ಎರಡು ಟುವ್ವಿ ಹಕ್ಕಿಗಳು: ಟುನಾ ಮತ್ತು ಟುನಿ

ಎರಡು ಟುವ್ವಿ ಹಕ್ಕಿಗಳು: ಟುನಾ ಮತ್ತು ಟುನಿ

ಟುನಾ ಮತ್ತು ಟುನಿ ಎಂಬ ಹೆಸರಿನ ಎರಡು ಟುವ್ವಿ ಹಕ್ಕಿಗಳಿದ್ದವು. ಅವು ಹಲಸು ಮರದಿಂದ ಪೇರಲೆ ಮರಕ್ಕೆ, ಅಲ್ಲಿಂದ ನೇರಳೆ ಮರಕ್ಕೆ - ಹೀಗೆ ಮರದಿಂದ ಹಾರುತ್ತಾ ದಿನಗಳೆಯುತ್ತಿದ್ದವು. ಯಾವಾಗಲೂ “ಫ್ರುಟ್ ಫ್ರುಟ್, ಫ್ರುಟ್ ಫುಟ್" ಎಂದು ಹಾಡುತ್ತಿದ್ದವು.

ಅದೊಂದು ದಿನ ಟುನಾ ತನ್ನ ಮಡದಿ ಟುನಿಗೆ ಹೇಳಿತು, “ಪ್ರೀತಿಯ ಟುನಿ, ನನ್ನ ಹತ್ತಿರ ಸ್ವಲ್ಪ ಹಣವಿರಬೇಕಿತ್ತು. ನಿನಗೂ ನನಗೂ ಬಣ್ಣಬಣ್ಣದ ಪೋಷಾಕು ಖರೀದಿಸಬೇಕಾಗಿತ್ತು.”

ಆಗ ಟುನಿ ಉತ್ತರಿಸಿತು, “ಪ್ರೀತಿಯ ಟುನಾ, ಕಾಡಿನಲ್ಲಿ ಕೆಲವು ಕಡೆ ಚಿನ್ನದ ನಾಣ್ಯಗಳು ತುಂಬಿರುವ ಮಡಕೆಗಳು ಇರುತ್ತವೆ ಎಂದು ಕೇಳಿದ್ದೇನೆ. ಅವುಗಳಲ್ಲಿ ಒಂದನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು!”

ತಕ್ಷಣವೇ ಟುನಾ ಹೇಳಿತು, "ನಾನೂ ಆ ಸಂಗತಿ ಕೇಳಿದ್ದೇನೆ. ನಾನು ಕಾಡಿಗೆ ಹೋಗಿ ಅದನ್ನು ಹುಡುಕುತ್ತೇನೆ. ನನಗೊಂದು ಚಿನ್ನದ ನಾಣ್ಯ ತುಂಬಿದ ಮಡಕೆ ಸಿಕ್ಕೇ ಸಿಗುತ್ತದೆ.” ಟುನಾ ಹಕ್ಕಿ ಕಾಡಿನಲ್ಲಿ ನಿಧಿಯ ಹುಡುಕಾಟಕ್ಕೆ ಹೊರಟಿತು.

ಟುನಿ ಹಕ್ಕಿ ಉತ್ತರಿಸಿತು, "ನಾನು ಇಲ್ಲೇ ಇದ್ದು ನಮ್ಮ ಗೂಡನ್ನು ನೋಡಿಕೊಳ್ಳುತ್ತೇನೆ. ನೀನು ಆದಷ್ಟು ಬೇಗನೇ ವಾಪಾಸು ಬಾ. ಇಲ್ಲದಿದ್ದರೆ ನನಗೆ ಒಂಟಿಯಾಗಿದ್ದು ಬೇಸರವಾಗುತ್ತದೆ.”

ಅಂತೂ ಟುವ್ವಿ ಹಕ್ಕಿ ಟುನಾ ಕಾಡಿನೊಳಗೆ ಹೋಗಿ ತನ್ನ ಹುಡುಕಾಟ ಶುರು ಮಾಡಿತು. ಹಲಸಿನ ಮರದ ಬುಡದಲ್ಲಿ, ಬಿದಿರು ಮೆಳೆಯ ಸುತ್ತಲು, ಬಾಳೆ ಗಿಡದ ಪಕ್ಕದಲ್ಲಿ - ಹೀಗೆ ಎಲ್ಲ ಕಡೆ ಅದು ಹುಡುಕಿದ್ದೇ ಹುಡುಕಿದ್ದು. ಆದರೆ ಚಿನ್ನದ ನಾಣ್ಯ ತುಂಬಿದ ಮಡಕೆ ಅದಕ್ಕೆ ಸಿಗಲೇ ಇಲ್ಲ.

