ಎರಡು ಝೆನ್ ಕಥೆಗಳು ಮತ್ತು ಇನ್ನೊಂದು…

ವಿಧೇಯತೆ
ಝೆನ್ ಗುರು ಬಾಂಕೀಯವರ ಪ್ರವಚನ ಎಂದರೆ ಬಹಳ ಜನಪ್ರಿಯ. ಅವರು ಹಳೆಯ ಗ್ರಂಥಗಳಿಂದ, ಸೂತ್ರಗಳಿಂದ ಉದ್ದರಿಸುವ ಬದಲು, ನೇರವಾದ ಮಾತುಗಳಿಂದ ತಮ್ಮ ಪ್ರವಚನ ಆರಂಭಿಸುತ್ತಿದ್ದರು. ಅವರ ಮಾತುಗಳು ಹೃದಯದಿಂದ ಬರುತ್ತಿದ್ದವು. ಆದ್ದರಿಂದಲೇ ಇರಬೇಕು, ಜನರಿಗೆ ಅವರ ಮಾತುಗಳೆಂದರೆ ಬಹಳ ಇಷ್ಟ ಎನಿಸಿತ್ತು.
ಇವರ ಪ್ರವಚನಗಳಿಗೆ ತುಂಬಾ ಜನ ಸೇರುತ್ತಿದ್ದುದನ್ನು ಕಂಡು ನಿಚಿರೆನ್ ಪಂಥದ ಪೂಜಾರಿಗೆ ಕಿರಿಕಿರಿ ಎನಿಸಿತು. ತನ್ನ ಬಳಿ ಬಂದ ಜನರು, ಅರ್ಧದಲ್ಲೇ ಬಿಟ್ಟು ಬಾಂಕೀಯವರ ಪ್ರವಚನ ಕೇಳಲು ಹೊರಡುತ್ತಿದ್ದರು. ಬಾಂಕೀಯವರ ಪ್ರವಚನದಲ್ಲಿ ಅದೇನು ಶಕ್ತಿ ಇದೆ ಎಂದು ಪರೀಕ್ಷಿಸಲು ನಿಚಿರೆನ್ ಪಂಥದ ಪೂಜಾರಿ ನೇರವಾಗಿ ಬಾಂಕೀ ಬಳಿ ಬಂದರು.
'ಸ್ವಾಮಿ ಝೆನ್ ಗುರುಗಳೇ, ಒಂದು ನಿಮಿಷ ತಾಳಿ. ಇವರೆಲ್ಲಾ ನಿಮ್ಮ ಮಾತುಗಳನ್ನು ವಿಧೇಯತೆಯಿಂದ ಕೇಳುತ್ತಿದ್ದಾರೆ. ಆದರೆ, ನನಗೆ ಅದೆಲ್ಲಾ ಸರಿ ಕಾಣದು. ನಾನು ನಿಮಗೆ ವಿಧೇಯನಾಗಿರಲಾರೆ. ನೀವು ನನ್ನನ್ನು ನಿಮ್ಮ ವಿಧೇಯನನ್ನಾಗಿಸಲು ಸಾಧ್ಯವೇ? ಎಂದು ಸವಾಲು ಎಸೆದರು.
ಬಾಂಕೀ ಝೆನ್ ಗುರು ನಸುನಕ್ಕು 'ಅದಕ್ಕೇನಂತೆ, ದಯವಿಟ್ಟು ನನ್ನ ಬಳಿ ಬನ್ನಿ, ಅದು ಹೇಗೆ ಎಂದು ತೋರಿಸುತ್ತೇನೆ'ಎಂದರು.
ಪೂಜಾರಿಯು ಹೆಮ್ಮೆಯಿಂದ ಜನರ ನಡುವೆ ದಾರಿ ಮಾಡಿಕೊಂಡು ಝೆನ್ ಗುರುಗಳ ಬಳಿ ಹೋದರು. ಝೆನ್ ಗುರು ನಸುನಕ್ಕು 'ನನ್ನ ಎಡಭಾಗಕ್ಕೆ ಬನ್ನಿ' ಎಂದರು. ಪೂಜಾರಿಯು ಹಾಗೆಯೇ ಮಾಡಿದರು.
