ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ

ಬೆತ್ತಲಾಗಿ  ನೋಡಿದವನು ಸ್ವಾರ್ಥವಿರುವ ಗಂಡನೆ

 

ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ

ಭ್ರಾಂತಿತುಂಬಿ  ಪ್ರೀತಿ ಕೊಂದ ಲೋಭವಿರುವ ಗಂಡನೆ

 

ಅಪ್ಪ ಮದುವೆ ಮಾಡಿ ಬಿಟ್ಟ ಮತ್ತೆಯಿತ್ತ ಸುಳಿಯದೆ

ಉಬ್ಬು ತಗ್ಗು ಎಲ್ಲ ಹೋಗೆ ಶೀತವಿರುವ ಗಂಡನೆ

 

ಬೆತ್ತ ಹಿಡಿದ ಕೈಗಳಿಂದ ಒಲವು ಬರದು ಎಂದಿಗು

ಕದ್ದು ಬೆಕ್ಕು ಹಾಲು ಕುಡಿಯೆ ಕಾಯುತಿರುವ ಗಂಡನೆ

 

ಜೀತ ಮುಕ್ತ ಎನುತ ನಡೆದೆ ನೀತಿ ಇರದ ಈಶನೆ

ಚಿತ್ತ ಕಲಕಿ ಹೋದ ಗಳಿಗೆ ಕಾರುತಿರುವ ಗಂಡನೆ

***

ಗಝಲ್ ೨

ಹೊಟ್ಟೆ ಹಸಿವು ಎನುತ ಹೊಲಸು ತಿನ್ನಲಾದೀತೆ

ಕಟ್ಟಿಕೊಂಡ ಮೇಲೆ ಅವಳ ಕನಸು ತಿನ್ನಲಾದೀತೆ

 

ಬೇವ ಸನಿಹ ಬೆಲ್ಲವಿಹುದೆ ತಿಳಿದು ಮಾತನಾಡಿರಿ

ಕದನ ರೂಪ ಮನೆಯಲೆಲ್ಲ ಹಳಸು ತಿನ್ನಲಾದೀತೆ

 

ಉಪ್ಪು ಕಾರ ಹುಳಿಯನೆಲ್ಲ ತಿಂದ ದೇಹ ಬಾಡಿದೆ

ಸೊಕ್ಕ ಬೇಡ ಎನುತ ನಾವೆ ಮೆಣಸು ತಿನ್ನಲಾದೀತೆ

 

ನೀತಿ ನಿಯಮ ಎರಡು ಇಲ್ಲ ದ್ವೇಷ ಹರಡಿ ಸಾಗಿದೆ

ಕಾಯಕದಲಿ ದೃಷ್ಟಿ ಸೊರಗೆ ಹಲಸು ತಿನ್ನಲಾದೀತೆ

 

ನಿಂತ ನೀರಿನಲ್ಲಿ ಹುಳದ ಬದುಕು ಹೀಗೆ ಈಶನೆ

ಭಾವವಿರದ ಬದುಕಿನಲ್ಲಿ ನನಸು ತಿನ್ನಲಾದೀತೆ

-ಹಾ ಮ ಸತೀಶ ಬೆಂಗಳೂರು

ಚಿತ್ರ್