ಎರಡು ಗಝಲ್ ಗಳು
ಗಝಲ್ ೧
ದತ್ತಪದ:ಪಯಣ
ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು
ಬದುಕೆಲ್ಲಿಗೋ ನನಸಿಗೂ ಅರಿಯದು ಏಕಾಂಗಿ ನಾನು
ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ
ದ್ವೇಷದ ಅಲೆಗಳ ಹೊಡೆತವದು ಏಕಾಂಗಿ ನಾನು
ತಂಪಿನ ಆತ್ಮದಿ ಬೆಂಕಿಯ ಜ್ವಾಲೆ ಮೇಲೇಳುತಿದೆ
ಹೃದಯದ ಸವಿಯದು ತೀರಿತದು ಏಕಾಂಗಿ ನಾನು
ಮೌನದ ಮಾತಿಗೆ ಕುಸುಮವು ಇಂದು ಅರಳಲೇಯಿಲ್ಲ
ಕ್ರಾಂತಿಯ ಮತ್ಸರ ಆಟದ ಕರೆಯದು ಏಕಾಂಗಿ ನಾನು
ರತುನಳ ಬಾಳಲಿ ಸ್ಪಂದನೆ ಸಿಗದೇ ಹೋಯಿತಿಂದು
ಹಾದಿಯ ಮಧ್ಯದಿ ಮುಗಿದಿಹ ಚೆಲುವಿದು ಏಕಾಂಗಿ ನಾನು
-ರತ್ನಾ ಭಟ್ ತಲಂಜೇರಿ
ಗಝಲ್ ೨
ಯಾರು ಬೆಳಗಿದ ನೋಟ ನೀನಾಗಿಹುದೇ ಚೆಲುವಾ
ಯಾವ ರಾಗದ ಮಾಟ ತನುವಾಗಿಹುದೇ ಚೆಲುವಾ
ಒಲವಿರದ ಸವಿಯೊಳಗೆ ಹುಸಿ ಕೋಪ ಇಹುದಿಂದು
ಭಾವನೆಯ ತೀರದ ಆಚೆ ಮನಸಾಗಿಹುದೇ ಚೆಲುವಾ
ಕೆಂಪನೆಯ ಬಾನಿಗೆ ಸುತ್ತಲು ರಂಗೇರಿದೇ ಶರಧಿಯು
ಮಾಧುರ್ಯ ನನಸಿನ ಸೆರೆಗೆ ಬಿಸಿಲಾಗಿಹುದೇ ಚೆಲುವಾ
ಹಿಡಿದಿರುವ ಕೈಯನು ಬಿಡಿಸಿ ಕ್ಷಣದಲ್ಲಿ ದೂರವಾದೆ
ಬಾಳ ಬುತ್ತಿಯೊಳಗೆ ಜೀವ ಹಸನಾಗಿಹುದೇ ಚೆಲುವಾ
ನನಸಿರದ ದಾರಿಯಲಿ ಈಶ ನಡೆಯುತ್ತಲೇ ಇಹನು
ತಲ್ಲಣದ ಜೊತೆಗೆ ಬದುಕು ಬರಡಾಗಿಹುದೇ ಚೆಲುವಾ
-ಹಾ ಮ ಸತೀಶ