ಎರಡು ಗಝಲ್ ಗಳು....
ಗಝಲ್ ೧
ಚತುರೆಯ ನಡೆಯವಳ ಜೊತೆಗಾನು ಸಾಗುತಿರೆ ಒಲವು
ಗತ್ತಿನಾ ನಡೆ ನುಡಿಗಳಲಿ ಅವಳಿಂದು ನೋಡುತಿರೆ ಒಲವು
ಮನ ಮುದುಡಿ ಕೂತಿದೆ ಎಂದರೆ ಮನಸ್ಸಿಲ್ಲವೆಂದೇ ಅರ್ಥವೆ
ಕನಸ್ಸುಗಳ ಆಚೆಯು ಪ್ರೀತಿಯಿದೆಯೆಂದು ಬಯಸುತಿರೆ ಒಲವು
ಹೊತ್ತು ಮೂಡಿದರೂ ಮತ್ತಿನಲಿ ಇರಬೇಕೆನ್ನುವ ಬಯಕೆ ಯಾಕೆ
ಕತ್ತು ನೋಯುತಿದ್ದರೂ ಮತ್ತಷ್ಟು ಪ್ರೇಮವ ಉಣಿಸುತಿರೆ ಒಲವು
ಹೆಣ್ಣು ಮಾಯೆಯ ಮೋಹವೂ ಹೌದೆಂಬ ತಿಳಿವಳಿಕೆ ಇದೆಯೆಂದು
ತುತ್ತು ಅನ್ನಕ್ಕೇ ಕೊರತೆಯಿದ್ದರೂ ಒನಪಿನಲಿ ಉಸುರುತಿರೆ ಒಲವು
ಬಿಟ್ಟುಬಿಡು ಎಂದರೂ ಬಿಡದು ಈ ಮಾಯೆ ಎನುತಲಿಹನು ಈಶಾ
ಎಲ್ಲವೂ ಒತ್ತಾಯದ ನಡಿಗೆಯೊಳು ಕೈಹಿಡಿದು ಸೇರುತಿರೆ ಒಲವು
***
ಗಝಲ್ ೨
ಮಧುರ ಕ್ಷಣಗಳ ಅರಿವಿದೆ ಮೌನವಾಗಿರು
ಬದುಕಿಗೆ ಸುಂದರ ಹರವಿದೆ ಮೌನವಾಗಿರು
ಪ್ರೀತಿಯ ತಂತಿಗೆ ಮನವಿದೆ ಮೌನವಾಗಿರು
ಕೈಯಬಳೆ ಸದ್ದಿಗೆ ತನುವಿದೆ ಮೌನವಾಗಿರು
ತುಟಿಗೆ ಮೀರಿದ ಚೆಲುವಿದೆ ಮೌನವಾಗಿರು
ಚೈತ್ರದ ಸೊಗಸಿಗೆ ದಿನವಿದೆ ಮೌನವಾಗಿರು
ರಾತ್ರಿಯ ಚಂದಿರನಿಗೆ ಒಲವಿದೆ ಮೌನವಾಗಿರು
ತಾರೆಯ ನೋಟದಲಿ ಗೆಲುವಿದೆ ಮೌನವಾಗಿರು
ಈಶನೊಲವಿಗೆ ಬಿರಿದ ಫಲವಿದೆ ಮೌನವಾಗಿರು
ಮನದರಸಿಗೆ ಸವಿಯ ಕುಲವಿದೆ ಮೌನವಾಗಿರು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