ಎರಡು ಗಝಲ್ ಗಳು....
ಗಝಲ್ ೧
ಕಲಿಯುತ್ತಿರು ಕಲಿಯುತ್ತಲೇ ಜನರಿಗಿಂದು ಚುಚ್ಚದಿರು ಮನುಜ
ತಿಳಿಯದೇ ದಿನವೆಲ್ಲ ತಿಳಿದಿರುವೆನೆಂದು ಹೇಳುತ್ತಾ ಮೆರೆಯದಿರು ಮನುಜ
ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ
ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ ನೀನೆಂದೂ ತೆಗಳದಿರು ಮನುಜ
ಉಪ್ಪಿನ ಕಾಯಿಯಲ್ಲಿ ಹುಳುವಾದಂತೆ ಬಾಳುವುದು ವ್ಯರ್ಥವಲ್ಲವೆ
ಸುತ್ತ ಮುತ್ತಲ ಊರಿನವರಿಗೆಲ್ಲರಿಗು ಗೊತ್ತಿರುವನಂತೆ ತಿರುಗದಿರು ಮನುಜ
ಹೊಸಗನ್ನಡದ ಸಂಸ್ಕಾರದ ರೀತಿಯ ನಿಯಮಗಳು ತಿಳಿದಿಲ್ಲವೆ
ಹಳತ್ತಿನ ಮಲ್ಲಿಗೆಯ ಸುವಾಸನೆಯ ಪರಿಮಳಕ್ಕೆ ಕುಣಿಯದಿರು ಮನುಜ
ನುಡಿಗಳೆಲ್ಲವೂ ತೂಕದಿಂದ ಕೂಡಿರುತ್ತದೆ ಬಲ್ಲೆಯಾ ಈಶಾ
ಮಾತನಾಡಿ ಬರೆಯುವಾಗ ತಪ್ಪಿಯೂ ಸಭ್ಯತೆಯ ಮೀರದಿರು ಮನುಜ
***
ಗಝಲ್ ೨
ನೀನಿಲ್ಲದೆ ಗೆಲುವು ಸಿಗುವುದೇ ಹೇಳು
ನಾನಿಲ್ಲದೆ ಒಲವು ನಿಲುವುದೇ ಹೇಳು
ಗಿಡವಿಲ್ಲದೆ ಬನವು ಇರುವುದೇ ಹೇಳು
ಬಲವಿಲ್ಲದೆ ಮರವು ಉಳಿವುದೇ ಹೇಳು
ತನುವಿಲ್ಲದೆ ಮನವು ಬೆರೆವುದೇ ಹೇಳು
ಮಧುವಿಲ್ಲದೆ ಜೀವವು ಬೆಸೆವುದೇ ಹೇಳು
ಜೀವವಿಲ್ಲದೆ ಪಂಥವು ಸರಿವುದೇ ಹೇಳು
ತಂಪಿಲ್ಲದೆ ಹೊಸವು ಹುಟ್ಟುವುದೇ ಹೇಳು
ಈಶನಿಲ್ಲದೆ ಅರಿವು ಕಾಣುವುದೇ ಹೇಳು
ಕನಸಿಲ್ಲದೆ ಚೈತ್ರವು ಬರುವುದೇ ಹೇಳು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
