ಎರಡು ಜಾನಪದ ಕಥೆಗಳು

ಎರಡು ಜಾನಪದ ಕಥೆಗಳು

ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಬಳಿಯಲು ( ಹೊಡೆಯಲು ) ಇಟ್ಟಿದ್ದ ವಿವಿಧ ಸುಣ್ಣದ - ಬಣ್ಣದ ಡಬ್ಬಗಳಲ್ಲಿ ಬೀಳುತ್ತದೆ. ಅದರ ದೇಹವೆಲ್ಲಾ ನೀಲಿ ಬಣ್ಣದಿಂದ ತೋಯ್ದು ಹೋಗುತ್ತದೆ. ಗಾಬರಿಯಾದ ತೋಳ ಎದ್ದೆನೋ ಬಿದ್ದೆನೋ ಎಂದು ಅಲ್ಲಿಂದ ಎಗರಿ ಕಾಡಿನತ್ತ ಓಡುತ್ತದೆ.

ಅಲ್ಲಿ ಇಲ್ಲಿ ಅಲೆದು ಬೆಳಗಿನ ಹೊತ್ತಿಗೆ ದಟ್ಟ ಕಾಡಿಗೆ ಹೊಕ್ಕು ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿರುತ್ತದೆ. ಆಶ್ಚರ್ಯ, ಕಾಡಿನ ಕೆಲವು ಪ್ರಾಣಿಗಳು ಅದರಲ್ಲೂ ತೋಳಕ್ಕಿಂತ ಬಲಿಷ್ಠವಾಗಿರುವವು ಸಹ ಇದನ್ನು ನೋಡಿ ಭಯ ಮತ್ತು ಗೌರವದಿಂದ ನಮಸ್ಕಾರ ಮಾಡುತ್ತವೆ. ತೋಳಕ್ಕೆ ಆಶ್ಚರ್ಯ ಮತ್ತು ಕುತೂಹಲ ಮೂಡುತ್ತದೆ. ಅರೆ ನನಗೇಕೆ ಈ ಪ್ರಾಣಿಗಳು ನಮಸ್ಕಾರ ಮಾಡುತ್ತಿವೆ. ನಾನು ಕಾಡಿನ ರಾಜನಲ್ಲ. ಸಿಂಹ ಕಾಡಿನ ರಾಜ. ನಾನೊಂದು ಸಣ್ಣ ಪ್ರಾಣಿ. ನನಗೇಕೆ ಮರ್ಯಾದೆ ಎಂದು ಯೋಚಿಸುತ್ತದೆ. 

ಸ್ವಲ್ಪ ಸಮಯವಾದ ಮೇಲೆ ಬಿಸಿಲು ಹೆಚ್ಚಾಗುತ್ತದೆ. ತೋಳಕ್ಕೆ ಬಾಯಾರಿಕೆಯಾಗಿ ನೀರು ಕುಡಿಯಲು ಕೆರೆಯ ಬಳಿ ಹೋಗಿ ಬಾಯಿ ಹಾಕುತ್ತದೆ. ಒಂದು ಕ್ಷಣ ಗಾಬರಿಯಾಗುತ್ತದೆ. ನೀರಿನಲ್ಲಿ ತನ್ನ ಪ್ರತಿಬಿಂಬ ಕಂಡು ಅದಕ್ಕೆ ವಿಚಿತ್ರವೆನಿಸುತ್ತದೆ. ಇಡೀ ದೇಹ ನೀಲಿ ಬಣ್ಣದಿಂದ ಕೂಡಿ ವಿಚಿತ್ರ ರೀತಿಯಲ್ಲಿ ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಅದಕ್ಕೆ ಇತರ ಪ್ರಾಣಿಗಳು ತನಗೆ ನೀಡುತ್ತಿರುವ ಗೌರವಕ್ಕೆ ಕಾರಣ ತಿಳಿಯುತ್ತದೆ.  ಅಲ್ಲಿಂದ ಅದರ ವರ್ತನೆಯೇ ಬದಲಾಗುತ್ತದೆ. ಅಹಂ ಬೆಳೆಯುತ್ತದೆ. ನಾನು ಬಲಿಷ್ಠ ಎಂಬ ಭ್ರಮೆ ಬೆಳೆಸಿಕೊಳ್ಳುತ್ತದೆ. 

