ಎರಡು ದಶಕದ ಸಂಭ್ರಮದಲ್ಲಿ ವಿಶ್ವ ಹಾಲು ದಿನಾಚರಣೆ
ಮಾನವ ಭೂಮಿಗೆ ಬಂದ ಬಳಿಕ ಪರಿಚಯವಾಗುವ ಮೊದಲ ಆಹಾರವೇ ಹಾಲು. ತಾಯಿಯ ಹಾಲು ಅಮೃತವೆನ್ನುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಸತ್ಯ ಸಂಗತಿ. ತಾಯಿಯ ಹಾಲನ್ನು ಕುಡಿದು ಬೆಳೆದ ಮಕ್ಕಳು ಬಾಟಲಿ ಹಾಲು ಕುಡಿದು ಬೆಳೆದ ಮಕ್ಕಳಿಗಿಂತ ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಉತ್ತಮ ಬೆಳವಣಿಗೆ, ಆರೋಗ್ಯವನ್ನು ಬಾಲ್ಯದಿಂದಲೇ ಪಡೆದಿರುತ್ತಾರೆ ಎನ್ನುವುದು ಹಲವಾರು ಸಂಶೋಧನೆಗಳಿಂದ ಸಿದ್ಧವಾಗಿದೆ.
ಹಾಲು ಇಲ್ಲದೇ ಜೀವನವಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ದಿನಾಲೂ ಅನ್ನ ತಿನ್ನದೇ ಇದ್ದರೂ ಹಾಲಂತೂ ಕುಡಿದೇ ಕುಡಿಯುತ್ತಾನೆ. ನೇರವಾಗಿ ಅಲ್ಲವಾದರೂ ಕಾಫಿ, ಚಹಾ, ಮೊಸರು, ಮಜ್ಜಿಗೆ, ಐಸ್ ಕ್ರೀಂ, ಪಾಯಸ ಹೀಗೆ ಹತ್ತು ಹಲವಾರು ವಸ್ತುಗಳ ಮುಖಾಂತರ ಹಾಲಿನ ಸತ್ವ ನಮ್ಮ ದೇಹವನ್ನು ಸೇರುತ್ತದೆ. ಈ ಕೊರೋನಾ ಮಹಾಮಾರಿ ಬಂದು ದೇಶವೇ ಲಾಕ್ ಡೌನ್ ಆದಾಗ ಹಾಲಿನ ಮಹತ್ವ ಚೆನ್ನಾಗಿಯೇ ಜನರಿಗೆ ತಿಳಿಯಿತು. ಲಾಕ್ ಡೌನ್ ಸಡಿಲಿಸಿದಾಗ ಹಾಲಿಗಾಗಿ ಜನರು ನಿಂತ ಕ್ಯೂ ಗಳನ್ನು ಭವಿಷ್ಯದಲ್ಲಿ ಯಾರೂ ಮರೆಯಲಾರರು.
ಇರಲಿ, ಇಂದು ಜೂನ್ ೧, ವಿಶ್ವ ಹಾಲಿನ ದಿನ. ೨೦೦೧ರಲ್ಲಿ ಈ ದಿನವನ್ನು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವ ಹಾಲಿನ ದಿನವಾಗಿ ಘೋಷಿಸಿತು. ಹೈನುಗಾರಿಕೆಯ ಬಗ್ಗೆ ವಿಶ್ವದ ಎಲ್ಲೆಡೆ ಮಾಹಿತಿ ಮತ್ತು ಅರಿವನ್ನು ಹರಡುವುದು ಇದರ ಉದ್ದೇಶವಾಗಿದೆ. ೨೦೦೧ ಕ್ಕೂ ಮೊದಲು ಬೇರೆ ಬೇರೆ ರಾಷ್ಟ್ರಗಳು ತಮ್ಮದೇ ಆದ ಹಾಲಿನ ದಿನಗಳನ್ನು ಆಚರಿಸುತ್ತಿದ್ದರು. ನಂತರ ಇಡೀ ವಿಶ್ವಕ್ಕೆ ಒಂದೇ ಹಾಲಿನ ದಿನ ಇರಲಿ, ಅದರ ಮೂಲಕ ಆ ಒಂದು ದಿನವಾದರೂ ಹಾಲಿನ ಮಹತ್ವದ ಬಗ್ಗೆ ವಿಚಾರ ಮಂಥನ ನಡೆಯಲಿ ಎಂದು ಜೂನ್ ೧ರಂದು ವಿಶ್ವ ಹಾಲಿನ ದಿನ ಎಂದು ಆಚರಿಸಲು ನಿರ್ಧರಿಸಲಾಯಿತು. ಇದೇ ಸಂದರ್ಭದಲ್ಲಿ ಈ ವರ್ಷ ಮೇ ೨೯-೩೧ರವರೆಗೆ ಹಾಲಿನ ಮಹತ್ವ ಸಾರಲು ‘ಡೈರಿ ರಾಲಿ' (Dairy Rally) ಯನ್ನೂ ಸರಳವಾಗಿ ನಡೆಸಲಾಗಿದೆ.