ಹಲವಾರು ದಿನ ಹುಡುಕಿದ ನಂತರ, ಒಂದು ಪೊದೆಯ ಬುಡದಲ್ಲಿ ನಾಲ್ಕಾಣೆ ನಾಣ್ಯವೊಂದು ಅದಕ್ಕೆ ಸಿಕ್ಕಿತು. ತಕ್ಷಣವೇ ಅದನ್ನು ತನ್ನ ಕೊಕ್ಕಿನಲ್ಲಿ ಕಚ್ಚಿ ಹಿಡಿದು, ಅದು ಟುನಿ ಹಕ್ಕಿಯ ಬಳಿಗೆ ಹಾರಿತು. ಆ ಪುಟ್ಟ ಹಕ್ಕಿಗೆ ಅದು ಬಹಳ ಭಾರ ಅನಿಸಿತು.

ತನ್ನ ಗೂಡು ತಲಪಿದೊಡನೆ ಅದು ಟುನಿ ಹಕ್ಕಿಯನ್ನು ಕರೆಯಿತು. “ಟುನಿ, ಬೇಗ ಬಾ. ನನಗೇನು ಸಿಕ್ಕಿದೆಯೆಂದು ನೋಡು.”

ಟುನಾ ಉದ್ವೇಗದಿಂದ ಟುನಿಗೆ ಹೇಳಿತು, “ಟುನಿ, ನಾವೀಗ ಶ್ರೀಮಂತರಾಗಿದ್ದೇವೆ.” ಟುನಿ ಕೇಳಿತು, “ನಾವು ಶ್ರೀಮಂತರೇ? ಹಾಗೆಂದರೇನು?” ಟುನಾ ಉತ್ತರಿಸಿತು, “ನಾವಿನ್ನು ಆಹಾರಕ್ಕಾಗಿ ಅಲೆದಾಡಬೇಕಾಗಿಲ್ಲ.”

“ಯಾಕೆ? ಯಾಕೆ?" ಎಂದು ಆತಂಕದಿಂದ ಕೇಳಿತು ಟುನಿ. ಆಗ ಟುನಾ ತಾನು ತಂದಿದ್ದ ನಾಲ್ಕಾಣೆ ನಾಣ್ಯವನ್ನು ಟುನಿಗೆ ತೋರಿಸುತ್ತಾ ಹೇಳಿತು, “ಇದನ್ನು ನೋಡು, ಇದರಿಂದ ನಾವು ನಮಗೆ  ಏನೆಲ್ಲ ಬೇಕು, ಅವನ್ನೆಲ್ಲ ಖರೀದಿಸಬಹುದು.”

ಟುನಿ ಬೆರಗಿನಿಂದ ಕೇಳಿತು, "ಹೌದೇನು! ಹಾಗಾದರೆ ನಾನು ಬಳೆಗಳನ್ನು, ಸರಗಳನ್ನು ಮತ್ತು ಓಲೆಗಳನ್ನು ಖರೀದಿಸುತ್ತೇನೆ.”
“ನಾನೊಂದು ವಿಮಾನವನ್ನೇ ಖರೀದಿಸುತ್ತೇನೆ" ಎಂದಿತು ಟುನಾ. ಹೀಗೆ ಆ ಎರಡು ಪುಟ್ಟ ಹಕ್ಕಿಗಳು ಅಕ್ಕಪಕ್ಕ ಕುಳಿತುಕೊಂಡು, ಆ ನಾಲ್ಕಾಣೆಯಿಂದ ತಾವು ಏನೆಲ್ಲ ಖರೀದಿಸಬಹುದೆಂದು ಮಾತನಾಡಿದವು. ಅನಂತರ ಆ ನಾಣ್ಯವನ್ನು ತಮ್ಮ ಗೂಡಿನಲ್ಲಿ ಬಚ್ಚಿಟ್ಟು, ಗೂಡಿನ ಸುತ್ತಲು ಹೀಗೆ ಹಾಡುತ್ತಾ ಕುಣಿಯತೊಡಗಿದವು:

“ರಾಜನ ಬಳಿ ಹಣ ಎಷ್ಟಿದೆ?
ನಮ್ಮ ಬಳಿಯೂ ಹಣ ಅಷ್ಟಿದೆ!”

