ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಪ್ರೇಮವು ಇರಲೇ ಬೇಕೆಂಬ ನಿಯಮವಿದೆ ಚೆಲುವೆ

ಒಲವದುವು ಸುತ್ತಲಿರಲೆಂಬ ಬಯಕೆಯಿದೆ ಚೆಲುವೆ

 

ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆ ಚೆಲುವೆ

ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆ ಚೆಲುವೆ

 

ದಾರಿಗುಂಟವೇ ನಡೆಯುವವರನ್ನು ನೋಡಿದೆ ಚೆಲುವೆ

ಜೀವನದ ಓಣಿಗಳಲ್ಲಿ ಕೊಳಚೆ ನೀರು ಕಂಡಿದೆ ಚೆಲುವೆ

 

ದಿನ ದೂಡುವರ ಹತ್ತಿರದ ಸಂಬಂಧ ಬೇಕಿದೆ ಚೆಲುವೆ

ಚಿಂತೆಯಿರದ ಹೂವಿನ ಮನಸಲಿ ಶಾಂತಿಯಿದೆ ಚೆಲುವೆ

 

ಈಶನ ದಯಾಳುತನದ ಮೆಟ್ಟಿಲನ್ನು ಏರದಾದೆ ಚೆಲುವೆ

ಮತ್ಸರದ ಗೂಡಿನಲ್ಲಿಯೆ ನಡೆವ ಮನುಜನಾದೆ ಚೆಲುವೆ

***

ಗಝಲ್ ೨

ಬಾನಲ್ಲಿ ಸುಂದರವಾಗಿ ಇರುವ ತಾರೆಯಂತೆ ನೀನು

ಒಲವಿನ ಮಧುರವಾದ ಸುಧೆಯ ಸವಿಯಂತೆ ನೀನು

 

ಹೊತ್ತಿಲ್ಲದೇ ಬಂದರೂ ಬಾಗಿಲನ್ನು ಯಾಕೆ ತೆರೆದೆ

ಚೆಲುವ ಸನಿಹ ಯಾವತ್ತೂ ಮದಿರೆಯಂತೆ   ನೀನು

 

ಗೊತ್ತು ಗುರಿಯಿಲ್ಲದ  ಬದುಕು ಸಂತೆಯೆಂದೆ ಅಲ್ಲವೆ

ಮತ್ತಿನೊಳಗಿನ ಮುತ್ತುಗಳು ಸುವಾಸನೆಯಂತೆ  ನೀನು

 

ಚಿತ್ತಾರದ ಪುಟಗಳ ಬಾಳೊಂದು ಕನಸೆಂದೆ ಯಾಕೆ 

ನಶೆಯು ಕೂಡ ಒಂದೊಳ್ಳೆಯ ನಡತೆಯಂತೆ  ನೀನು

 

ಮುತ್ತು ತಂದು ಎದುರಿಟ್ಟರೂ ತಿರುಗಿ ನೋಡಲಿಲ್ಲವೇಕೆ

ಈಶನ ನಿರ್ಮಲವಾದ ಹೃದಯದಿ ರಾಣಿಯಂತೆ  ನೀನು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್