'ಇಲ್ಲಿ ಬೇಡ, ನೀವು ನನ್ನ ಬಲಭಾಗದಲ್ಲಿದ್ದರೆ ಇನ್ನೂ ಶ್ರೇಷ್ಟ. ದಯವಿಟ್ಟು ಈ ಕಡೆ ಬನ್ನಿ.' ಎಂದರು ಝೆನ್ ಗುರು.
ಪೂಜಾರಿಯು ಹೆಮ್ಮೆಯಿಂದ ಬಲಭಾಗಕ್ಕೆ ಹೋದರು. 'ನೋಡಿ, ಈಗ ನೀವು ನಾನು ಹೇಳಿದಂತೆ ಕೇಳಿದಿರಿ. ನೀವು ನಿಜಕ್ಕೂ ಉತ್ತಮ ವ್ಯಕ್ತಿ. ಈಗ ಇಲ್ಲೇ ಕುಳಿತು ನನ್ನ ಮಾತುಗಳನ್ನು ಕೇಳಿ' ಎಂದು ಝೆನ್ ಗುರು, ತನ್ನ ಮಾತುಗಳನ್ನು ಮುಂದುವರೆಸಿದರು.
೬೦ ಪತ್ರಗಳು
ತಾಂಜಾನ್ ಎಂಬ ಝೆನ್ ಗುರುಗಳಿದ್ದರು. ಅವರು ದೇಹತ್ಯಾಗ ಮಾಡುವ ದಿನ, ಅರವತ್ತು ಪತ್ರಗಳನ್ನು ತನ್ನ ಶಿಷ್ಯರಿಗೆ ಬರೆದು, ಅವೆಲ್ಲವನ್ನೂ ತಕ್ಷಣ ಅಂಚೆಗೆ ಹಾಕಬೇಕು ಎಂದು ಒಬ್ಬ ಶಿಷ್ಯನಿಗೆ ಹೇಳಿದರು. ಆತ ಅಂಚೆ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮರುದಿನ ಅರವತ್ತು ಶಿಷ್ಯರಿಗೆ ಪತ್ರಗಳು ತಲುಪಿದವು. ಅವುಗಳಲ್ಲಿ ಎಲ್ಲವುಗಳಲ್ಲೂ ಬರೆದದ್ದು ಒಂದೇ ಒಕ್ಕಣೆ : ನಾನು ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ. ಇದು ನನ್ನ ಕೊನೆಯ ಹೇಳಿಕೆ : ೨೭-೦೭-೧೮೯೨.
***
ದೊಡ್ದವರು-ಚಿಕ್ಕವರು
ಖ್ರುಶ್ಚೇವ್ ರಷ್ಯಾದ ಪ್ರಧಾನಿಯಾಗಿದ್ದರು. ಒಮ್ಮೆ ಇವರು ಲಂಡನ್ನಿಗೆ ಹೋಗಿದ್ದರು. ಅಲ್ಲಿ ಅವರಿಗೆ ಗೌರವಾರ್ಥವಾಗಿ ಬಹಳ ಬೆಲೆಬಾಳುವ ಬಟ್ಟೆಯನ್ನು ಕೊಟ್ಟರು. ತಮ್ಮ ದೇಶದ ಉತ್ತಮ ದರ್ಜಿಯೇ ಇದನ್ನು ಹೊಲಿಯಬೇಕೆಂದು ಅವರಿಗೆ ಆಸೆಯಾಯಿತು.
ತಮ್ಮ ದೇಶಕ್ಕೆ ಕೊಂಡೊಯ್ದು ಅಲ್ಲಿನ ಪ್ರತಿಷ್ಟಿತ ದರ್ಜಿಯ ಬಳಿ ಕೇಳಿದರು. 'ನನಗೆ ಈ ಬಟ್ಟೆಯಲ್ಲಿ ಒಂದು ಕೋಟು, ಒಂದು ಒಳಕೋಟು ಮತ್ತು ಪ್ಯಾಂಟು ಇವಿಷ್ಟೂ ಆಗಬೇಕಿದೆ.'ಎಂದು.