ಆ ಪುಟ್ಟ ಟುವ್ವಿ ಹಕ್ಕಿಗಳಿಗೆ ಎಷ್ಟು ಸಂತೋಷವಾಗಿತ್ತು ಎಂದರೆ, ಅವು ತಿನ್ನುವುದನ್ನು, ಮಾತಾಡುವುದನ್ನು , ನಿದ್ದೆ ಮಾಡುವುದನ್ನು ಎಲ್ಲವನ್ನೂ ಮರೆತೇ ಬಿಟ್ಟವು. ಆ ಹಾಡು ಹಾಡುತ್ತಾ, ನಾಲ್ಕಾಣೆಯಿದ್ದ ಗೂಡಿನ ಸುತ್ತಲು ಅವು ಕುಣಿದದ್ದೇ ಕುಣಿದದ್ದು.

ಅದೊಂದು ದಿನ ಅಲ್ಲಿನ ರಾಜ, ತನ್ನ ಸೈನಿಕರು ಮತ್ತು ಸೇವಕರೊಂದಿಗೆ ಬೇಟೆಯಾಡಲಿಕ್ಕಾಗಿ ಆ ಕಾಡಿಗೆ ಬಂದ. ಆತ ಟುನಾ ಮತ್ತು ಟುನಿ ಹಕ್ಕಿಗಳ ಗೂಡಿದ್ದ ಮರದ ಹತ್ತಿರ ಬಂದಾಗ ಆ ಹಕ್ಕಿಗಳು ಇನ್ನೂ ಅದೇ ಹಾಡು ಹಾಡುತ್ತಾ ಕುಣಿಯುತ್ತಿದ್ದವು.

ಆ ಹಾಡಿನ ಪದಗಳನ್ನು ಕೇಳಿದಾಗ, ರಾಜ ಆಶ್ಚರ್ಯದಿಂದ ತಲೆಯೆತ್ತಿ ಮೇಲಕ್ಕೆ ನೋಡಿದ. ಹಾಡು ಹಾಡುತ್ತಾ ಕುಣಿಯುತ್ತಿದ್ದ ಪುಟ್ಟ ಹಕ್ಕಿಗಳನ್ನು ಕಂಡ ರಾಜ ಬೆರಗಾದ. ಯಾಕೆಂದರೆ ಅವು ಸತ್ಯ ಹೇಳುತ್ತಿವೆ ಎಂದು ಅವನಿಗೆ ಅನಿಸಿತು. ತನ್ನ ಬೆಂಗಾವಲಿನ ದಳಪತಿಗೆ ರಾಜ ಆದೇಶಿಸಿದ, “ಈ ಹಕ್ಕಿಗಳು ಹೆಮ್ಮೆಯಿಂದಿವೆ. ಅವುಗಳ ಬಳಿ ನಿಜಕ್ಕೂ ನನ್ನ ಬಳಿ ಇರುವಷ್ಟೇ ಹಣ ಇದೆಯೇ? ಟುವ್ವಿ ಹಕ್ಕಿಗಳ ಗೂಡಿನಲ್ಲಿ ಏನಿದೆಯೆಂದು ಹೋಗಿ ನೋಡು.”

ದಳಪತಿ ಮರ ಹತ್ತಿ, ಟುವ್ವಿ ಹಕ್ಕಿಗಳ ಗೂಡಿನೊಳಗೆ ಇಣುಕಿದ. ನಂತರ ಮರದಿಂದ ಇಳಿದು ಬಂದು ಹೇಳಿದ, “ಮಹಾರಾಜಾ, ಅವುಗಳ ಗೂಡಿನಲ್ಲಿ ಒಂದೇ ಒಂದು ನಾಲ್ಕಾಣೆ ನಾಣ್ಯ ಕಾಣಿಸಿತು."

