ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್-೧

ಸುಖದ ನೆಲೆಗೆ ಜಾರುವಾಗ ಮುನಿಸು ತರವೇ ಗೆಳೆಯಾ

ಯಶದ ಗೀತೆ ಹಾಡುವಾಗ ಮುನಿಸು ತರವೇ ಗೆಳೆಯಾ

 

ಯೌವನದ ಕಾಲದಲ್ಲಿ ಹಳೆಯ ಕನಸುಗಳೇ ಬೇಕೇನುಯೀಗ

ಚೆಲುವು ಉಕ್ಕಿ ಹರಿಯುವಾಗ ಮುನಿಸು ತರವೇ ಗೆಳೆಯಾ

 

ಚಿಂತೆಯಿರದಿಹ ವಯಸ್ಸಿನಲ್ಲಿ ಪ್ರೇಮವದುವು ತುಂಬಲಿ

ಮಧುರ ಭಾವ ಕಲಿಯುವಾಗ ಮುನಿಸು ತರವೇ ಗೆಳೆಯಾ

 

ಮನದೊಳಗಿನ ಮಾತುಗಳಲಿ ಸವಿಯಾಸರೆ ಕುಣಿಯಲಿ

ಹೃದಯ ಭಾಷೆ ಅರಿಯುವಾಗ ಮುನಿಸು ತರವೇ ಗೆಳೆಯಾ

 

ಈಶನೊಡನೆ ಸಖಿಯು ಇರಲು ಬೆಸುಗೆಯಾಟ ನಡೆಯಲಿ

ಮೌನ ಮುರಿದು ಹೊರಳುವಾಗ ಮುನಿಸು ತರವೇ ಗೆಳೆಯಾ

***

ಗಝಲ್-೨

ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ

ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ

 

ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು

ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ

 

ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು ಸಾಗಿದೆ

ಮಧುರ ತನನ ಸಮರ ಎನಿಪ ಸೃಷ್ಟಿ ಒಲವೆ ಗೆಳತಿಯೆ

 

ಜೀವ ಭಾವ ಜಗದ ಸುತ್ತ ಸುದಿನ ಹರಡಿ ನಲಿದಿದೆ

ನನಸು ಕಾಂಬ ಸವಿಯ ಕಿರಣ ಸುತ್ತ ಸೆಳೆದೆ ಗೆಳತಿಯೆ

 

ಈಶ ಬರುತ ಕೈಯ ಹಿಡಿದ ಸಖಿಯ ನೋಡು ನಾಚಿದೆ

ತಾರೆ ಜೊತೆಗೆ ಪೂರ್ಣ ಚಂದ್ರ ಒಲಿದ ಸಖನೆ ಗೆಳತಿಯೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್