ಎರಡು ಗಝಲ್ ಗಳು…
ಗಝಲ್ ೧
ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ
ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ
ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು
ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂಸೆ
ಗೊಂತ್ತಿಪ್ಪವರ ಕಾಲಿಂಗೆ ಮೂಗಿಲಿಯ ಹಾಂಗೇ ವರೆಸುವುದರ ನಿಲ್ಲಿಸಿದರೆ ಒಳ್ಳೆದು
ದಿನ ಕಳೆದಾಂಗೆ ಹೃದಯಲ್ಲಿ ಕೂದೊಂಡಿದ್ದ ಆತ್ಮವೂ ಕೂಗುತ್ತು ಕೂಸೆ
ಸ್ವಂತ ಬುದ್ಧಿಯ ಮುಕ್ಕಿತಿಂಬಾ ಕೆಲಸಕ್ಕೆ ಹೋಗದ್ದೇ ಇನ್ನಾದರೂ ಬದುಕುವುದರ ಕಲಿ
ಎಲ್ಲವೂ ಮುಗಿದ ಕ್ಷಣಲ್ಲಿ ಕಣ್ಣೀರಿಲಿ ಜೀವನ ತೊಳೆದರೆ ಕಚ್ಚುತ್ತು ಕೂಸೆ
ಮನಸ್ಸಿನೊಳಿಪ್ಪ ಪ್ರಾಮಾಣಿಕತೆ ಮೌನದೊಳಗಿನ ಜೀವಂತಿಕೆಲಿ ಸಾಗ್ಯೊಂಡಿರುತ್ತು ಈಶಾ
ಕಾರ್ಮೋಡವು ಕವಿಯದ್ದೇ ಒಳ್ಳೆಯ ತನವು ಉಳಿಯಲಿ ಯಾವತ್ತು ಕೂಸೆ
***
ಗಝಲ್೨
ಇದುವೆ ರಾಗ ಅದುವೆ ತಾಳ ನಿನ್ನ ತರಿಸಿ ಕೊರಗಿದೆ
ಚೈತ್ರದುದಯ ನಂದಿತಿಂದು ಮೌನ ಬರಿಸಿ ಕೊರಗಿದೆ
ದೂರದಾರಿ ಸೇರಿಯಿಂದು ನಮ್ಮನೆಲ್ಲಿ ಸೆಳೆವುದೊ
ಜಲವು ಬತ್ತಿ ಬುವಿಗೆ ತಾಪವನ್ನು ಹೊರಿಸಿ ಕೊರಗಿದೆ
ಮರದ ಎಲೆಯು ಉದುರಿದಾಗ ಸದ್ದುಯೇಕೆ ಆಗಿದೆ
ಬೆಂಕಿ ಹತ್ತಿ ಜ್ವಾಲೆಯೆಳೇ ಹೀಗೆ ಉರಿಸಿ ಕೊರಗಿದೆ
ಹತ್ತು ಹಲವು ಜೀವದೊಲವು ಎತ್ತ ಸತ್ತು ಹೋದವೊ
ಬಯಲ ತುಂಬ ಸುಟ್ಟ ಸಿರಿಗೆ ಛಲವ ಇರಿಸಿ ಕೊರಗಿದೆ
ಬಾನಿನೊಳಗೆ ಚಂದ್ರ ಬರದೆ ದೂರ ಸರಿದ ಈಶನು
ಕನಸಿನಲ್ಲಿ ನನಸು ಇರದೆ ಸವಿಯ ಸರಿಸಿ ಕೊರಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
