ಎರಡು ಗಝಲ್ ಗಳು
ಗಝಲ್ ೧
ಇರಿದ ಮಾತುಗಳ ಮರೆತು ಸನಿಹ ಬರುವೆ ಸ್ವೀಕರಿಸು ಗೆಳೆಯಾ
ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ
ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ
ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ
ಸುಮಧುರ ಭಾವನೆಗಳ ಸರದಾರ ಜೊತೆಯಾಗು ಇಂದು
ಮಾಧುರ್ಯದ ಕನಸನ್ನು ನನಸಾಗಿಸು ಗೆಳೆಯಾ
ಹುಣ್ಣಿಮೆಯ ಬೆಳದಿಂಗಳು ಬೆಳಗುತಿದೆ ನೋಡಿಲ್ಲಿ
ಮೋಹದೊಳಗೆ ನವಿರಾದ ಕಣ್ಣನ್ನು ತಂಪಾಗಿಸು ಗೆಳೆಯಾ
ರತುನಾಳ ಒಲವಿನ ನಿವೇದನೆಯು ನಿತ್ಯ ಸತ್ಯವೆಂದು
ಪತನವಾಗದಂತೆ ಜತನದಿಂದ ಪ್ರೇಮ ಕಾರಂಜಿಯ ಸಿಂಪಡಿಸು ಗೆಳೆಯಾ
-ರತ್ನಾ ಭಟ್ ತಲಂಜೇರಿ
*******
ಗಝಲ್ ೨
ಬದುಕಿನ ದಾರಿಯನು ಸಂಕಷ್ಟದಲಿ ಕಳೆದೆನು ಹನುಮ|
ಬಾಳಿನಲಿ ನೋವುಗಳ ಉಂಡು
ಬೆಳೆದೆನು ಹನುಮ||
ಹೆತ್ತವರ ಒಡಲಿಗೆ ನೆರವಾಗಲು
ದುಡಿಯಲು ನಿಂತೆ|
ದಿನನಿತ್ಯ ಕೊಂಕು ನುಡಿಗಳ
ಕೇಳಿದೆನು ಹನುಮ||
ಬೆಳೆದ ಮಕ್ಕಳ ಪ್ರೀತಿಗೆ
ಕಟ್ಟುಬಿದ್ದಿಹ ಬಂಧ|
ದಳ್ಳುರಿಯು ಚುಚ್ಚಿದರೂ ಸಾಯದೆ ಉಳಿದೆನು ಹನುಮ||
ಗಂಜಿಯ ಹಾಕಲು ಬಿಸಿಲಲಿ
ಬಳಲಿಸುತ್ತ ಕೂಡಿಸಿದ್ದಾರೆ|
ಮೊಮ್ಮಕ್ಕಳ ಅಕ್ಕರೆಯ ಆಳಕ್ಕೆ
ಇಳಿದೆನು ಹನುಮ||
ಸಾರ್ಥಕ ಜೀವನದ ಅರ್ಥವನು
ಹುಚ್ಚಿಯಂತೆ ಹುಡುಕುತ್ತಿದ್ದೆನೆ|
ಅಭಿನವನ ಸ್ಪೂರ್ತಿಯ ನುಡಿಯನ್ನು ಓದಿದೆನು ಹನುಮ||
-ಶಂಕರಾನಂದ ಹೆಬ್ಬಾಳ