ಓಹೋ ನಾನೇ ಕಾಡಿನ ರಾಜನಾಗಲು ಅರ್ಹ. ಇನ್ನು ಮೇಲೆ ನಾನೇ ಕಾಡಿನ ಅಧಿಪತಿ ಎಂದು ಭಾವಿಸಿ ಎಲ್ಲಾ ಪ್ರಾಣಿಗಳಿಗೂ ಸಂದೇಶ ರವಾನಿಸುತ್ತದೆ. ಕಾಡಿನ ರಾಜ ಸಿಂಹ ಸೇರಿ ಎಲ್ಲರೂ ಒಪ್ಪಿ ಈ ಬಣ್ಣ ಬಣ್ಣದ ವಿಚಿತ್ರ ಪ್ರಾಣಿಯನ್ನು  ರಾಜನಾಗಿ ಒಪ್ಪುತ್ತವೆ. ಅವುಗಳು ಇದು ತೋಳ ಎಂದು ಗುರುತಿಸಲು ವಿಫಲವಾಗುತ್ತವೆ.

ತೋಳ ಸಹ ರಾಜನಂತೆಯೇ ವರ್ತಿಸುತ್ತಾ ಇತರ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುತ್ತಾ ಇಡೀ ಕಾಡನ್ನು ಆಳುತ್ತಿರುತ್ತದೆ.ಅದರ ಅಹಂಕಾರ ಎಲ್ಲೆ ಮೀರಿರುತ್ತದೆ. ರಾಜನಾಗುವ ಸಾಮರ್ಥ್ಯ ಇಲ್ಲದಿದ್ದರೂ ಆಕಸ್ಮಿಕವಾಗಿ ಅದೃಷ್ಟದ ಬಲದಿಂದ ಆ ಸ್ಥಾನ ಸಿಕ್ಕಿರುತ್ತದೆ.

ಹೀಗಿರುವಾಗ ಒಮ್ಮೆ ಕಾಡಿನಲ್ಲಿ ಈ ಬಣ್ಣದ ತೋಳದ ನೇತೃತ್ವದಲ್ಲಿ ಸಭೆ ನಡೆಯುತ್ತಿರುತ್ತದೆ. ಆಗ ಆಕಾಶದಲ್ಲಿ ಮೋಡಗಳು ಸೇರಿ ಮಳೆ ಬರಲಾರಂಭಿಸುತ್ತದೆ. ಆ ಮಳೆಯ ನೀರಿನ ಕಾರಣಕ್ಕೆ ತೋಳದ ಆ ಕೃತಕ ಬಣ್ಣ ತೊಯ್ದು ಅದರ ನಿಜ ಬಣ್ಣ ಬಯಲಾಗುತ್ತದೆ. ಇದನ್ನು ಗಮನಿಸಿದ ಇತರ ಪ್ರಾಣಿಗಳು ಓ ಹೋ ಇದು ವಿಶೇಷ ಶಕ್ತಿಯ ವಿಶೇಷ ಪ್ರಾಣಿಯಲ್ಲ ಇದು ಒಂದು ಸಾಮಾನ್ಯ ತೋಳ ಎಂದು ಅರ್ಥಮಾಡಿಕೊಂಡು ಅದನ್ನು ಅಲ್ಲಿಂದ ‌ಓಡಿಸುತ್ತವೆ. ತೋಳದ ನಿಜ ಬಣ್ಣ ಒಂದು ದಿನ ಬಯಲಾಗುತ್ತದೆ. ಹಾಗೆಯೇ ಎಲ್ಲರ ಮುಖವಾಡಗಳು ಒಂದು ದಿನ ಕಳಚಿ ಬೀಳುತ್ತದೆ..