ಈಗ ರಾಜನಿಗೆ ಬಹಳ ಸಿಟ್ಟು ಬಂತು. "ಹೌದೇನು? ಆ ನಾಲ್ಕಾಣೆಯನ್ನು ತೆಗೆದು ರಾಜಖಜಾನೆಗೆ ಜಮೆ ಮಾಡು ಮತ್ತು ಈ ತಲೆಕೆಟ್ಟ ಪುಟ್ಟ ಹಕ್ಕಿಗಳ ಗೂಡನ್ನು ಕೆಳಕ್ಕೆ ಎಸೆದು ಬಿಡು. ಇದು ನನ್ನ ಆಜ್ನೆ.”

ರಾಜನ ಸೈನಿಕರು, ಬೆಂಗಾವಲಿನವರು ಮತ್ತು ಸೇವಕರು ಎಲ್ಲರೂ ಸೇರಿ ರಾಜ ಆಜ್ನಾಪಿಸಿದಂತೆಯೇ ಮಾಡಿದರು. ಆದರೆ ಟುನಾ ಮತ್ತು ಟುನಿ ಆ ಹಾಡು ಹಾಡುವುದನ್ನು ನಿಲ್ಲಿಸಲಿಲ್ಲ. ಮರದಿಂದ ಮರಕ್ಕೆ ಹಾರಾಡುತ್ತಾ, ರಾಜನ ಮತ್ತು ಅವನ ಪರಿವಾರದ ಎಲ್ಲರ ತಲೆಯ ಮೇಲೆ ಸುತ್ತಾಡುತ್ತಾ, ಪುಟ್ಟ ಹಕ್ಕಿಗಳು ತಮ್ಮ ಹಾಡು ಹಾಡಿದ್ದೇ ಹಾಡಿದ್ದು:  

“ರಾಜನ ಬಳಿ ಹಣ ಎಷ್ಟಿದೆ? ನಮ್ಮ ಬಳಿಯೂ ಹಣ ಅಷ್ಟಿದೆ.”

ಈಗ ರಾಜನಿಗೆ ತಡೆಯಲಾಗದಷ್ಟು ಸಿಟ್ಟು ಬಂತು. “ಈ ಹಕ್ಕಿಗಳಿಗೆ ರಾಜನೆಂದರೆ ಗೌರವ ಇಲ್ಲವೇ? ಯಾಕೆ ಅವು ಹಾಗೆ ಹಾಡುತ್ತಲೇ ಇವೆ? ಹೋಗಿ, ಅವನ್ನು ತಕ್ಷಣವೇ ಹಿಡಿಯಿರಿ” ಎಂದು ರೇಗಿದ ರಾಜ.
 
ರಾಜನ ಆಜ್ನೆ ಕೇಳಿದೊಡನೆಯೇ ಸೈನಿಕರೆಲ್ಲರೂ ತಮ್ಮ ಬಂದೂಕುಗಳನ್ನು ಗುರಿ ಹಿಡಿದು ಪುಟ್ಟ ಹಕ್ಕಿಗಳತ್ತ ಗುಂಡೆಸೆಯ ತೊಡಗಿದರು. ಆದರೆ ಟುವ್ವಿ ಹಕ್ಕಿಗಳು ಇತ್ತಿಂದತ್ತ ಅತ್ತಿಂದಿತ್ತ ಹಾರಾಡುತ್ತಾ ಗುಂಡೇಟುಗಳಿಂದ ತಪ್ಪಿಸಿ ಕೊಳ್ಳುತ್ತಿದ್ದವು.

ರಾಜನಿಗೆ ಈ ಅವಮಾನವನ್ನು ಸಹಿಸಲಾಗಲಿಲ್ಲ. ಸಿಟ್ಟಿನಿಂದ ಕುದಿಯುತ್ತಾ ಅವನು ತನ್ನ ಸೇನಾಧಿಪತಿಗೆ ಅಬ್ಬರಿಸಿದ, “ಈ ಟುವ್ವಿ ಹಕ್ಕಿಗಳನ್ನು ನೀನು ಹಿಡಿದು ತಾರದಿದ್ದರೆ, ನಿನ್ನ ತಲೆಯನ್ನೇ ಕಡಿಯುತ್ತೇನೆ.”

