ಎರಡು ಗಝಲ್ ಗಳು.....
ಗಝಲ್ ೧
ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯೇನು ಗೆಳತಿ
ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯೇನು ಗೆಳತಿ
ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ
ಮೈಮನಗಳ ಮಧುರವಾದ ಭಾವನೆಗಳ ಒಲವಿನೊಳಗೆ ಇರಲಾರೆಯೇನು ಗೆಳತಿ
ಪ್ರೇಮ ಪೂಜಾರಿಯ ಹೃದಯದೊಳಗೆ ಸವಿಯು ಇರುವುದನು ಅನುಭವಿಸಿದೆಯೇನು ಗೆಳತಿ
ಬದುಕೊಳು ಛಲವಿದೆಯೆಂದಾದಲ್ಲಿ ಹೊಂಗನಸುಗಳ ನಡುವೆಯೇ ಅರಳಲಾರೆಯೇನು ಗೆಳತಿ
ಸುಂದರವೆನಿಸುವ ಕೆಂಪಗಿನ ಗುಲಾಬಿಯಲ್ಲಿರುವ ಎಸಳಿನಂತೆ ಶೋಭಿಸಲಾರೆಯೇನು ಗೆಳತಿ
ಮುಳ್ಳುಗಳ ಮನಸ್ಥಿತಿಯ ಕಲ್ಲುಗಳೆಡೆಯಿಂದ ಹೊರಬಂದು ನಡೆಯಲಾರೆಯೇನು ಗೆಳತಿ
ಈಶನ ನನಸಿನ ನೋಟಗಳ ಹೂವಿನ ಮೃದುವಾದ ಬಾಣಗಳಿಗೆ ಮೆಲ್ಲನೆ ನಾಚಿದೆಯೇನು ಗೆಳತಿ
ತುಟಿಯಂಚಿನ ಪ್ರಿಯವಾದ ಮಾತಿನಾಳದ ನಗುವಿನ ಹತ್ತಿರವೇ ಸುಳಿಯಲಾರೆಯೇನು ಗೆಳತಿ
***
ಗಝಲ್ ೨
ಮೋಹವೆಂದರೆ ಅದು ಬರಿದೆ ಕಾಮವಲ್ಲ ಪಾಶ
ವ್ಯಾಮೋಹ ನಮ್ಮೊಡಲ ವ್ಯವಹಾರವಲ್ಲ ಪಾಶ
ನೆರಳಿನ ಜೊತೆ ಜೊತೆಗೆ ನಿನಗೆ ಹೊರಳಾಟ ಏಕೆ
ಕೆರಳಾಟ ಎಂದರದು ಯಾವತ್ತೂ ತಾಪವಲ್ಲ ಪಾಶ
ಮತ್ಸರಿಯ ಒಟ್ಟಿಗೆ ಸವಿಯ ಸಂಗವದು ಬೇಕೇನು
ವೈರಾಗ್ಯದಲ್ಲಿ ಪಾಠವೆಂದರೆ ಸಂತಾಪವಲ್ಲ ಪಾಶ
ಏಳು ಹೆಜ್ಜೆಗಳನಿಡುವ ಮೂಲಕ ಬಂದವಳು ಸತಿ
ಹೋಲಿಕೆಯ ಹುಚ್ಚುಗಳೆಂದರೆ ಕೂಪವಲ್ಲ ಪಾಶ
ಸೊಗಸೆನಿಸುವ ಸಂಗೀತವೂ ಅಮೃತವು ಈಶಾ
ಬೊಗಸೆಗಣ್ಣಿನ ಈ ನೋಟ ಕಲ್ಮಶವಲ್ಲ ಪಾಶ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