ಪ್ರಾಚೀನ ಕಾಲದಲ್ಲಿ ಇಲ್ಲರೂ ತಮ್ಮ ಬದುಕಿಗಾಗಿ ಹೈನುಗಾರಿಕೆಯನ್ನೇ ಅವಲಂಬಿಸಿದ್ದರು. ಆದರೆ ದಿನ ಕಳೆದಂತೆ ಹಾಲು ಮಾರಾಟದ ವಸ್ತುವಾಯಿತು. ಮೊದಲು ಎಲ್ಲರ ಮನೆಯಲ್ಲೂ ದನ-ಕರುಗಳಿದ್ದವು. ಬರ ಬರುತ್ತಾ ದನ ಕರುಗಳನ್ನು ಸಾಕುವುದನ್ನು ಜನರು ಕಮ್ಮಿ ಮಾಡಿದರು. ಗ್ರಾಮೀಣ ಭಾಗಗಳಿಂದ ಜನರು ಉದ್ಯೋಗ ನಿಮಿತ್ತ ಪೇಟೆಗಳತ್ತ ಬಂದರು. ಹೀಗೆ ನಾಗರಿಕತೆ ಬೆಳೆಯುತ್ತಾ ನಾವು ಕೃಷಿಯನ್ನು ಕಮ್ಮಿ ಮಾಡಿಕೊಂಡೆವು. ಹೈನುಗಾರಿಕೆಯಿಂದ ವಿಮುಖರಾಗುತ್ತಾ ಬಂದೆವು. ನಿಜಕ್ಕೂ ನೋಡಿದರೆ ಒಂದು ದನದಿಂದ ಇರುವ ಲಾಭಗಳು ಹಲವು. ಅದರಿಂದ ಹಾಲು ಸಿಗುತ್ತದೆ. ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಹತ್ತು ಹಲವಾರು ವಸ್ತುಗಳು ದೊರೆಯುತ್ತವೆ. ದನದ ಸೆಗಣಿ, ಮೂತ್ರ ಉತ್ತಮ ಸಾವಯವ ಗೊಬ್ಬರ. ಬದಲಾದ ಪರಿಸ್ಥಿತಿಯಲ್ಲಿ ಎಲ್ಲರೂ ದನ ಸಾಕಲು ಸಾಧ್ಯವಿಲ್ಲ ಎಂದಾದ ಬಳಿಕ ಹಾಲು ಮಾರಾಟದ ಒಕ್ಕೂಟಗಳು ಪ್ರಾರಂಭವಾದುವು. ಹಾಲಿನ ಡೈರಿಗೆ ನಿಮ್ಮ ಮನೆಯ ಹಾಲನ್ನು ಕೊಂಡು ಹೋಗಿ ಕೊಟ್ಟು ಸಂಪಾದನೆ ಪ್ರಾರಂಭವಾಯಿತು. ಈ ಹಾಲನ್ನು ಪ್ಯಾಸ್ಚರೀಕರಿಸಿ ನಿಮ್ಮ ಮನೆ ಮನೆಗೆ ಹಾಲಿನ ತೊಟ್ಟೆಗಳ ರೂಪದಲ್ಲಿ ಬರಲು ಪ್ರಾರಂಭವಾಯಿತು. ಕರ್ನಾಟಕದಲ್ಲಿ ಹಾಲು ಉತ್ಪಾದಕರ ಮಹಾಮಂಡಳಿಯು ‘ನಂದಿನಿ' ಎಂಬ ಬ್ರಾಂಡ್ ರೂಪದಲ್ಲಿ ತನ್ನ ಉತ್ಪಾದನೆಯನ್ನು ಮಾರುಕಟ್ಟೆ ಮಾಡುತ್ತದೆ. ಇದೊಂದು ರೀತಿಯಲ್ಲಿ ಶ್ವೇತ ಕ್ರಾಂತಿ ಎಂದೇ ಹೇಳ ಬಹುದು. ನಂದಿನಿ ಹೆಸರಿನಲ್ಲಿ ಈಗ ಹಾಲು, ಮೊಸರು ಮಜ್ಜಿಗೆ, ಲಸ್ಸಿ, ಸುವಾಸಿತ ಬಾದಾಮಿ ಹಾಲು, ಕಾಫಿ, ಕಷಾಯ, ಬೆಣ್ಣೆ, ತುಪ್ಪ, ಪನ್ನೀರ್, ಖೋವಾ, ಪೇಡಾ, ಬಿಸ್ಕೆಟ್, ಮೈಸೂರ್ ಪಾಕ್ ಹೀಗೆ ಸುಮಾರು ೫೦ಕ್ಕೂ ಅಧಿಕ ಉತ್ಪಾದನೆಗಳಿವೆ. ಇದರಿಂದ ನಿಜಕ್ಕೂ ಹಾಲಿಗೆ ರಾಜ ಮರ್ಯಾದೆ ದೊರಕಿದೆ. ಮಹಿಳೆಯರಿಗೂ ಉದ್ಯೋಗ ದೊರೆತಿದೆ. ಇದು ಕೇವಲ ನಮ್ಮ ರಾಜ್ಯದ ಕಥೆಯಲ್ಲ ಎಲ್ಲೆಡೆ ಉದಾಹರಣೆಗೆ ಗುಜರಾತ್ ನಲ್ಲಿ ಅಮುಲ್, ಕೇರಳದಲ್ಲಿ ಮಿಲ್ಮಾ ಬ್ರಾಂಡ್ ನಲ್ಲಿ ಹಾಲು ಮತ್ತು ಅದರ ಉತ್ಪಾದನೆಗಳು ಮಾರಾಟವಾಗುತ್ತವೆ.