ಎರಡು ಟೆಡ್ದಿ ಕರಡಿಗಳ ಕಿತಾಪತಿ
ಟೋರಾ ಮತ್ತು ಬೋರಾ ಎಂಬ ಎರಡು ಟೆಡ್ದಿ ಕರಡಿಗಳು ಜೀವದ ಗೆಳೆಯರು. ಅವರಿಬ್ಬರೂ ಸ್ವೀಟಿ ಎಂಬ ಪುಟ್ಟ ಹುಡುಗಿಯೊಂದಿಗೆ ಇದ್ದರು. ಅವಳು ಅವರನ್ನು ತನ್ನ ಹಾಸಿಗೆಯಲ್ಲೆಯೇ ಇಟ್ಟಿದ್ದಳು.
ಅವಳ ತಲೆದಿಂಬುಗಳನ್ನೇರಿದರೆ ಕಿಟಕಿಯ ಮೂಲಕ ಅವುಗಳಿಗೆ ಹೊರಗಿನ ಉದ್ಯಾನ ಕಾಣಿಸುತ್ತಿತ್ತು. ಹಂಗಾಮಿನಿಂದ ಹಂಗಾಮಿಗೆ ಬಣ್ಣ ಬದಲಾಯಿಸುವ ಆ ಉದ್ಯಾನದ ಗಿಡಗಳನ್ನು ನೋಡುವುದೆಂದರೆ ಅವುಗಳಿಗೆ ಖುಷಿಯೋ ಖುಷಿ.
ಚಳಿಗಾಲದ ಒಂದು ಮುಂಜಾವದಲ್ಲಿ ಸ್ವೀಟಿ ಹಾಸಿಗೆಯಿಂದ ಎದ್ದು, ಪರದೆಗಳನ್ನು ಪಕ್ಕಕ್ಕೆ ಸರಿಸಿ, ಕಿಟಕಿಯಿಂದ ಹೊರಗೆ ನೋಡುತ್ತಾ “ಓ, ಹಿಮ ಬೀಳುತ್ತಿದೆ” ಎಂದು ಕೂಗಿದಳು.
ಅವಳು ತನ್ನ ಕಪಾಟಿನ ಬಾಗಿಲು ತೆಗೆದು, ಬೆಚ್ಚಗಿನ ಬಟ್ಟೆಗಳನ್ನು ಹೊರಕ್ಕೆ ಎಳೆಯ ತೊಡಗಿದಳು. ಅವಳು ಚೆಚ್ಚಗಿನ ಷರಟು, ಪ್ಯಾಂಟು, ಸ್ಕಾರ್ಫ್, ಕೋಟು, ಹ್ಯಾಟು ಇತ್ಯಾದಿ ಹಾಕಿಕೊಳ್ಳುವುದನ್ನು ಟೋರಾ ಮತ್ತು ಬೋರಾ ನೋಡುತ್ತಾ ಕುಳಿತರು.
"ಮನೆಯ ಹೊರಗೆ ಭಾರೀ ಚಳಿಯಿದೆ” ಎಂದು ಟೆಡ್ಡಿ ಕರಡಿಗಳಿಗೆ ಸ್ವೀಟಿ ವಿವರಿಸಿದಳು. "ನಿಮಗೂ ಬಹಳ ಚಳಿಯಾಗಲಿದೆ. ನೋಡುತ್ತಿರಿ, ನಾನೊಂದು ಹಿಮಗೊಂಬೆ (ಸ್ನೋ ಮ್ಯಾನ್) ಮಾಡುತ್ತೇನೆ” ಎನ್ನುತ್ತಾ ಸ್ವೀಟಿ ಉದ್ಯಾನಕ್ಕೆ ಓಡಿದಳು.
