ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ನನ್ನ ಸುಳ್ಳ ಕೊರಮನೆಂದು ಹೇಳುವವರು ಹೇಳಲಿ

ಒಳ್ಳೆಯ ಜನರ ನಡುವೆಯೇ ತೆಗಳುವವರು ಹೇಳಲಿ

 

ಸಾಹಿತ್ಯಕ್ಕಿಂತ ಅನಾಚರಗಳೇ ಮುಖ್ಯವೆನಿಸಿದೆ ಏಕೆ

ಪ್ರಾಣಿ ಜನ್ಮಕ್ಕಿಂತಲೂ ಕಡೆಯಾಗಿರುವವರು ಹೇಳಲಿ

 

ಸಂಸ್ಕೃತಿಗಳ ಪರಿಚಯವಿಲ್ಲದೇ ಪಂಡಿತರಾಗಿದ್ದಾರೆ 

ಕ್ಷುಲ್ಲಕ ಕಾರಣಗಳಿಗೆ ಮಣೆಯಾಗಿರುವವರು ಹೇಳಲಿ

 

ನಿಂತ ನೀರಲ್ಲೇ ಭಾಷೆ ಅರಳಿ ಇರಲೆಂದರೆ ಸರಿಯೇನು

ಅಪ್ಪ ನೆಟ್ಟ ಆಲದ ಮರಕ್ಕೇ ಸುತ್ತು ಬರುವವರು ಹೇಳಲಿ

 

ಉಸಿರಿಲ್ಲದವರ ನಡುವೆ ಜೀವಂತ ಶವವಾಗಿರುವೆ ಈಶಾ

ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವವರು ಹೇಳಲಿ

***

ಗಝಲ್ ೨

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಸಖಿ

ಮರಳಿ ಬಾರೆ ತುಟಿಯ ಜೇನ ಸವಿದು ನಿಲ್ಲೆ ಮನದಲಿ ಸಖಿ

 

ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ಸಖಿ

ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ ಸಖಿ

 

ಮೆಲುಕು ಹಾಕೆ ತನುವ ಬೆಳಗೆ ಸಪ್ತ ಸೂರ್ಯ ಖುಷಿಯಲಿ ಸಖಿ

ಕುಲುಕಿ ಮೈಯ ಮೋಹ ಮದುವೆ ಸುತ್ತ ಮಧುರ ಒಲವಲಿ ಸಖಿ

 

ತವಕ ಹೀಗೆ ಕ್ಷಣಿಕಯಿರದೆ ಮುತ್ತ ಕೊಡುತ ಬದುಕಲಿ ಸಖಿ

ಕೊಳಕು ಬರದೆ ಪ್ರೀತಿ ಚಿಗುರೆ ಮೆರೆಯುತಿಹುದು ಬಾಳಲಿ ಸಖಿ

 

ಹೊತ್ತಿ ಉರಿದು ಕೆಂಡವಾಗೆ ಸಿಕ್ಕು ಇರದೆ ಕನಸಲಿ ಸಖಿ

ಎಲ್ಲ ಮರೆತು ಬಳಿಗೆ ಬರಲು ಗೆಲವು ಸಿಗಲಿ ನನಸಲಿ ಸಖಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್