ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

೧.

ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ 

ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ

 

ತನುವಿನಾಳದೊಳು ನೆನಪುಗಳು ಇರುವುದೇಕೆ

ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ

 

ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು

ನಲುಮೆಯು ಮೂಡುತ್ತ  ಸವಿಯಿಂದ ತಿಳಿಸಿದೆ

 

ಶಯನಗೃಹ ಒದ್ದಾಡುವುದನು ಕಂಡು ಮರುಗಿದೆ

ಮೆತ್ತಗಿರುವಂತ ತನುವಿಗಿಂದು ಕನಸಿಂದ ತಿಳಿಸಿದೆ

 

ನೋವು ಮಾಯುವ ಮುನ್ನವೆ ಬರುವನೇ ಈಶಾ

ಸುರಿವಂತಹ ಮದುವಿಗಿಂದು ತನುವಿಂದ ತಿಳಿಸಿದೆ

***

೨.

ಯಾವತ್ತೂ ನಿನ್ನ ನೆನಪು ಜೊತೆಯಾಗುತಿದೆ ಗೆಳತಿ

ಹೀಗೆಯೆ ಎಂದೂ ರಾತ್ರಿಯಲಿ ನೆನಪಾಗುತಿದೆ ಗೆಳತಿ

 

ಸಿಟ್ಟಲಿ ಏನೋ ಹೇಳಿದೆಯೆಂದು ನೀ ದೂರವಾದೆಯೇಕೆ

ಆ ದಿನದ ಅಪ್ಪುಗೆಯು ಈ ದಿನಕೆ ಹಿತವಾಗುತಿದೆ ಗೆಳತಿ

 

ಮೆತ್ತನೆಯ ಹಾಸಿಗೆಯು ಮುಳ್ಳ ಮೊನೆಯೂ ಆಯ್ತೆನಗೆ

ಪ್ರೀತಿಯ ದೀಪವು ಆರಿ ಬದುಕು ಕತ್ತಲೆಯಾಗುತಿದೆ ಗೆಳತಿ

 

ತುರುಬಲಿಹ ಮಲ್ಲಿಗೆ ಗಮಲು ನಾಸಿಕಕೆ ಇಲ್ಲದೇ ಹೋಯ್ತೆ

ಮೋಹವೇ ತುಂಬುತಲಿಂದು ತನುವು ಬೆತ್ತಲಾಗುತಿದೆ ಗೆಳತಿ

 

ಮದುವೆ ದಿನವು ಮದುಮಗನಾಗಿ ಕಂಗೊಳಿಸಿಹನೇ ಈಶಾ

ದೂರದ ಬೆಟ್ಟ ನುಣ್ಣಗೆನುವ ಮಾತು ಸತ್ಯವಾಗುತಿದೆ ಗೆಳತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್