“ಏನು ಹೇಳುತ್ತಾಳೆ ಇವಳು! ಭಾರೀ ಚಳಿಯಂತೆ. ನಾವು ಕರಡಿಗಳು. ಚಳಿಯೆಂದರೆ ನಮಗೆ ಇಷ್ಟ" ಎಂದಿತು ಬೋರಾ. “ಅಷ್ಟೇ ಅಲ್ಲ, ನಮ್ಮ ದಪ್ಪ ರೋಮಗಳು ನಮ್ಮನ್ನು ಬೆಚ್ಚಗಿರಿಸುತ್ತವೆ” ಎಂದ ಟೋರಾ, ಹಿಮಗೊಂಬೆ ಎಂದರೇನೆಂದು ಕೇಳಿತು.
“ನನಗೂ ಗೊತ್ತಿಲ್ಲ. ಕಿಟಕಿಯಿಂದ ಹೊರಗೆ ನೋಡೋಣ. ಅದೇನೆಂದು ಗೊತ್ತಾದೀತು” ಎಂದಿತು ಬೋರಾ. ಉದ್ಯಾನದಲ್ಲಿ ಸುರಿದಿದ್ದ ಹಿಮದಲ್ಲಿ ಸ್ವೀಟಿ ಓಡುತ್ತಾ, ಹಾರುತ್ತಾ, ಜಿಗಿಯುದನ್ನು ಟೆಡ್ಡಿ ಕರಡಿಗಳು ಕಂಡವು.
ಅಲ್ಲಿ ಸ್ವೀಟಿ ಹಾಕಿಕೊಂಡಿದ್ದ ವೆಲ್ಲಿಂಗ್ಟನ್ ಬೂಟ್ಸುಗಳು ಮುಳುಗುವಷ್ಟು ಎತ್ತರಕ್ಕೆ ಹಿಮ ಸುರಿದಿತ್ತು. ಸ್ವೀಟಿ ನಗುತ್ತಾ, ಚೀರುತ್ತಾ ಸಂತೋಷದಿಂದ ಕುಣಿದಾಡುತ್ತಿದ್ದಳು. ಹಿಮದ ಚೆಂಡುಗಳನ್ನು ಮಾಡಿ ಹಳೆಯ ಓಕ್ ಮರಕ್ಕೆ ಎಸೆಯುತ್ತಿದ್ದಳು. ಸ್ಲೆಡ್ (ಚಕ್ರವಿಲ್ಲದ ಬಂಡಿ) ಏರಿ, ಉದ್ಯಾನದ ಮೂಲೆಯಲ್ಲಿದ್ದ ಇಳಿಜಾರಿನಲ್ಲಿ ಜಾರುತ್ತಿದ್ದಳು.
“ಓ, ಅಲ್ಲಿ ಬಹಳ ಮಜವಾಗಿದೆ. ನಾವೂ ಅಲ್ಲಿರಬೇಕಾಗಿತ್ತು" ಎಂದಿತು ಟೋರಾ. "ಹೌದು. ಈ ಕೋಣೆಯಲ್ಲಿ ಉಸಿರುಗಟ್ಟುತ್ತಿದೆ. ಈಗ ನಮ್ಮ ಜಡತನ ಕಳೆಯಬೇಕೆಂದರೆ ನಾವು ಸ್ವಲ್ಪ ಚಳಿಗಾಳಿಯಲ್ಲಿ ಅಡ್ಡಾಡಬೇಕು" ಎಂದಿತು ಬೋರಾ.
