ಎರಡು ನ್ಯಾನೋ ಕಥೆಗಳು

ಎರಡು ನ್ಯಾನೋ ಕಥೆಗಳು

ಕಥೆ ೧ - ನಾಟಕ

ಅಕ್ಕಪಕ್ಕದ ಮನೆಯ ರವಿ ರಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡೂ ಮನೆಗಳ ಹಿರಿಯರು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಯಾರು ಅಡ್ಡಿ ಬಂದರೂ ರಮಾಳೇ ಬಾಳ ಸಂಗಾತಿ ನಿರ್ಧರಿಸಿದ್ದ ರವಿ. ತೋಟದ ಕೆರೆಗೆ ಬಿದ್ದ ರಮಾಳನ್ನು ರವಿ ನೀರಿನಿಂದ ಮೇಲೆತ್ತಿ ಜೀವ ಉಳಿಸಿದ. ಹಳೆ ದ್ವೇಷ, ಜಗಳ ಮಂಜಿನಂತೆ ಕರಗಿ, ಎಳ್ಳು ಬೆಲ್ಲ ವಿನಿಮಯದ ಮೂಲಕ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಿದರು. ನಾಟಕ ಫಲಿಸಿದ್ದಕ್ಕಾಗಿ ಮೀಸೆಯಡಿಯಲ್ಲಿಯೇ ನಕ್ಕ ರವಿ.

-ರತ್ನಾ ಕೆ ಭಟ್,ತಲಂಜೇರಿ

***

ಕಥೆ ೨ - ಮಮತೆ

ಆಸ್ತಿ ಪತ್ರವನ್ನು ಹುಡುಕುವಾಗ ಆಕಸ್ಮಿಕವಾಗಿ ರವಿಯ ಕೈಗೆ ಪತ್ರವೊಂದು ಸಿಕ್ಕಿತು. ಆ ಪತ್ರವನ್ನು ಹಿಡಿದ ಕೈಗಳು ನಡುಗುತ್ತಿದ್ದವು. ತಾನು ದತ್ತು ಪಡೆದ ಪುತ್ರನೆಂದು ರವಿಗೆ ಆ ದಿನವೇ ತಿಳಿದಿದ್ದು. ಈ ದಿನ ಅಮ್ಮ ಬದುಕಿಲ್ಲ. ಆಕೆ ಕಷ್ಟಪಟ್ಟು ದುಡಿದು ತನ್ನನ್ನು ಸಾಲುಹಿದ ದಿನಗಳು ರವಿಗೆ ನೆನಪಾದವು. ಆಕೆಗೆ ಸ್ವಂತ ಮಗನಿದ್ದರೂ ರವಿಯನ್ನು ಎಂದೂ ಸಾಕು ಮಗನಂತೆ ಕಂಡಿರಲಿಲ್ಲ. ಕಳೆದ ಜನ್ಮದ ಯಾವುದೋ ಋಣಾನುಬಂಧ ಈ ಜನ್ಮದಲ್ಲಿ ನಮ್ಮನ್ನು ಮತ್ತೆ ಸೇರಿಸಿತೆಂದು ಆತ ಭಾವಿಸಿದ.

-ನಿರಂಜನ ಕೇಶವ ನಾಯಕ, ಮಂಗಳೂರು.

***

ಚಿತ್ರ ಕೃಪೆ: ಇಂಟರ್ನೆಟ್ ತಾಣ