ಎರಡು ಗಝಲ್ ಗಳು....
ಗಝಲ್ ೧
ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ ಲೋಕದೊಳು ಎಲೆ ಮಾನವ
ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ ಒಲವಾಗು ಎಲೆ ಮಾನವ
ಮನದೊಳಗೆ ಸವಿಯಿರಲ ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ
ತನುವೊಳಗೆ ಕಹಿಯಿರದೆ ಬರಲು ಜೇನಿನಹೊಳೆ ಕುಲದೊಳಗೆ ಛಲವಿರಲು ಎಲೆ ಮಾನವ
ಮೋಹದಾಚೆಗೆ ಸರಿದ ವನವಾಸ ಉಪವಾಸ ಸನಿಹದೊಳು ಬೇಕಿದೆಯೇ ನಿನ್ನೊಲವಲಿ
ಚಿತ್ತಾರದಲಿ ನೋಟವ ಹರಿಸುತಲಿ ಸಾಗುತಿರೆ ಪ್ರತಿಬಿಂಬ ಕಾಣುವುದು ಎಲೆ ಮಾನವ
ಮಸಣದೀಚೆಗೆ ಇರುವ ಪ್ರೀತಿಯನು ಹುಡುಕುತಿರು ಪ್ರೇಮವದುಯೆಂದೂ ಚಿತ್ತೈಸಲಿ
ಮತ್ತದುವೆ ನೋವುಗಳು ಮರೆಯಾಗಿ ಜನಿಸಿರೆ ಹೊಸದೊಂದು ಸಂಕುಲವು ಎಲೆ ಮಾನವ
ಸಾಗರಕೆ ಕೊನೆ ಇಹುದೆ ನೋಡಿರುವೆಯಾ ಕನಸ ಬೀಜಗಳೇ ದಡವನ್ನು ಸೇರಿದೆ ಈಶಾ
ತಡೆಗೋಡೆ ಕುಸಿಯದಿರೆ ಒಲುಮೆಯ ಉಸಿರಲ್ಲಿ ಹಸಿರಾಗೆ ಬೆರೆಯುತಿರು ಎಲೆ ಮಾನವ
***
ಗಝಲ್ ೨
ಬದುಕಲ್ಲಿ ನೆಲೆ ಕಂಡುಕೊಳ್ಳುವಾಗಲೇ ಮುದುಕನಾದೆ ನಾನು
ತಾಳಿ ಕಟ್ಟಿದ ದಿನವು ನೆನಪಾದಾಗ ಯುವಕನಾದೆ ನಾನು
ತಂಗಾಳಿಯಲ್ಲಿ ಶರೀರ ಒಡ್ಡುವ ದಿನ ಕಳೆದು ಹೋಯಿತೇಕೆ
ವಯಸ್ಸು ಮಾಗಿದ ಸಮಯದಲ್ಲೇ ಗೆಳೆಯನಾದೆ ನಾನು
ಭೇದ ಭಾವಗಳ ನಡುವೆ ಪ್ರೀತಿ ಹುಟ್ಟುವುದೇ
ಮನೋರಂಜನೆಯ ಜೀವನಕಾಗೇ ಹುಡುಗನಾದೆ ನಾನು
ಹುಟ್ಟು ಸಾವಿನ ನಡುವೆ ಸ್ಪರ್ಶಗಳ ತಿಳುವಳಿಕೆಯಿದೆ
ವಾದ ಪ್ರತಿವಾದಿಗಳ ನಡುವೆ ಮೂಢನಾದೆ ನಾನು
ಹುಚ್ಚು ಹೋಗದೆ ಸಾವು ಕೂಡ ಹತ್ತಿರ ಬರದು ಈಶಾ
ಹೊತ್ತು ಕಳೆದರೂ ಹಿಂದಿನ ನೆನಪಿಗೆ ಮರುಳನಾದೆ ನಾನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
