ಎರಡು ನ್ಯಾನೋ ಕಥೆಗಳು - ಅಪ್ಪ ಮತ್ತು ಅಮ್ಮ

ಎರಡು ನ್ಯಾನೋ ಕಥೆಗಳು - ಅಪ್ಪ ಮತ್ತು ಅಮ್ಮ

* ಅಪ್ಪ*

ಮೂವತ್ತೇಳು ವರುಷಗಳ ಹಿಂದಿನ ಒಂದು ಘಟನೆ. ನನ್ನವರು ಪೇಟೆಯಿಂದ ಬಂದವರೇ ನಿನ್ನ ಅಪ್ಪನಿಗೆ ತುಂಬಾ ಹುಶಾರಿಲ್ಲವಂತೆ ತಕ್ಷಣ ಹೊರಡೋಣ ಎಂದರು. ಪುಟ್ಟ ಮಗನನ್ನು ಹೆಗಲಿಗೆ ಹಾಕಿಕೊಂಡು, ಅಪ್ಪನ ಮನೆಗೆ ತಲುಪಿದಾಗ, ಕಂಡದ್ದು ಉದ್ದಕ್ಕೆ, ಬಿಳಿ ಬಟ್ಟೆ ಹೊದೆಸಿ ಮಲಗಿಸಿದ ನನ್ನ ಮುದ್ದಿನ, ಪ್ರೀತಿಯ, ಗೌರವದ ನನ್ನಪ್ಪ. ಏನು ಮಾಡಬೇಕೆಂದು ತೋಚದೆ ಕಲ್ಲಾಗಿ ಕುಳಿತ ಮನಸ್ಸು, ಅಪ್ಪನೊಂದಿಗೆ ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕಿತು. ಈ ಸಮಯ ನನ್ನ ಜೀವನದಲ್ಲಿ ಮತ್ತೆಂದೂ ಬರದು ಎಂಬ ಯೋಚನೆಯಲ್ಲಿದ್ದಾಗ, ಪುಟ್ಟ ಮಗನ ಅಮ್ಮಾ ಎಂಬ ಧ್ವನಿ ನನ್ನನ್ನು ಎಚ್ಚರಿಸಿತು.

-ರತ್ನಾ ಭಟ್,ತಲಂಜೇರಿ

*****

*ಅಮ್ಮ*

ಮಂದಾಕಿನಿಗೆ ಆತನ ಮೇಲೆ ಅಪಾರವಾದ ಪ್ರೀತಿ. ಅದಕ್ಜಿಂತಲೂ ಹೆಚ್ಚು ನಂಬಿಕೆ, ವಿಶ್ವಾಸ. ಇದಕ್ಕೆ ಕಾರಣ, ಬಡವರ ಮನೆಯ ಹುಡುಗಿಯಾದ ಮಂದಾಕಿನಿಯ ಮೇಲೆ ಆತ ತೋರಿಸಿದ ಒಲವು. ಒಲವೆಂಬ ಸಮ್ಮೋಹಿನಿಗೆ ಒಳಗಾದ ಮಂದಾಕಿನಿ ಆತನ ಭರವಸೆಯ ಮಾತುಗಳಿಗೆ ಮರುಳಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಂಡಳು. ಅದೇ ನಂಬಿಕೆಯಲ್ಲಿಯೇ ಮಂದಾಕಿನಿ ಎಂಟು ತಿಂಗಳೂ ಕಾದಳು. ಬೆಂದಳು. ಕೊನೆಗೂ ತನ್ನ  ನಂಬಿಕೆಯ ಹುಡುಗ ಅಪ್ಪನಾಗಲು ಒಪ್ಪಲಿಲ್ಲ.  ಒಡಹುಟ್ಟಿದ ಅಕ್ಕನೇ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅಮ್ಮನಾದಳು. ಅಮ್ಮನಾದರೂ ಅಮ್ಮನಾಗದ ಮಂದಾಕಿನಿ ವಿದೇಶಕ್ಕೆ ಹಾರಿ ಹೊಸಜೀವನ ಕಟ್ಟಿಕೊಂಡಳು. 

- ಶ್ರೀರಾಮ ದಿವಾಣ