ಎರಡು ಗಝಲ್ ಗಳು.....
ಗಝಲ್ ೧
ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ
ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ
ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ
ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ
ಉಕ್ಕಬಹುದು ಆಂತರ್ಯದ ಸವಿ ನೆನಪುಗಳ ತಿಳಿಯದಾದೆ
ಹೊತ್ತೇರಿದರೂ ಬೆಸುಗೆಯೊಳು ದಿಟ್ಟೆ ಕಾಡು ಓ ಚೆಲುವೆ
ಅಂತರಂಗ ಭಾವನೆಯೊಳು ಸಿಲುಕಿ ಹೋದೆಯೇನು ಕೂಸೆ
ಕೈಯ ಹಿಡಿದು ನಡೆಯದಿರೆ ನಿನಗೆ ಕೇಡು ಓ ಚೆಲುವೆ
ಈಶನೆಂದೋ ಮರೆತಿರುವ ವಿಷದ ಒಡಲ ತೊರೆದು ಬಿಡೆ
ವರುಷ ಕಳೆದ ಮೈ ಮನದೆ ಮತ್ತೆ ಹಾಡು ಓ ಚೆಲುವೆ
***
ಗಝಲ್ ೨
ಹಸಿರಿಂದ ತುಂಬಿರುವ ಭೂಮಿಯನು ನೋಡಿದೆನು ಸಖಿ
ಕೆಸರಲ್ಲಿ ಅರಳಿದ ತಾವರೆಯ ಕಾಡಿದೆನು ಸಖಿ
ವಿಪರೀತ ಎನಿಸುವ ಬದುಕಲ್ಲಿ ಏನಿದೆಯೊ ಹೇಳುವೆಯಾ
ಕನಸಿನ ಜೊತೆಗಾರ ನನಸಂತೆ ಮೂಡಿದೆನು ಸಖಿ
ಚಿಂತಿಸುವ ಸರಕಿಂದು ಬರದಿರಲಿ ತಲೆಯಲಿ ತಿಳಿಯಿತೆ
ಚಿಂತನೆಗೆ ಸಾಗುತಿಹ ವಿಷಯವ ಬೇಡಿದೆನು ಸಖಿ
ಮಹಡಿಯ ಹಜಾರದಿ ನಲಿದೆನು ಕಣ್ಣನಿಂದು ಮಿಟುಕಿಸಿ
ಮೋಹವದು ತುಂಬುತಿರೆ ಹೃದಯದಿ ಹಾಡಿದೆನು ಸಖಿ
ಸವಿಯಾದ ತನುವಲಿ ಮನವಿರೆ ದೂರವೆಲ್ಲೂ ಹೋಗದಿರು
ಇಷ್ಟವಾಯ್ತೆ ನಿನಗಿಲ್ಲಿ ಪ್ರೀತಿಯನು ನೀಡಿದೆನು ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