ಪುಟ್ಟ ಟೆಡ್ದಿ ಕರಡಿಗಳು ಕಿಟಕಿಯಿಂದ ಹೊರಕ್ಕೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದವು. ಸ್ವೀಟಿ ಒಂದಷ್ಟು ಹಿಮ ಒಟ್ಟು ಮಾಡಿದಳು. ಅದರಿಂದ ಒಂದು ದೊಡ್ಡ ಚೆಂಡು ರೂಪಿಸಿದಳು. ಅದರ ಮೇಲೆ ಒಂದು ಸಣ್ಣ ಹಿಮದ ಚೆಂಡನ್ನು ಇಟ್ಟಳು. ನಂತರ, ಸಣ್ಣ ಹಿಮ ಚೆಂಡಿನಲ್ಲಿ ಮೂರು ಪುಟ್ಟ ಕಲ್ಲುಗಳನ್ನಿಟ್ಟು ಬಾಯಿ ಮತ್ತು ಕಣ್ಣುಗಳನ್ನು ರೂಪಿಸಿದಳು. ತನ್ನ ಕೋಟಿನ ಜೇಬಿನಿಂದ ಒಂದು ಕ್ಯಾರೆಟ್ ಹೊರ ತೆಗೆದು, ಅದನ್ನು ಸಣ್ಣ ಹಿಮಚೆಂಡಿನಲ್ಲಿ ಬಾಯಿಯ ಮೇಲಕ್ಕೆ ಚುಚ್ಚಿ ಮೂಗು ಮಾಡಿದಳು. ತದನಂತರ, ಅದರ ಕುತ್ತಿಗೆಗೆ ಸ್ಕಾರ್ಫ್ ಕಟ್ಟಿ, ತಲೆಗೆ ಟೊಪ್ಪಿ ಇಟ್ಟು, ತಾನು ಹಿಮದಿಂದ ರೂಪಿಸಿದ ಆಕೃತಿ ಎಷ್ಟು ಚೆನ್ನಾಗಿದೆಯೆಂದು ಒಂದೆರಡು ಹೆಜ್ಜೆ ಹಿಂದಕ್ಕಿಟ್ಟು, ಸೊಂಟಕ್ಕೆ ಕೈಯಿಟ್ಟು ನೋಡುತ್ತಾ ನಿಂತಳು.
“ಅದೇ ಹಿಮಗೊಂಬೆ ಇರಬೇಕು" ಎಂದಿತು ಬೋರಾ. "ನಾವೂ ಅಂಥದೇ ಹಿಮಗೊಂಬೆ ಮಾಡಬಹುದು” ಎಂದಿತು ಟೋರಾ. ಅವು ಒಂದನ್ನೊಂದು ನೋಡುತ್ತಾ ರಹಸ್ಯ ನಗುವೊಂದನ್ನು ಚಿಮ್ಮಿಸಿದವು.
ಆ ರಾತ್ರಿ, ಸ್ವೀಟಿ ಗಾಢ ನಿದ್ದೆಯಲ್ಲಿದ್ದಾಗ, ಟೋರಾ ಮತ್ತು ಬೋರಾ ಸದ್ದಾಗದಂತೆ ಕಿಟಕಿಯ ಬಾಗಿಲು ತೆಗೆದು, ಡ್ರೈನ್ ಪೈಪಿಗೆ ಜೋತಾಡುತ್ತಾ ಉದ್ಯಾನಕ್ಕೆ ಇಳಿದವು. ಅಲ್ಲಿನ ಥಂಡಿ ಹಿಮ ಕಾಲುಗಳಿಗೆ ತಗಲಿದಾಗ ಅವು ಖುಷಿ ಪಟ್ಟವು.
ಹಿಮದ ಚೂರುಗಳು ನಿಧಾನವಾಗಿ ತೇಲುತ್ತಾ ನೆಲಕ್ಕಿಳಿಯುತ್ತಿದ್ದಂತೆ, ಇಡೀ ಉದ್ಯಾನವು ಚಂದ್ರನ ಬೆಳದಿಂಗಳಿನಲ್ಲಿ ಬೆಳಗುತ್ತಿತ್ತು. ಎರಡೂ ಟೆಡ್ದಿ ಕರಡಿಗಳು ಉದ್ಯಾನದ ಹಿಮದಲ್ಲಿ ಓಡಾಡುತ್ತಾ, ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ, ಜಾರಿ ಬೀಳುತ್ತಾ ಸಂಭ್ರಮಿಸಿದವು.