***

ಎಲ್ಲೋ ಕೇಳಿದ ಕಥೆ

ಒಮ್ಮೆ ಒಂದು ಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತ ಬಡ ರೈತನಿದ್ದನು. ಸದಾ ಆತನಿಗೆ ವೆಂಕಟೇಶ್ವರನದೇ ಚಿಂತೆ. ಆತನನ್ನು ಸ್ಮರಿಸಿಯೇ ಪ್ರತಿನಿತ್ಯ ತನ್ನ ಕಾಯಕ ಮಾಡುತ್ತಿದ್ದನು. ಆ ದೇವರನ್ನು ನೋಡಲು ಮನಸ್ಸು ಸದಾ ತಹತಹಿಸುತ್ತಿತ್ತು. ಆಗಿನ ಕಾಲದಲ್ಲಿ ವಾಹನಗಳು ಇರಲಿಲ್ಲ. ಕಾಲ್ನಡಿಗೆಯಲ್ಲಿಯೇ ಅಷ್ಟು ಮೈಲಿ ನಡೆದು ಹೋಗಬೇಕಾಗಿತ್ತು. 

ಒಮ್ಮೆ ಆತ ತನ್ನ ಚಿಕ್ಕ ತೋಟದಲ್ಲಿ ಬಾಳೆಗಿಡ ಬೆಳೆಸಿದ್ದನು. ಆ ಸಮಯದಲ್ಲಿ ಸ್ವತಃ ವೆಂಕಟೇಶ್ವರನೇ ಆತನ ಕನಸಿನಲ್ಲಿ ಬಂದು " ರೈತನೇ ನಿನ್ನ ತೋಟದ ಬಾಳೆಹಣ್ಣು ತುಂಬಾ ಚೆನ್ನಾಗಿದೆ ಬೆಳೆದಿದೆ. ದಯವಿಟ್ಟು ಅದರ ಒಂದು ದೊಡ್ಡ ಗೊನೆ ನನಗೆ ನೀಡು" ಎಂದು ಕೇಳುತ್ತಾನೆ.

ವೆಂಕಟೇಶ್ವರನೇ ಕನಸಿನಲ್ಲಿ ಬಂದು ಕೇಳಿದ ಮೇಲೆ ರೈತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಒಳ್ಳೆಯ ಗೊನೆಯನ್ನು ಅದಕ್ಕಾಗಿ ಮೀಸಲಿಟ್ಟು ತಿರುಪತಿಗೆ ಹೋಗಲು ನಿಶ್ಚಯಿಸುತ್ತಾನೆ. ಆದರೆ ಕಾರಣಾಂತರಗಳಿಂದ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಣ್ಣನ್ನು ಬಹಳ ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದೇ ಸಮಯಕ್ಕೆ ಆ ಊರಿನ ಒಬ್ಬ ವ್ಯಕ್ತಿ ವೆಂಕಟೇಶ್ವರನ ದರ್ಶನಕ್ಕೆ ತಿರುಪತಿಗೆ ಹೊರಟಿರುತ್ತಾನೆ. 

ರೈತ ಆತನ ಬಳಿ ನಡೆದ ವಿಷಯ ಹೇಳಿ ಹೇಗಾದರೂ ಈ ಬಾಳೆ ಹಣ್ಣಿನ ಗೊನೆಯನ್ನು ವೆಂಕಟೇಶ್ವರನಿಗೆ ತಲುಪಿಸಲು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿದ ಆ ವ್ಯಕ್ತಿ ಬಾಳೆಗೊನೆಯನ್ನು ಪಡೆದು ತಿರುಪತಿಯತ್ತ ತೆರಳುತ್ತಾನೆ. ಈ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ತಿರುಪತಿ ತಲುಪಲು ಹಲವು ದಿನಗಳ ಸಮಯ ಬೇಕಾಗುತ್ತದೆ. 

ಆದರೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಳೆ ಅನಾರೋಗ್ಯ ಮುಂತಾದ ಕಾರಣಗಳಿಂದ ಇನ್ನೂ ಕೆಲವು ಹೆಚ್ಚು  ದಿನಗಳಷ್ಟು ದೀರ್ಘಕಾಲ ಬೇಕಾಗುತ್ತದೆ. ಆತನ ಸಂಗ್ರಹ ಆಹಾರ ಖಾಲಿಯಾಗಿರುತ್ತದೆ. ಹಸಿವು ತಡೆಯಲು ಸಾಧ್ಯವಾಗುವುದಿಲ್ಲ. ಆಗ ಆತನಿಗೆ ತನ್ನ ಮೂಟೆಯಲ್ಲಿದ್ದ ಬಾಳೆಹಣ್ಣು ನೆನಪಾಗುತ್ತದೆ. ಮನಸ್ಸು ಒಪ್ಪದಿದ್ದರೂ ಹಸಿವು ತಡೆಯಲಾಗದೆ ಮನಸ್ಸಿನಲ್ಲಿಯೇ ವೆಂಕಟೇಶ್ವರನಿಗೆ ಕ್ಷಮಾಪಣೆ ಕೇಳಿ ಎರಡು ಹಣ್ಣು ತಿನ್ನುತ್ತಾನೆ. ಹಾಗೆ ಮುಂದೆ ಸಾಗುತ್ತಾ ಸಾಗುತ್ತಾ ಹಸಿವಾದಾಗಲೆಲ್ಲಾ ವೆಂಕಟೇಶ್ವರನ ಕ್ಷಮೆ ಕೇಳಿ ಒಂದೊಂದೇ ಹಣ್ಣು ತಿನ್ನುತ್ತಿರುತ್ತಾನೆ. 

ಕೊನೆಗೆ ತಿರುಪತಿಯ ಬೆಟ್ಟ ಹತ್ತಿ ದೇವಸ್ಥಾನ ತಲುಪುವಷ್ಟರಲ್ಲಿ ಕೇವಲ ೫ ಬಾಳೆಹಣ್ಣು ಮಾತ್ರ ಉಳಿದಿರುತ್ತದೆ. ಆತ ಅದನ್ನೇ ಅಲ್ಲಿನ ಪೂಜೆಗೆ ಅರ್ಪಿಸಿ ಮತ್ತೊಮ್ಮೆ ಕ್ಷಮೆ ಕೇಳಿ ದರ್ಶನ ಮುಗಿಸಿ ಮತ್ತೆ ಹಳ್ಳಿಯ ಕಡೆ ಹೊಸ ಆಹಾರದ ವ್ಯವಸ್ಥೆ ಮಾಡಿಕೊಂಡು ಹೊರಡುತ್ತಾನೆ.

ಕೆಲವು ದಿನಗಳ ನಂತರ ಮತ್ತೆ ವೆಂಕಟೇಶ್ವರ ಆ ಬಡ ರೈತನ ಕನಸಿನಲ್ಲಿ ಬರುತ್ತಾನೆ. ಆಗ ಗಾಬರಿಯಾದ ರೈತ " ಸ್ವಾಮಿ ನಾನು ಒಂದು ದೊಡ್ಡ ಬಾಳೆಗೊನೆ ನೀವು ಹೇಳಿದಂತೆ ತಲುಪಿಸಿದ್ದೆ. ಮತ್ತೆ ಏನಾದರೂ ಬೇಕೆ " ಎಂದು ಕೇಳುತ್ತಾನೆ. 

