ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್

ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್

 

ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ

ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್

 

ಇನ್ನೊಬ್ಬರ  ಲೇವಡಿ ಮಾಡದಿರೆ ಹೊಟ್ಟೆ ತುಂಬದು

ದ್ವಿಪದಿ ಸಾಲುಗಳ ತೋಚಿದಂತೆ ತಿರುಚಿದ್ದೇ ಗಝಲ್

 

ಶಬ್ದಗಳ ತುರುಕಿ ಬರೆದರೆ ಓದುಗರಿಗೆ ಅರ್ಥವಾದೀತೆ

ಸ್ವಾರಸ್ಯವಿಲ್ಲದ ವಿಷಯದಲ್ಲಿ ಮತ್ತೆ ತೇಲಿದ್ದೇ ಗಝಲ್

 

ಮನುಷ್ಯ ತನ್ನ ದೌರ್ಬಲ್ಯವ ತಿದ್ದಿಕೊಳ್ಳಲಾರನೊ ಈಶಾ

ಬೇರೆಡೆ ಹುಟ್ಟನ್ನು ಪಡೆಯುತ ಹೀಗೆ ಕಟ್ಟಿದ್ದೇ ಗಝಲ್

***

ಗಝಲ್ ೨

ನಿನ್ನ ಪಿಸುಮಾತದು, ಎನ್ನ ಕಾಡುತಿರಲಿ ಗೆಳತಿ

ನನ್ನ ಮೌನ, ಎಂದಿಗೂ ನಿನ್ನ ಕೆಣಕುತಿರಲಿ ಗೆಳತಿ

 

ಸಂಬಂಧ ಮಧುರಹಿತ, ಸಂಸಾರ ಜೀವನವು ಬೇಕೆ

ಮತ್ತಿದೆ, ಮುತ್ತಿನ ಮಳೆಯು ಸುರಿಯುತಿರಲಿ ಗೆಳತಿ

 

ಉಪವಾಸದ ನಡುವೆಯೇ ,ಮೃಷ್ಟಾನ್ನದ ಚಿಂತೆಯೇಕೆ 

ಕನಸಿದೆ, ನನಸಿನತ್ತ ಮನವಿಂದು ಸಾಗುತಿರಲಿ ಗೆಳತಿ

 

ಲಾವಣ್ಯದಲಿ ಬದುಕು ,ಸೌಂದರ್ಯ ಅರಳಲಿ ಬಿಡು

ಶಾಂತ ಸಾಗರದಲ್ಲಿ, ತನುವಿಂದು ಕೆಂಪಾಗುತಿರಲಿ ಗೆಳತಿ

 

ಸಮುದ್ರದ ಆಳದಲ್ಲಿ, ಮತ್ತೆ ಈಜಾಡುವೆಯಾ ಈಶಾ

ಚಂದ್ರನ ಬೆಳದಿಂಗಳು, ಮೋಹ ಬೆಸೆಯುತಿರಲಿ ಗೆಳತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್