

ಕಂಗಳ ಆಳದಿ ತುಂಬಿದೆ ರೂಪವದು

ನೋಡುತ ಮೋದದಿ ಷೋಡಸಿ|

ನೂತನ ಭಾವದ ಕಬ್ಬಿಗ ಅಭಿನವ

ನಿಲುವು ಸೇರಿದೆ ಗೆಳೆಯ||

-ಶಂಕರಾನಂದ ಹೆಬ್ಬಾಳ 

************

ಗಜಲ್ ೨

ಮಲ್ಲೆಯ ಹಾರವ ಕಟ್ಟುವ ಕೆಲಸದಿ

ನಿರತಳಾದಳು ಮಲ್ಲಿ

ನಲ್ಲನ ಬರುವಿಕೆ ತಂದಿದೆ ಮನದಲಿ

ಹರ್ಷಿತಳಾದಳು ಮಲ್ಲಿ||

 

ಘಮಘಮ ಸುಮವು ವನದಲಿ ಅರಳುತ

ಕಣ್ಮನ ಸೆಳೆಯುತಿವೆ

ಸರಿಸಮ ಬಾಳಲು ದೇಗುಲ ಮಂದಿರದಿ

ತಲ್ಲೀನಳಾದಳು ಮಲ್ಲಿ||

 

ನೀಲಿನಭದಲಿ ತಾರೆ ಚಂದಿರ ನಗುವಿನ

ಔತಣ ಕೂಟವದು

ಲಾಲಿ ಹಾಡಿನ ವಿಸ್ತೃತ ವಿಮರ್ಶೆಯಲಿ

ಬಂಧಿಯಾದಳು ಮಲ್ಲಿ||

 

ಪಂಡಿತ ಪಾಮರ ನಡುವೆಯೆ ಸಂಧಿಸಿ

ಕೂಡುತ ಚರ್ಚೆಯಲಿ

ಖಂಡಿತ ಕಥೆಯಲಿ ಗೀತೆಯ ಪಾಡುತ

ಮೌನಿಯಾದಳು ಮಲ್ಲಿ||

 

ಅಭಿಜ್ಞ ಸಾಗರದಿ ಸುಂದರ ಕನಸಿನ

ಮಿಲನದ ಸಂಗಮವದು

ದೈವಜ್ಞನ ದರ್ಶನ ಪಡೆಯಲು ಕಾಣುತ

ಮಾಯವಾದಳು ಮಲ್ಲಿ||

-ಅಭಿಜ್ಞಾ ಪಿ ಎಮ್ ಗೌಡ

ಚಿತ್ರ್