ಎರಡು ಗಝಲ್ ಗಳು.....
ಗಝಲ್ ೧
ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ
ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ
ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ
ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ
ಹೊರಜಗತ್ತಿನ ಶಬ್ದಗಳು ನನ್ನ ತಲುಪುವುದೇ ಇಲ್ಲ
ಕಿವಿ ಚೆನ್ನಾಗಿಯೆ ಇದ್ದರೂ ಶ್ರವಣ ಕಿವುಡಾಗಿದೆ ಸಖಿ
ಮೊಸಗಾರರಿಂದ ತಪ್ಪಿಸಿಕೊಳ್ಳಲು ಒದ್ದಾಡುತಿಹೆನು
ನಿನ್ನೆಡೆಗೂ ತಲುಪಲಾಗಿಲ್ಲ ಕಾಲು ಕುಂಟಾಗಿದೆ ಸಖಿ
ಮಾತುಕತೆಗಳೆಲ್ಲಾ ಇಲ್ಲದೆ ಈಗ ಬರೀ ನೆನಪು ಈಶಾ
ಗೋರಿಯು ಕಾಯುತ್ತಲಿದೆ ಮಾತು ನಿಂತಾಗಿದೆ ಸಖಿ
***
ಗಝಲ್ ೨
ತೂರಿ ನಡೆ ಒಲವ ಕಡೆ ತನುವೆಲೆಲ್ಲ ಕಾಂತಿಯಂತೆ ನಡೆ
ಹಳತು ಬಿಡೆ ಜಯವ ಪಡೆ ಸುತ್ತಲೆಲ್ಲ ಕೀರ್ತಿಯಂತೆ ನಡೆ
ರೋಗ ಕಳೆದು ಹೋದ ಗಳಿಗೆ ಕುಶಿಯಿಲ್ಲವೆ ನಿನಗೆ
ಹಲವು ವಾದ ಗೈದ ನಡುವೆ ಬೆಳಕಲೆಲ್ಲ ಒಲವಿನಂತೆ ನಡೆ
ಚೆಲುವು ಮೂಡೆ ಹೊಳೆದ ರಶ್ಮಿ ಹೋಯಿತೆಲ್ಲೊ ಕಾಣೆ
ಭವದ ಬೆಸುಗೆ ಆದ ಸಮಯ ನನಸಲೆಲ್ಲ ಹೂವಿನಂತೆ ನಡೆ
ಹರಿದ ಬಟ್ಟೆ ಸೊಟ್ಟ ಮೂತಿ ಎರಡು ಬೇಕೆ ಬಾಳಲಿ
ಕಂಡು ಕಾಣದಂತೆ ಇರಲು ಪಠಿಸಲೆಲ್ಲ ಶಾಂತಿಯಂತೆ ನಡೆ
ಕ್ರಾಂತಿ ಮಂತ್ರ ಜಪಿಸಿ ನಡೆಯೆ ಯೋಗ್ಯನಾರು ಈಶಾ
ಭಾವವಿರುವ ಜೀವನದಲಿ ಹೋದಲೆಲ್ಲ ಮೌನಿಯಂತೆ ನಡೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