ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ದಡ್ಡಿ ನೀನು ನನ್ನ ಒಲುಮೆಯೊಳಿಂದು ಬೆರೆಯದೆ ಹೋದೆ

ಕಡ್ಡಿ ತುಂಡಾದಂತೆ ಮಾತನಾಡಿ ಸವಿಯ ಅರಿಯದೆ ಹೋದೆ

 

ಜಪತಪವ ಮಾಡುವುದರಿಂದ ಪ್ರೇಮದೊರತೆ ಹುಟ್ಟುತ್ತದೆಯೆ

ಬಾಡಿರುವ ಮುಖ ಕಮಲದ ಒಲುಮೆಯ ಕರೆಯದೆ ಹೋದೆ

 

ಹುಟ್ಟು ಸಾವುಗಳ ನಡುವಿನ ಜೀವನ ಚರಿತ್ರೆಯೇ ಸೋಜಿಗವು

ಮೆಚ್ಚುವ ರಮಣಿಯ ವಿಶ್ವಾಸದ ಮೆಟ್ಟಿಲನು ಮರೆಯದೆ ಹೋದೆ

 

ಗತ್ತು ಗೈರತ್ತಿನ ನಡುವೆ ಬೆಳೆದವರ ಜೊತೆ ಸೇರುವುದು ಅಪಾಯವೆ

ಹತ್ತಿರವಾದವರ ಕೈಹಿಡಿದು ಹೋದರೂ ನಾನು ಮೆರೆಯದೆ ಹೋದೆ

 

ಕೆಲವು ವ್ಯಂಜನಕ್ಕೆ ಒಳ್ಳೆಯದನ್ನು ಸೇರಿಸಬೇಕೆಂಬುದು ಇದೆ ಈಶಾ

ಹತ್ತಾರು ತಪ್ಪುಗಳ ಮಾಡಿದರೂ ಪ್ರೀತಿಸಲು ದೊರೆಯದೆ ಹೋದೆ

***

ಗಝಲ್ ೨

ತನಗೆ ತಾನೇ ಬೇಲಿಯಾಗಿರುವವ ಕವಿಯಾಗಲಾರ

ತನ್ನಷ್ಟಕ್ಕೇ ತಾನು ಮೌನವಾಗಿರುವವ ಕವಿಯಾಗಲಾರ

 

ಸುಮ್ಮನೆ ಬೆನ್ನು ತಟ್ಟುವವರ ನಂಬುವುದಾದರೂ ಹೇಗೆ

ನನಸಿನಲ್ಲೇ ಸದಾ ಸವಿಯಾಗಿರುವವ ಕವಿಯಾಗಲಾರ

 

ಪುಟ್ಟ ಮಕ್ಕಳ ವೇದನೆಯನ್ನು ನೋಡಿ ಮನ ಕರಗಲಿಲ್ಲವೆ

ಸ್ವಾರ್ಥ ತುಂಬಿದ ಮೂಟೆಯಾಗಿರುವವ ಕವಿಯಾಗಲಾರ

 

ಬೆನ್ನು ಬಿಡದಿರುವ ಬೇತಾಳನಂತೆ ಈ ನೆಲದಿ ಇರಬಾರದು 

ಸಮಾಜದ ದೃಷ್ಟಿಗೆ ಹೊರೆಯಾಗಿರುವವ ಕವಿಯಾಗಲಾರ

 

ಸಂಘರ್ಷದ ಕಿಡಿಯನ್ನು ಯಾವತ್ತೂ ಹೊತ್ತಿಸಬೇಡ ಈಶಾ

ಕಾಮವೇ ಹೊದ್ದು ಕಲೆಯಾಗಿರುವವ ಕವಿಯಾಗಲಾರ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್