ಈಗ ಸೇನಾಧಿಪತಿಗೆ ಭಯವಾಯಿತು. ಈ ತುಂಟ ಹಕ್ಕಿಗಳನ್ನು ಹೇಗೆ ಹಿಡಿಯುವುದೆಂದು ಅವನು ಚಿಂತಿಸುತ್ತಿದ್ದಾಗ, ಅಲ್ಲಿ ಹಾದು ಹೋಗುತ್ತಿದ್ದ ಮರಕಡಿಯುವಾತನೊಬ್ಬ ಹೇಳಿದ, "ಮಾನ್ಯರೇ, ನಿಮ್ಮ ಬಂದೂಕುಗಳಿಂದ ಈ ಪುಟ್ಟ ಹಕ್ಕಿಗಳನ್ನು ಹಿಡಿಯಲು ಸಾಧ್ಯವೇ ಇಲ್ಲ. ಮೀನುಗಾರನಿಗೆ ಅವನ ಬಲೆ ತರಲು ಹೇಳಿ. ಆ ಬಲೆಯಿಂದ ನೀವು ಈ ಹಕ್ಕಿಗಳನ್ನು ಸುಲಭವಾಗಿ ಹಿಡಿಯಬಹುದು.”

ಅದರಂತೆ ಸೇನಾಧಿಪತಿ ಒಬ್ಬ ಮೀನುಗಾರನನ್ನು ಕರೆಸಿ, ಅವನ ಬಲೆಯನ್ನು ಅಲ್ಲೆಲ್ಲ ಹರಡಲು ಆದೇಶಿಸಿದ. ಅಂತೂ ಪುಟ್ಟ ಟುವ್ವಿ ಹಕ್ಕಿಗಳನ್ನು ಬಲೆಯಲ್ಲಿ ಹಿಡಿದರು. ರಾಜನಿಗೆ ಬಹಳ ಆನಂದವಾಯಿತು. ಆತ ಒಂದು ಕೈಯಲ್ಲಿ ಟುನಾ ಹಕ್ಕಿಯನ್ನು ಮತ್ತು ಇನ್ನೊಂದು ಕೈಯಲ್ಲಿ ಟುನಿ ಹಕ್ಕಿಯನ್ನು ಹಿಡಿದುಕೊಂಡು ತನ್ನ ಅರಮನೆಗೆ ಹಿಂತಿರುಗಿದ.

ಆ ರಾಜನಿಗೆ ನೂರೊಂದು ಹೆಂಡತಿಯರು. ಅವರೆಲ್ಲರನ್ನೂ ಕರೆದು, “ನೋಡಿ, ನಿಮಗಾಗಿ ಎರಡು ಟುವ್ವಿ ಹಕ್ಕಿಗಳನ್ನು ತಂದಿದ್ದೇನೆ. ಅವುಗಳು ಹೆಸರು ಟುನಾ ಮತ್ತು ಟುನಿ. ಎಲ್ಲರೂ ಇವನ್ನು ಚೆನ್ನಾಗಿ ನೋಡಿ” ಎಂದು ಹೇಳಿದ.
ರಾಜನ ಮಡದಿಯರು ಟುನಾ ಮತ್ತು ಟುನಿ ಹಕ್ಕಿಗಳನ್ನು ಕೈಯಲ್ಲಿ ಹಿಡಿದು ನೋಡುತ್ತಾ ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸ ತೊಡಗಿದರು. ರಾಜನ ಒಬ್ಬಳು ಮಡದಿ ಮಹಾ ಸೋಮಾರಿ. ಅವಳ ಕೈಗೆ ಈ ಹಕ್ಕಿಗಳು ಬಂದಾಗ, ಅವಳು ಅವನ್ನು ಬಿಗಿಯಾಗಿ ಹಿಡಿದುಕೊಳ್ಳಲಿಲ್ಲ. ಹಾಗಾಗಿ, ಎರಡೂ ಹಕ್ಕಿಗಳು ಅವಳ ಕೈಯಿಂದ ಹಾರಿ ಹೋದವು. ಆದರೆ, ಈ ಸಂಗತಿಯನ್ನು ರಾಜನಿಗೆ ತಿಳಿಸಲು ಅವರಿಗೆ ಅಂಜಿಕೆಯಾಯಿತು. ಎಲ್ಲ ಮಡದಿಯರೂ ತೆಪ್ಪಗೆ ತಮ್ಮತಮ್ಮ ಕೋಣೆಗಳಿಗೆ ಹೋದರು.

