ಎರಡು ಗಝಲ್ ಗಳು.....
ಗಝಲ್ ೧
ಮರುಗುತಿದೆ ನೋಡಿಲ್ಲಿ ನಮ್ಮ ಕನ್ನಡ ಸ್ಥಿತಿಯು
ಪರ ಭಾಷೆ ಸಂಸ್ಕೃತಿಗೆ ಛಾಪೆ ಹಾಸಿದ ರೀತಿಯು
ರಾಜಧಾನಿಯಲಿ ಭಾಷಾ ಪ್ರೇಮವು ಎಲ್ಲಿಹುದೊ
ಕೇಳು ಪಂಡಿತನ ರೀತಿಯಲ್ಲೇ ಕನ್ನಡದ ಗತಿಯು
ಗಡಿನಾಡಿನಲ್ಲಿ ಹೊರನಾಡಿನ ಭಾಷೆಗೇ ಮಾನ್ಯತೆಯೆ
ಭಾಷೆಯ ರಕ್ಷಿಪರಿಗೆ ಎಂದಿಗೆ ಬರುವುದೊ ಮತಿಯು
ಆಂಗ್ಲ ಮಾಧ್ಯಮದ ಜನರ ಹುಚ್ಚಿಗೆ ಕನ್ನಡ ನಿರ್ನಾಮ
ಹಸುರಿನ ನೆಲದಲ್ಲಿ ನಮ್ಮ ನುಡಿಗೆ ಇಹುದು ಮಿತಿಯು
ಧ್ವನಿಯ ಎತ್ತುವರನ್ನು ಬಂಧನದಲ್ಲಿ ಇರಿಸುವರು ಈಶಾ
ಬೆಂಗಳೂರಿನಲ್ಲಿ ಆಗುತಿದೆ ಕನ್ನಡಿಗನಿಗೆ ನಿತ್ಯ ತಿಥಿಯು
***
ಗಝಲ್- ೨
ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದೆ ಹೋಯಿತು
ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದೆ ಹೋಯಿತು
ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ
ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದೆ ಹೋಯಿತು
ಬೆಟ್ಟ ಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲೆದಿದೆ
ತಾಳ ತಪ್ಪಿ ಬೀಳುವಾಗ ಅಲ್ಲೆ ಮಡಿದೆ ಹೋಯಿತು
ದ್ವೇಷವಿರುವ ಸುಳಿಯ ಒಳಗೆ ತನುವು ಸಿಲುಕಿ ನರಳಿದೆ
ಮನದ ಜೊತೆಗೆ ರೋಷವಿರಲು ಚೆಲುವ ಕಡಿದೆ ಹೋಯಿತು
ಮಧ್ಯರಾತ್ರಿ ಕನಸಿನೊಳಗೆ ಪ್ರೀತಿ ಉಸಿರ ನನಸಿದೆ
ದ್ವೇಷ ವೇಷ ಕಳಚಿ ಇಡಲು ಮೋಹ ಸವಿದೆ ಹೋಯಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