ಎರಡು ಗಝಲ್ ಗಳು....
ಗಝಲ್ ೧
ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು
ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು
ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೊ
ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ಒಲವೊಳು
ನಿಶೆಯ ಹೊಂದದೆ ಬದುಕಿರೆಲ್ಲರು ವಿಷಮ ಚೈತ್ರವು ಏತಕೆ
ವಶಕೆ ಸಿಗದೆ ದುಡಿಯಿರೆಲ್ಲರು ಬದುಕ ಕೊಟ್ಟಿಹ ಒಲವೊಳು
ಕನಸ ದೇಶದಿ ನೋಡಿಯೆಲ್ಲರು ನನಸು ಬಾರದೆ ಇರುವುದೆ
ಹಸಿರ ಲೋಕದಿ ಹಾಡಿರೆಲ್ಲರು ಜೀವ ಹುಟ್ಟಿಹ ಒಲವೊಳು
ಭವದ ಸುತ್ತಲು ನೋಡಿರೆಲ್ಲರು ಮನದಿ ಸವಿಯಿದೆ ಈಶನೆ
ಮೇನೆಯಲ್ಲಿಯೆ ಮಲಗಿರೆಲ್ಲರು ಬಯಕೆ ನೆಟ್ಟಿಹ ಒಲವೊಳು
***
ಗಝಲ್ ೨
ಬದುಕು ಎಂದರೆ ಹೀಗೆ ಹಿಂತಿರುಗಿ ನೋಡು ಅಷ್ಟೇ
ಹೂವು ಅರಳಿದ ರೀತಿ ಮತ್ತೊಮ್ಮೆ ಹಾಡು ಅಷ್ಟೇ
ಜೀವನದಲ್ಲಿಯ ಮೌಲ್ಯ ಅರಿತೆ ತಿಳಿಯದು ಯಾಕೆ
ಕಾಣುವುದನು ಸಧ್ಯ ನನಗೆ ಬೇಕೆಂದು ಕಾಡು ಅಷ್ಟೇ
ಹೇಳು ನನ್ನಯ ಅರಸನೇ ನೀನೆಲ್ಲಿ ಇಂದು ಹೋದೆ
ಪ್ರೀತಿಯ ಸವಿ ಕನಸನ್ನು ಕೈಹಿಡಿದು ಬೇಡು ಅಷ್ಟೇ
ತಪ್ಪಿಗೆ ಯಾವತ್ತಿಗೂ ಜೀವಕ್ಕೆಂದೂ ಕ್ಷಮೆ ಇಲ್ಲವೇ
ಹಿತ ಆಸಕ್ತಿಗಳ ನಡುವೆ ಕಾಯುತ್ತಾ ಬಾಡು ಅಷ್ಟೇ
ಸ್ವಂತಿಕೆಯ ಒಲವನ್ನು ಪಡೆದು ಸಾಗಿಂದು ಈಶಾ
ಚೆಂದವೆನ್ನ ಚೆಲುವಿನ ನೆಲವು ನಮ್ಮ ನಾಡು ಅಷ್ಟೇ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