ಕರ್ನಾಟಕದಲ್ಲೂ ಕೃಷ್ಣಾ, ಆರೋಗ್ಯ, ಮಿಲ್ಕಿ ಮಿಸ್ಟ್ ಮುಂತಾದ ಹೆಸರಿನ ಹಾಲು ಮತ್ತು ಹಾಲಿನ ಉತ್ಪಾಪಾದನೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಹಾಲು ದಿನದ ಮಹತ್ವವೆಂದರೆ ಹಾಲಿನ ಉತ್ಪಾದನೆಯ ಗುಣ ಮಟ್ಟ ವೃದ್ಧಿಸಿ ಎಲ್ಲರಿಗೂ ಹಾಲಿನ ಉತ್ಪಾದನೆಗಳ ಮತ್ತು ಆರೋಗ್ಯದಾಯಕ ಅಂಶಗಳ ಪರಿಚಯ ಮಾಡಿಕೊಡುವುದು. ಹಾಲಿನಲ್ಲಿ ಶೇಕಡಾ ೮೦ರಷ್ಟು ನೀರಿನಂಶ ಇದೆ. ಉಳಿದ ಅಂಶಗಳಲ್ಲಿ ನಮ್ಮ ಆರೋಗ್ಯ ವೃದ್ಧಿಸುವ ಕ್ಯಾಲ್ಸಿಯಂ, ಪ್ರೋಟೀನ್, ಕೊಬ್ಬು, ವಿಟಮಿನ್ ಗಳು, ಅಯೋಡಿನ್ ಹೀಗೆ ದೇಹಕ್ಕೆ ಶಕ್ತಿ ನೀಡುವ ಹತ್ತು ಹಲವಾರು ಅಂಶಗಳಿವೆ. ಎಷ್ಟೇ ಖಾರದ ಆಹಾರವನ್ನು ತಿಂದರೂ ಕೊನೆಗೆ ಹಾಲು ಅಥವಾ ಮಜ್ಜಿಗೆ ಕುಡಿದರೆ ಹೊಟ್ಟೆ ಉರಿಯುವುದಿಲ್ಲ ಎಂಬುದನ್ನು ಗಮನಿಸಿ.
ಹಾಲು ಎಂಬುವುದು ನಮಗೆ ಹೈನುಗಾರಿಕೆಯಿಂದ ನೈಸರ್ಗಿಕವಾಗಿ ಸಿಗುವ ಅಮೃತ. ನಮ್ಮಲ್ಲಿ ದನದ ಹಾಲು ಅಧಿಕ ಪ್ರಮಾಣದಲ್ಲಿ ಬಳಕೆಯಾಗುತ್ತೆ. ಕೆಲವು ಕಡೆ ಎಮ್ಮೆ, ಆಡುವಿನ ಹಾಲನ್ನು ಉಪಯೋಗಿಸುತ್ತಾರೆ. ಆದರೆ ಕೆಲವು ದುರುಳರು ಕೃತಕವಾಗಿ ರಾಸಾಯನಿಕಗಳನ್ನು ಬಳಸಿ ಹಾಲು ತಯಾರಿಸಿ ಜನರ ಆರೋಗ್ಯವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ವಿಶ್ವ ಹಾಲಿನ ದಿನವಾದ ಇಂದು ನಾವು ಶುದ್ಧ ಹಾಲನ್ನು ಬಳಸೋಣ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ವಿಶ್ವ ಹಾಲಿನ ದಿನಕ್ಕೆ ೨೦ ವರ್ಷಗಳ ಸಂದರ್ಭದಲ್ಲಿ ಹೈನುಗಾರಿಕೆಯನ್ನೇ ಒಂದು ವೃತ್ತಿಯನ್ನಾಗಿಸಿದವರನ್ನೂ ಅವಶ್ಯ ನೆನೆಯೋಣ.
ಚಿತ್ರ: ಅಂತರ್ಜಾಲ ಕೃಪೆ