ಎರಡು ಗಝಲ್ ಗಳು…

ಎರಡು ಗಝಲ್ ಗಳು…

ಕವನ

ಗಝಲ್ ೧

ಪದಗಳ ನುಂಗಿ ನೀರು ಕುಡಿಯುವರು ಜ್ಞಾನರೇ

ಬೇಟೆ ಕಾಣದೆ ಗುರಿ ಇಡುವವರು ಜ್ಞಾನರೇ

 

ಪಾಂಡಿತ್ಯವಿಲ್ಲದೇ ವಿಮರ್ಶೆಯು ಹೇಗದು ಸಾಧ್ಯ

ಅರ್ಥವೇ ಆಗದೆ ವ್ಯರ್ಥ ನುಡಿವವರು  ಜ್ಞಾನರೇ

 

ಸೂರ್ಯ ಕಿರಣಕೆ ಗಾಜಿನ ಚೂರು ಮಿನುಗದೇನು

ಅದನೆತ್ತಿ ಕುಣಿದು ವಜ್ರ ಎನ್ನುವವರು ಜ್ಞಾನರೇ

 

ಪುಸ್ತಕ ಓದು ಮಸ್ತಕಕ್ಕೆ ತುಂಬು ಕವಿಯಾಗು

ಅಡ್ಡಾದಿಡ್ಡಿ ಬರೆದು ಕವಿಯೆನ್ನುವವರು ಜ್ಞಾನರೇ

 

ಸಪ್ತ ಸಾಗರವನ್ನೇ ಈಜಿ ಪಾರಾದವನ ಕರೆದು ಈಶಾ

ಕೆರೆಯನ್ನೊಮ್ಮೆ ಈಜಿ ದಾಟು ಹೇಳುವವರು ಜ್ಞಾನರೇ

***

ಗಝಲ್ ೨

ಮಧು ಬಟ್ಟಲ ಹಿಡಿದು ಕಾದಿರುವೆ ಬಾರೆ

ತಂಪಿನೊಲವ ಮನಕೆ,ಸೋತಿರುವೆ ಬಾರೆ

 

ಬಾನ ತಾರೆಯ ಜೊತೆಗೆ ನನಗೇಕೆ ಸಂಗ

ಬಿನ್ನಾಣದ ನಿನ್ನೊಲವಿಗೆ ಬಂದಿರುವೆ ಬಾರೆ

 

ಮಡಿಲಲ್ಲಿ ತಲೆಯಿಟ್ಟು ಮಲಗಬೇಕನಿಸುತಿದೆ

ಮಾತಿನಾ ಉರಿಯಲ್ಲಿ ಬೆಂದಿರುವೆ ಬಾರೆ

 

ಕನಸು ಹೀಗೆಯೇ ಸಾಗಲಾರದು ಚೆಲುವೆ

ಗುರಿ ಅರಿಯದ ದಾರಿಯಲೆ ನಿಂತಿರುವೆ ಬಾರೆ

 

ಸತ್ತಿರುವ ಮರಕ್ಕೆ ಸುತ್ತು ಬರುವರೆ ಈಶಾ

ಕಹಿಯೇಕೆ ,ಸವಿಯನ್ನು ತಂದಿರುವೆ  ಬಾರೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್