ಆಗ ವೆಂಕಟೇಶ್ವರ " ಬೇರೆ ಏನೂ ಬೇಡ ಭಕ್ತ.  ನೀನು ಕಳುಹಿಸಿದ ಎಲ್ಲಾ ಬಾಳೆಹಣ್ಣು ನನಗೆ ತಲುಪಿತು. ಆದರೆ ಅದರಲ್ಲಿ ೫ ಹಣ್ಣು ನನಗೆ ತಲುಪಲಿಲ್ಲ. ನಿನಗೆ ಧನ್ಯವಾದಗಳು " ಎಂದು ಹೇಳಿ ಮರೆಯಾಗುತ್ತಾನೆ. ರೈತನಿಗೆ ಬಹಳ ಚಿಂತೆಯಾಗುತ್ತದೆ. ೫ ಹಣ್ಣು ಹೇಗೆ ತಲುಪಲಿಲ್ಲ. ಆತ ಹಣ್ಣು ತಲುಪಿಸಿದ್ದ ವ್ಯಕ್ತಿಯ ಬಳಿ ಈ ಬಗ್ಗೆ ವಿಚಾರಿಸುತ್ತಾನೆ. ಮೊದಲಿಗೆ ಸುಳ್ಳು ಹೇಳಿದ ಆತ ಈತನ ಭಕ್ತಿ ಪೂರ್ವಕ ಒತ್ತಾಯಕ್ಕೆ ಮಣಿದು ನಿಜ ಹೇಳುತ್ತಾನೆ. 

ಆಗ ರೈತನಿಗೆ ಮತ್ತಷ್ಟು ಆಶ್ವರ್ಯ. ಭಕ್ತ ತಿಂದ ಹಣ್ಣು ದೇವರಿಗೆ ತಲುಪಿದೆ. ದೇವಸ್ಥಾನಕ್ಕೆ ಅರ್ಪಿಸಿದ ಹಣ್ಣು ದೇವರಿಗೆ ತಲುಪಲಿಲ್ಲ. ಅಂದರೆ..." ದೇವರಲ್ಲಿ ನೇರವಾಗಿ ಕ್ಷಮೆ ಕೋರಿ ತಿಂದದ್ದು ದೇವರಿಗೆ ತಲುಪಿದೆ. ದೇವರ ಹೆಸರಿನಲ್ಲಿ ದೇವಸ್ಥಾನಕ್ಕೆ ತಲುಪಿಸಿದ್ದು ದೇವರಿಗೆ ಸೇರಲಿಲ್ಲವೆಂದರೆ ದೇವರು ಮತ್ತು ಮನುಷ್ಯನ ನಡುವೆ ಮೂರನೆಯವರ ಅವಶ್ಯಕತೆಯೇ ಇಲ್ಲ. ಅದು ನನ್ನ ಮತ್ತು ದೇವರ ನಡವಿನ ನೇರಾ ನೇರಾ ಸಂಬಂಧ"

( ದೇವರು ಇದ್ದಾನೆ ಎಂದು ನಂಬುವವರಿಗೆ ಮಾತ್ರ )

  • 314 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ  ಆಲ್ಬೂರು ಗ್ರಾಮದಿಂದ ಸುಮಾರು ‌10 ಕಿಲೋಮೀಟರ್ ದೂರದ ತುರುವೇಕೆರೆ ತಾಲ್ಲೂಕು ತಲುಪಿತು. ಇಂದು  11/9/2021 ಶನಿವಾರ 315 ನೆಯ ದಿನ ನಮ್ಮ ಕಾಲ್ನಡಿಗೆ ತುರುವೇಕೆರೆ ತಾಲ್ಲೂಕಿನಿಂದ ಸುಮಾರು 19 ಕಿಲೋಮೀಟರ್ ದೂರದ ಮಾಯಸಂದ್ರ ಗ್ರಾಮ ತಲುಪಲಿದೆ. ನಾಳೆ 12/9/2021 ಶನಿವಾರ 316 ನೆಯ ದಿನ ನಮ್ಮ ಪ್ರಯಾಣ ಯಡಿಯೂರು ಗ್ರಾಮದತ್ತಾ....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