ಅದಕ್ಕೆ ದರ್ಜಿ ಹೇಳಿದ 'ಈ ವಸ್ತ್ರದಲ್ಲಿ ಯಾವುದಾದರೂ ಎರಡು ಬಟ್ಟೆಗಳನ್ನಷ್ಟೇ ಹೊಲಿಯಬಹುದು'.
ಯಾಕೋ ಖ್ರುಶ್ಚೇವ್ ಗೆ ಸಮಾಧಾನವಾಗಲಿಲ್ಲ. ಬೆಲೆ ಬಾಳುವ ಬಟ್ಟೆಯನ್ನು ಹಾಳು ಮಾಡುವುದು ಬೇಡವೆನಿಸಿ ಹಾಗೇ ಇಟ್ಟುಕೊಂಡರು. ಅದೊಂದು ದಿನ ಮತ್ತೆ ಲಂಡನ್ ಗೆ ತೆರಳುವ ಅವಕಾಶ ಬಂತು. ಆಗ ಬಟ್ಟೆಯನ್ನು ಕೊಂಡೊಯ್ದರು.
ಅಲ್ಲಿನ ದರ್ಜಿಯ ಬಳಿ ತಮ್ಮ ಆಸೆಯನ್ನು ತೋಡಿಕೊಂಡರು. ಆತ ' ಒಂದು ಪ್ಯಾಂಟು, ಒಂದು ಕೋಟು, ಒಂದು ಒಳಕೋಟು ಹೊಲಿದರೂ ಇನ್ನೂ ಸ್ವಲ್ಪ ಬಟ್ಟೆ ಉಳಿಯುವುದು. ಮಕ್ಕಳಿಗೂ ಏನಾದರೂ ಹೊಲಿಯಬಹುದು' ಎಂದ.
ಖ್ರುಶ್ಚೇವ್ ಆಶ್ಚರ್ಯ ಚಕಿತರಾದರು. 'ರಷ್ಯಾದ ಮಾಸ್ಕೋದಲ್ಲಿ ನಮ್ಮ ದರ್ಜಿಯನ್ನು ಕೇಳಿದಾಗ ಇವೆಲ್ಲ ಹೊಲಿಯಲು ಸಾಧ್ಯವೇ ಇಲ್ಲ ಎಂದನಲ್ಲ. ನೀನು ನೋಡಿದರೆ ನಾನು ಹೇಳಿದ್ದು ಹೊಲಿದ ಮೇಲೂ ಮತ್ತಷ್ಟು ಬಟ್ಟೆ ಉಳಿಯುತ್ತದೆ ಎನ್ನುತ್ತಿದ್ದೀಯಾ? ಇದು ಹೇಗೆ ಸಾಧ್ಯ?' ಎಂದರು.
ಲಂಡನ್ನಿನ ದರ್ಜಿ ಹೇಳಿದ 'ಇಲ್ಲ ಇಲ್ಲ. ನೀವು ಅವನ ಮೇಲೆ ಸಿಟ್ಟಾಗಬೇಡಿ. ರಷ್ಯಾದಲ್ಲಿ ನೀವು ದೊಡ್ದವರು ಮತ್ತು ಬಹಳ ಗೌರವಾನ್ವಿತರು. ಹಾಗಾಗಿ ಅಲ್ಲಿನ ದರ್ಜಿಯ ದೃಷ್ಟಿಯಲ್ಲಿ ನಿಮಗೆ ಹೆಚ್ಚು ಬಟ್ಟೆ ಬೇಕು. ಆದರೆ ಲಂಡನ್ ನಲ್ಲಿ ನೀವು ಎಲ್ಲರಂತೆ ಜನಸಾಮಾನ್ಯರು. ಅದಷ್ಟೇ ವ್ಯತ್ಯಾಸ.!'
-ಅರ್ಜುನ್ ಶೆಣೈ, ಗಾವಳಿ
(ಕೃಪೆ: ವಿಶ್ವವಾಣಿ ಪತ್ರಿಕೆ)
ಚಿತ್ರ ಕೃಪೆ: ಅಂತರ್ಜಾಲ ತಾಣ