ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಜುಲೈ 1 “ ರಾಷ್ಟ್ರೀಯ ವೈದ್ಯರ ದಿನಾಚರಣೆ” ಈ ಸಂದರ್ಭ ಕೊರೊನಾ ವೈರಸನ್ನು ಹೊಡೆದೊಡಿಸಲು, ತಮ್ಮ ಮನೆಯ ಕುಟುಂಬವನ್ನು ಮರೆತು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುತ್ತಿರುವ ವೈದ್ಯ ವೃತ್ತಿಯವರಿಗೆ ನಮನದ ಮೂಲಕ ಈ ಗಝಲ್ ಅರ್ಪಣೆ.

ಗಝಲ್- ೧

ನಮ್ಮ ಉಳಿವಿಗಾಗಿ ನಿಮ್ಮ ಸೇವೆಯ ಹೇಗೆ ಮರೆಯಲಿ

ನಮಗೆ ಮತ್ತೆ ಜೀವ ಕೊಟ್ಟ ಬಗೆಯ ಹೇಗೆ ಮರೆಯಲಿ

 

ಮೇಲು ಕೀಳು ನೋಡದಿರಲು ನೀವೆ ದೇವ ಮಾನವರಿಂದು

ಭೇದ ಭಾವ ಇರದಿರುವ ಸ್ಥಿತಿಯ ಹೇಗೆ ಮರೆಯಲಿ

 

ಪ್ರಾಣದ ಹಂಗು ತೊರೆದು ಜನರ ಸೇವೆಯನ್ನು ಗೈದಿರಿಂದು

ಅರ್ಥಪೂರ್ಣ ಮುಗುಳು ನಗೆಯ ಹೇಗೆ ಮರೆಯಲಿ

 

ಧೈರ್ಯ ತುಂಬಿ ಮನದ ತುಂಬಾ ಗೆಲುವ ಮತ್ತೆ ಕೊಟ್ಟಿರಿಂದು

ಜೊತೆಗೆ ನಿಮ್ಮಲಿರುವ ಧನ್ಯತೆಯ ಹೇಗೆ ಮರೆಯಲಿ

 

ಮರೆಯಲುಂಟೆ ಈಶ ಹೀಗೆ ವೈದ್ಯ ಸೇವೆ ಶಾಶ್ವತ ಎಂದಿಗು

ಜನಕೆ ಬದುಕನಿತ್ತ ಚೆಲುವ ನಡೆಯ ಹೇಗೆ ಮರೆಯಲಿ

***

ಗಝಲ್ - ೨

ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ

ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ

 

ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ

ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ ಗೆಳತಿ

 

ಚಿಂತನೆಗಳು ಚಿಂತೆಗಳೆನ್ನುವ ಆಳದ ನಡುವೆಯೆ ಪಯಣಿಸಿತ್ತಿರುವ ನಾವಿಕನಾಗಿದೆ

ಕಲ್ಪ ವಿಕಲ್ಪಗಳ ಸಂಘರ್ಷದಲ್ಲಿ ತನುವಿನಾಳದ ಪಯಣ ಮುಂದೆ ಸಾಗಲಿಲ್ಲ ಗೆಳತಿ

 

ಬಯಕೆಗಳೇ ಮೂಡದೆಯಿರಲು ಹೊಂಬಿಸಿಲು ಉದಯಿಸಿದರೆ ಪ್ರಯೋಜನವಿದೆಯೆ

ಹೊಂಗಿರಣಗಳ ಚೆಲುವಿನೊಳಗಿನ ಘಮ್ಮೆನ್ನುವ ಮನವದುವು ಸವಿಯಾಗಲಿಲ್ಲ ಗೆಳತಿ

 

ಚೈತ್ರದ ಆಗಮನಗಳ ನಿರೀಕ್ಷೆಯಲ್ಲಿದ್ದರೂ ಹೃದಯವಿಂದು ಅಳುತಿದೆಯಲ್ಲ ಈಶಾ

ಭ್ರಾಂತಿಯೆನುವ ಉದ್ದಗಲದ ನಡುವೇ ಉಪಚರಿಸದ ತನುವು ಅರಳಲಿಲ್ಲ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್