ಮರುದಿನ ರಾಜ ತನ್ನ ಮಂತ್ರಿಗಳನ್ನು ಆಸ್ಥಾನಕ್ಕೆ ಕರೆಸಿಕೊಂಡ. ರಾಜನಿಗೆ ಕಿಂಚಿತ್ತೂ ಗೌರವ ಕೊಡದಿರುವ ಟುನಾ ಮತ್ತು ಟುನಿ ಹಕ್ಕಿಗಳಿಗೆ ಯಾವ ಶಿಕ್ಷೆ ಕೊಡಬೇಕೆಂದು ಅವರು ನಿರ್ಧರಿಸಬೇಕೆಂದು ಆದೇಶಿಸಿದ.

ಎರಡೂ ಹಕ್ಕಿಗಳನ್ನು ಆಸ್ಥಾನಕ್ಕೆ ತಗೊಂಡು ಬರಬೇಕೆಂದು ರಾಜ ಆಜ್ನಾಪಿಸಿದ. ಎಷ್ಟು ಹೊತ್ತು ಕಾದರೂ ಆ ಹಕ್ಕಿಗಳನ್ನು ಸೇವಕರು ತಗೊಂಡು ಬರಲಿಲ್ಲ. ರಾಜನಿಗೆ ಸಹನೆ ತಪ್ಪಿತು. ಅವನು ಆಸ್ಥಾನದಿಂದ ಮಡದಿಯರ ಅರಮನೆಗೆ ಹೋಗಿ ಕೇಳಿದ, “ಎಲ್ಲಿವೆ ಟುನಾ ಮತು ಟುನಿ ಹಕ್ಕಿಗಳು?" ಎಲ್ಲ ಮಡದಿಯರೂ ಮುಖಮುಖ ನೋಡಿಕೊಂಡರು. ಯಾರೂ ಮಾತಾಡಲಿಲ್ಲ.

ಹಠಾತ್ತಾಗಿ ಅಲ್ಲಿಗೆ ಟುವ್ವಿ ಹಕ್ಕಿಗಳು ಹಾರಿ ಬಂದವು. ಆ ಹಕ್ಕಿಗಳು ಹಾರಿ ಹೋಗಲು ಬಿಟ್ಟವರು ತನ್ನ ಮಡದಿಯರೇ ಎಂದು ರಾಜನಿಗೆ ಅರ್ಥವಾಯಿತು. ಅವನು ಸಿಟ್ಟಿನಿಂದ ಕಂಪಿಸಿದ. ತನ್ನ ಖಡ್ಗವನ್ನು ಒರೆಯಿಂದ ಹೊರಗೆಳೆದು, ಎಲ್ಲ ರಾಣಿಯರ ಮೂಗುಗಳನ್ನು ಕತ್ತರಿಸಿ ಬಿಟ್ಟ. ಈಗ ರಾಜನ ತಲೆಯ ಮೇಲೆ ಸುತ್ತಾಡುತ್ತಾ ಟುವ್ವಿ ಹಕ್ಕಿಗಳು ಹಾಡು ಹಾಡಲು ಶುರುವಿಟ್ಟವು:

“ಟುನಾಟುನಾ ಟುನಿಟುನಿ, ಟುನಾಟುನಿ ಟುನ್‌ಟುನ್
ಎಲ್ಲ ರಾಣಿಯರ ಮೂಗುಗಳು, ಕೆಂಪುಕೆಂಪು ಗುಲಾಬಿಗಳು”

ರಾಜನಿಗೆ ಈ ಲೇವಡಿ ಸಹಿಸಲಾಗಲಿಲ್ಲ. ಅವನೂ ಸಿಟ್ಟಿನಿಂದ ಕೆಂಪುಕೆಂಪಾದ. "ಯಾರಲ್ಲಿ? ಹಿಡಿಯಿರಿ ಈ ಹಕ್ಕಿಗಳನ್ನು" ಎಂದು ಅಬ್ಬರಿಸಿದ. ಪುನಃ ಮೀನುಗಾರನನ್ನು ಅರಮನೆಗೆ ಕರೆಸಲಾಯಿತು. ಅವನ ಬಲೆ ಹರಡಿ ಎರಡೂ ಹಕ್ಕಿಗಳನ್ನು ಪುನಃ ಹಿಡಿಯಲಾಯಿತು. ತನ್ನ ಮಂತ್ರಿಗಳು ಶಿಕ್ಷೆ ನಿರ್ಧರಿಸುವ ವರೆಗೆ ಕಾಯಲು ರಾಜ ತಯಾರಿರಲಿಲ್ಲ. ಅವನೊಂದು ದೊಡ್ಡ ಲೋಟದಲ್ಲಿ ನೀರು ತರಿಸಿ, ನೀರಿನೊಂದಿಗೆ ಟುನಾ ಮತ್ತು ಟುನಿ ಹಕ್ಕಿಗಳನ್ನು ನುಂಗಿ ಬಿಟ್ಟ!

