ಎರಡು ಗಝಲ್ ಗಳು.....
ಗಝಲ್ ೧
ನೆನಪದು ಕುಸಿದಿದೆ ಕನಸದು ಬೀಳದ ಹಾಗೆ
ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ
ಬಾನಲಿ ತೇಲುವ ಮೋಡವು ಕರಗಿದೆ ಯಾಕೆ
ಮೋಹದ ಚೆಲುವಿನ ತಾರೆಯ ರೂಪದ ಹಾಗೆ
ಸುಮಧುರ ತುಂಬಿದ ಪಾತ್ರೆಯು ಸೋರಿತೆ ಹೀಗೆ
ಕಂಡಿಹ ಚಿತ್ರದಿ ಬಣ್ಣವು ಮಾಸದ ಹಾಗೆ
ಜೀವನ ಪಾವನ ಲಯದಲಿ ಕಾಣದೆ ಬೆಳಕು
ಭಾವನೆ ಸೃಷ್ಟಿಯ ಸೊಬಗದು ತೀರದ ಹಾಗೆ
ನೋಟದ ಅರ್ಥವು ತಿಳಿಯದೆ ಸೋತನೆ ಈಶ
ಅಂತರ ಪರದೆಯ ಒಳಗಿನ ಬಿಂಬದ ಹಾಗೆ
***
ಗಝಲ್ ೨
ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಚೆಲುವೆ
ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಚೆಲುವೆ
ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿದಿರೆಯನು
ಎದೆ ಬಯಕೆಯ ನಲಿವ ಉಲಿವ ಹೊಸ ಮನ್ವಂತರವ ಬಯಸುತ್ತಿದ್ದೇನೆ ಚೆಲುವೆ
ಅರಳಿರುವ ಕೆಂಪು ಹೂವಿನ ನೆತ್ತರು ಹರಡದಿರಲಿ ಸುತ್ತ ಮುತ್ತಲು ಸವಿ ಇರುವಾಗ
ಪ್ರೀತಿ ಉಕ್ಕುತ್ತಿರುವ ಸಮಯ ಸನಿಹವೇ ಇರು ನೀಯೆಂದೂ ಕೇಳುತ್ತಿದ್ದೇನೆ ಚೆಲುವೆ
ಅರಮನೆಯೊಳಗಿನ ಒಲವಿನಾಸರೆಯ ಬದುಕು ಗೂಡೊಳಗೆ ಜೊತೆ ಬಾರದಿರಲಿ
ಬಡವರ ಗುಡಿಸಲಿನಲ್ಲಿ ಸಿಗುವ ನನಸಿನಾಳದ ಪ್ರೇಮಗಳ ಹುಡುಕುತ್ತಿದ್ದೇನೆ ಚೆಲುವೆ
ಸಕಲ ವಾಲಗದೊಡನೆ ಹಸೆಮಣೆಯನ್ನೇರಿ ಶಾಸ್ತ್ರಗಳ ಮುಗಿಸಿ ಹೊರಟಿರುವೆ ಸವಿಯೆ
ನಲುಮೆಯ ಹೂವ ಮಂಚಕೆ ಮದನ ಇಂದ್ರನಾಗಿ ನಿನ್ನ ನಾ ಕರೆಯುತ್ತಿದ್ದೇನೆ ಚೆಲುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
