ಎರಡು ಗಝಲ್ ಗಳು
ಗಝಲ್ ೧
ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು
ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು
ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ
ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು
ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬಾರದು
ದ್ವೇಷದ ನುಡಿಯದುವು ನಿಲ್ಲಬೇಕಾದರೆ ಒಲವು ಬೇಕು
ಬದುಕಿನ ಮುಖಪುಟವು ಸತ್ಯವನ್ನೇ ನುಡಿಯುತ್ತಾ ಸಾಗಲಿ
ವಾಸ್ತವತೆಗಳ ನಡುವೆ ನಡೆಯಬೇಕಾದರೆ ಬಲವು ಬೇಕು
ಚಿಂತೆಯನ್ನು ಬಿಡುತಲಿ ಚಿಂತನೆಯಲ್ಲೇ ಸಾಗುತಿರು ಈಶಾ
ಬಾಳಲಿ ನೆಮ್ಮದಿಯಲ್ಲಿ ಮಲಗಬೇಕಾದರೆ ನೆಲವು ಬೇಕು
***
ಗಝಲ್ ೨
ಉಗ್ರರು ನುಗ್ಗಿದ್ದಾರೆ ಸರಿ ನಾವು ಹಾಡುತ್ತಿದ್ದೇವೆ ನೋಡು
ಇಲ್ಲಿ ಸಲ್ಲದು ಮಾತ ಹೇಳುತ್ತಾ ಬದಿಗೆ ಸರಿದಿದ್ದೇವೆ ನೋಡು
ರೋಗ ಇಲ್ಲದಿದ್ದರೂ ಬಂದಿದೆ ಎನ್ನುತ್ತಾ ಕೂತಿದ್ದೇವೆ ಯಾಕೆ
ಎಳತಾದ ಎಲೆಯಂತೆ ಮತ್ತೆ ಮತ್ತೆ ಮುದುಡಿದ್ದೇವೆ ನೋಡು
ಬಟ್ಟಾ ಬಯಲಿನಲ್ಲಿ ಚೆಂಡೆಯ ಪೆಟ್ಟುಗಳು ಕೇಳಿಸುತ್ತಿದೆ
ರಚ್ಚೆ ಹಿಡಿದ ಮಗುವ ಸಂತೈಸಲು ಹೊಡೆದಿದ್ದೇವೆ ನೋಡು
ನಷ್ಟದ ಅಂದಾಜು ಯಾರಿಗೂ ಇಲ್ಲದೆಯೇ ಸುಮ್ಮನಿಹರು
ಕಷ್ಟದ ಅರಿವಿಲ್ಲದೆ ಜನರು ಹೀಗೆಯೇ ನಡೆದಿದ್ದೇವೆ ನೋಡು
ಪಾಪದ ಜನರು ಯಾವ ಸಂತೋಷದಿಂದ ಸಾಗಿದ್ದರೋ ಈಶ
ದ್ವೇಷದ ಭಾರದಿಂದ ಪ್ರೀತಿಯ ಇಂದು ಮರೆತ್ತಿದ್ದೇವೆ ನೋಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