ರಾಜನ ಮಂತ್ರಿಗಳೆಲ್ಲ ಇದನ್ನು ಕಂಡು ಸ್ತಂಭೀಭೂತರಾದರು. ಅವರಲ್ಲೊಬ್ಬ ಮಂತ್ರಿ ಪ್ರಧಾನ ಮಂತ್ರಿಗೆ ಹೇಳಿದ, “ರಾಜ ಒಮ್ಮೆ ನಕ್ಕರೆ ಸಾಕು, ಅವೆರಡೂ ಹಕ್ಕಿಗಳು ಅವನ ಬಾಯಿಯಿಂದ ಹೊರಗೆ ಬರುತ್ತವೆ." ಆದ್ದರಿಂದ ಪ್ರಧಾನ ಮಂತ್ರಿ, ಒಬ್ಬ ಸೈನಿಕನಿಗೆ ರಾಜನ ಪಕ್ಕದಲ್ಲಿ ಖಡ್ಗ ಹಿಡಿದು ನಿಲ್ಲಲು ಹೇಳಿದ. "ಎಚ್ಚರದಿಂದಿರು, ರಾಜನ ಬಾಯಿಯಿಂದ ಆ ಹಕ್ಕಿಗಳು ಹೊರ ಬರುತ್ತಲೇ ಅವುಗಳ ತಲೆ ಕಡಿದು ಹಾಕು” ಎಂದು ಆದೇಶಿಸಿದ.

ಆಗ, ರಾಣಿಯೊಬ್ಬಳು ರಾಜನ ಬಳಿ ಮಾತನಾಡಲು ಅಲ್ಲಿಗೆ ಬಂದಳು. ಅವಳು ಯಾವಾಗಲೂ ನಗುನಗುತ್ತಾ ಇರುವವಳು. ರಾಜ ಅವಳತ್ತ ತಿರುಗಿದ ಕೂಡಲೇ ಅವಳು ನಗ ತೊಡಗಿದಳು. ಅದನ್ನು ಕಂಡು ರಾಜನಿಗೂ ನಗು ಬಂತು. ಆತ ನಗುತ್ತಲೇ, ಟುವ್ವಿ ಹಕ್ಕಿಗಳು ರಾಜನ ಬಾಯಿಯಿಂದ ಹೊರಬಂದವು. ತಕ್ಷಣವೇ, ಅಲ್ಲಿದ್ದ ಸೈನಿಕ ತನ್ನ ಖಡ್ಗವನ್ನು ರಭಸದಿಂದ ಬೀಸಿದ. ಆದರೆ, ಟುವ್ವಿ ಹಕ್ಕಿಗಳ ತಲೆ ತರಿದು ಹೋಗಲಿಲ್ಲ. ಬದಲಾಗಿ, ರಾಜನ ಮೂಗು ಕತ್ತರಿಸಿ ಹೋಯಿತು!

ಆಗ ಪುಟ್ಟ ಟುವ್ವಿ ಹಕ್ಕಿಗಳಾದ ಟುನಾ ಮತ್ತು ಟುನಿ, ಆ ಭವನದಲ್ಲಿ ಸುತ್ತುಸುತ್ತು ಹಾರಾಡುತ್ತಾ ಹಾಡು ಹಾಡಿದವು:
“ಟುನಾಟುನಾ, ಟುನಿಟುನಿ, ಟುನಾಟುನಿ ಟುನ್‌ಟುನ್
ರಾಜನ ಮೂಗು ತುಂಡುತುಂಡು, ಟುನ್‌ಟುನ್, ಟುನ್‌ಟುನ್”

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಶುಮನಾ ಹಕ್