ಮುಂಜಾವದಲ್ಲಿ ಹಳೆಯ ಮರಗಳ ಎಡೆಯಿಂದ ಸೂರ್ಯನ ಕಿರಣಗಳು ತೂರಿ ಬರುವ ತನಕ ಎರಡೂ ಟೆಡ್ಡಿ ಕರಡಿಗಳು ಉದ್ಯಾನದಲ್ಲಿ ಕುಣಿಯುತ್ತಾ ಆಟವಾಡಿದವು. ಆಗ, ಡ್ರೈನ್ ಪೈಪಿನ್ನೇರಿ ಹತ್ತಿ, ಸ್ವೀಟಿಯ ಕೋಣೆ ಹೊಕ್ಕು, ಅವಳ ಪಕ್ಕದಲ್ಲಿ ಹಾಸಿಗೆಯಲ್ಲಿ ಮಲಗಿದವು. ತಮ್ಮ ಸಾಹಸದ ಬಗ್ಗೆ ಪಿಸುಗುಟ್ಟುತ್ತಾ ಪಿಸುನಗುತ್ತಾ ಮಲಗಿದವು.
ಮರುದಿನ ಬೆಳಗ್ಗೆ ಕಿಟಕಿ ಬಾಗಿಲು ತೆರೆದು ಹೊರಗೆ ನೋಡಿದ ಸ್ವೀಟಿಗೆ ಉದ್ಯಾನದಲ್ಲಿ ದಪ್ಪ ಹಿಮದ ಚಾದರ ಇನ್ನೂ ಇರುವುದನ್ನು ಕಂಡು ಖುಷಿಯೋ ಖುಷಿ. ಹಾಗೆ ನೋಡುತ್ತಿದ್ದ ಅವಳಿಗೆ ಅಚ್ಚರಿಯೋ ಅಚ್ಚರಿ. ಯಾಕೆಂದರೆ ಅಲ್ಲಿ ಅವಳು ಕಟ್ಟಿದ್ದ ಹಿಮಗೊಂಬೆಯ ಅಕ್ಕಪಕ್ಕದಲ್ಲಿ ಇನ್ನೆರಡು ಹಿಮಗೊಂಬೆಗಳು ನಗುತ್ತ ನಿಂತಿದ್ದವು!
“ಇದು ಹೇಗೆ ಸಾಧ್ಯ?” ಎಂದವಳು ತಲೆ ಕೆರೆದುಕೊಂಡಳು. ಅಷ್ಟರಲ್ಲಿ ಅವಳಿಗೆ ಕಂಡಿತು - ಕಿಟಕಿಯಿಂದ ಇಳಿದು ಬಂದು, ಕೋಣೆಯ ನೆಲ ಹಾದು, ಹಾಸಿಗೆಯಲ್ಲಿ ಎರಡು ಟೆಡ್ಡಿ ಕರಡಿಗಳು ಮಲಗಿದ ತನಕ ಮೂಡಿದ್ದ ನೀರುತುಂಬಿದ ಹೆಜ್ಜೆಗುರುತುಗಳು.
“ನೀವಿಬ್ಬರು ರಾತ್ರಿ ಏನು ಮಾಡಿದಿರಿ?" ಎಂದವಳು ಕೇಳಿದಾಗ ಟೋರಾ ಮತ್ತು ಬೋರಾ ಟೆಡ್ಡಿ ಕರಡಿಗಳು ರಹಸ್ಯಮಯ ನಗು ನಕ್ಕವು. ಅವಳಿಗೆ ಎಲ್ಲವೂ ಅರ್ಥವಾಯಿತು. “ಬನ್ನಿ, ಬನ್ನಿ, ಎದ್ದೇಳಿ. ನಾವೆಲ್ಲರೂ ಹೊರಗೆ ಆಟವಾಡೋಣ” ಎಂದು ಸ್ವೀಟಿ ಎರಡೂ ಟೆಡ್ದಿ ಕರಡಿಗಳನ್ನು ಹಾಸಿಗೆಯಿಂದ ಎಳೆಯುತ್ತಾ ಹೊರಗೋಡಿದಳು.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