ಎರಡು ಗಝಲ್ ಗಳು.....
೧.
ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲೆ ಎಲ್ಲಿರುವೆ
ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ
ಬಾಯಾರಿ ಒಣಗುತಲೆ ಮಾತುಗಳು ಬರದಿಂದು
ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ
ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು
ಹೃದಯದೊಳಗೆ ಪ್ರೀತಿ ಬಗೆಗೆ ಬೇಸರವ ತೋರಿರುವೆ
ಹೊಸ ಹುರುಪು ಬರಲೀಗ ಹಳೆ ಕೊಳಕು ತೊಲಗಿತೊ
ಕನಸುಗಳ ಬೆಟ್ಟದೊಳಗೆ ಹೊಸತನದಿ ಅರಳಿರುವೆ
ಮುದಿಡಿರುವ ಯೌವನದಿ ರಶ್ಮಿ ಚಿಮ್ಮಿದೆ ಈಶಾ
ಒಲವಿನೊಳು ಗೆಲುವಿರಲು ಮತ್ತೆ ಬರುತಿರುವೆ
***
೨.
ಬದುಕು ಕಟ್ಟುವ ಸಮಯ ನೆಲೆಯಿದೆಯೆ ಸಖಿ
ನಡುಕ ಹುಟ್ಟಿಸಿದ ಚಳಿಗೆ ಬಲೆಯಿದೆಯೆ ಸಖಿ
ಜೀವನದ ತುಂಬೆಲ್ಲ ಹೋರಾಟವೇ ಕಂಡಿದೆ ಏಕೆ
ಹುಡುಕಾಟದ ನಡುವೆ ಸೆಳೆತದ ಅಲೆಯಿದೆಯೆ ಸಖಿ
ಕರುಣೆಯಿಲ್ಲದ ಹೃದಯ ಹೀನರ ಜೊತೆಗೇ ನಾನಿರುವೆ
ಸೌಂದರ್ಯಕೆ ವಸ್ತುಗಳ ಮಾರಾಟದ ಕಲೆಯಿದೆಯೆ ಸಖಿ
ಭಿನ್ನಾಣವ ಬಯಸಿ ಬಂದವರಿಲ್ಲಿ ಯಾರೂ ಇಲ್ಲವೇನು
ಹರುಕು ಸವಿಮಾತಿನ ಸೊಗಡಿಗೆ ಬೆಲೆಯಿದೆಯೆ ಸಖಿ
ಮತಿಯಿರದ ಭಾವಗಳಿಗೆಲ್ಲ ಒಲವಿಂದು ಬೇಕೇನು ಈಶಾ
ಮಧುರವಾದ ಸ್ಪಂದನೆಗೆ ಚಿಂತಿಸುವ ತಲೆಯಿದೆಯೆ ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