ಎರಡು ಪ್ರಸಂಗಗಳು

ಎರಡು ಪ್ರಸಂಗಗಳು

ಪ್ರಸಂಗ - 1

ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯಕ್ರಮ ನಡೀತಾ ಇತ್ತು. ಕಾಲೇಜು ವಿಭಾಗದ ಕ್ಲಾಸ್ ಮುಗಿಸಿಕೊಂಡು ನಾನು ತರಗತಿಯಿಂದ ಹೊರಗೆ ಹೊರಟಿದ್ದೆ. ನಮ್ಮ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಹೊರಗೆ ಬಂದರು. ಅಷ್ಟರಲ್ಲಿಯೇ ನಾಲ್ಕು ಜನ ಪದವಿ ಓದುತ್ತಿರುವ ಅಥವಾ ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳೋ ಏನೋ ಗೊತ್ತಿಲ್ಲ, ನಮ್ಮ ವಿದ್ಯಾರ್ಥಿನಿಯರನ್ನೇ ನೋಡುತ್ತ ಕೆಟ್ಟದಾಗಿ ನಗುತ್ತ ಬರುತ್ತಿದ್ದರು. ಅವರ ವರ್ತನೆಯೂ ಸಹ ಕೆಟ್ಟದ್ದೇ ಆಗಿತ್ತು. ನನಗೆ ಸಹಿಸಲಾಗಲಿಲ್ಲ. ’ಏನ್ರಯ್ಯಾ ಮುಖ್ಯವಾದ ಗೇಟ್ ಇರೋದು ಆಕಡೆ ಇಲ್ಲೇನು ಕೆಲಸ ನಿಮಗೆ, ಅಲ್ಲದೆ ಬೇರೆ ಯಾವುದೋ ಕಾಲೇಜಿನ ವಿದ್ಯಾರ್ಥಿಗಳಾದ ನೀವು ಇಲ್ಲೇಕೆ ಬರೋದು ?” ಎಂದು ಪ್ರಶ್ನಿಸಿದೆ. “ ಏನೂ ಇಲ್ಲ ಬಿಡ್ರಿ ಸರ್ “ ಎಂದರು. “ ಮತ್ತೆ ಇಲ್ಯಾಕೆ ಇದೀರಿ ಹೋಗಿ “ ಎಂದು ಜೋರು ಮಾಡಿದೆ. ಮಣಮಣನೆ ಬೈತಾ ಆ ಹುಡುಗರು ನಮ್ಮ ಕಾಲೇಜಿನ ಹಿಂಭಾಗಕ್ಕೆ ಹೋದರು. ನಾನು ಅವರು ಅತ್ತ ಹೋದರು ಬಿಡೆಂದು ಹೊರಟಿದ್ದೆ, ಅಷ್ಟರಲ್ಲಿಯೇ ನನ್ನ ಬೆನ್ನ ಹಿಂದಿನಿಂದ ಒಂದು ಕಲ್ಲು ತೂರಿ ಬಂದು ಕಾಲಬಳಿ ಬಿತ್ತು. ತಕ್ಷಣ ನಾನು ತಿರುಗಿ ನನ್ನ ವಿದ್ಯಾರ್ಥಿಗಳನ್ನು ಕೇಳಿದೆ “ಯಾರದು ಕಲ್ಲು ಒಗೆದವರು ? “ ಎಂದು. ನನ್ನ ವಿದ್ಯಾರ್ಥಿಗಳು ಬಂದು “ ಸರ್ ಆ ಹುಡುಗರು ನಿಮಗೆ ಏನೇನೋ ಬೈತಾ ಕಲ್ಲೊಗೆದು ಕಂಪೌಂಡ್ ಜಿಗಿದು ಓಡಿಹೋದರು “ ಎಂದರು. “ ಓಡಿ ಎಲ್ಲಿದ್ದಾರೆ ನೋಡಿ “ ಎಂದೆ. “ ಆಗಲೇ ಜೋರಾಗಿ ಓಡಿಹೋದರು ಸರ್ “ ಎಂದರು ವಿದ್ಯಾರ್ಥಿಗಳು. ಈ ಸಂಗತಿಯನ್ನು ನಾನು ಮನೆಯಲ್ಲಿಯೂ ಹೇಳಲಿಲ್ಲ. ಕಾಲೇಜಿನ ವಿದ್ಯಾರ್ಥಿನಿಯರನ್ನು ನನ್ನ ಮಕ್ಕಳೆಂದೇ ತಿಳಿದು, ಅವರ ಜವಾಬ್ದಾರಿ ನನ್ನದೆಂದು ನಾನು ಯುವಕರಿಗೆ ಮಾತನಾಡಿದ್ದರ ಪ್ರತಿಫಲ ಇದು.

ಪ್ರಸಂಗ - 2

ನಿನ್ನೆ ಯಾವುದೋ ಒಂದು ಕೆಲಸಕ್ಕಾಗಿ ಮಾರ್ಕೆಟ್ ಗೆ ಹೋಗಿದ್ದೆ. ಒಂದೆಡೆ ನಾನು ನಿಂತಾಗ ಒಬ್ಬ ಯುವಕ ಬಂದು"ನಮಸ್ಕಾರ ಸರ್" ಎಂದ. ನನಗೆ ಗೊತ್ತಾಗಲಿಲ್ಲ. "ನಮಸ್ಕಾರ. ಯಾರಪ್ಪ ನೀನು ಗೊತ್ತಾಗಲಿಲ್ಲ" ಎಂದೆ. "ಸರ್ ನಾನು ನಿಮ್ಮ ಸ್ಟುಡೆಂಟ್ ತಿಪ್ಪೇರುದ್ರ" ಎಂದ. "ಓಹ್! ಹೌದಾ, ಸಂತೋಷ ಯಾವ ಬ್ಯಾಚ್?" ಎಂದೆ. "ಸರ್2012ರಲ್ಲಿ ಪಿಯುಸಿ ಸರ್" ಎಂದ. "ಓಹ್ ಆಗಲೇ ಹತ್ತು ವರ್ಷಗಳೇ ಕಳೆದುಹೋದವು, ಏನ್ ಮಾಡ್ಕೊಂಡಿದೀಯ?" ಎಂದೆ. "ಸರ್ ನಾನು ಕೆಪಿಟಿಸಿಎಲ್ ನಲ್ಲಿ ಜ್ಯೂನಿಯರ್ ಎಂಜಿನಿಯರ್" ಎಂದ. ನನಗೆ ತುಂಬ ಹೆಮ್ಮೆಯೆನಿಸಿತು. ನನ್ನ ವಿದ್ಯಾರ್ಥಿ ಒಳ್ಳೆಯ ಕೆಲಸದಲ್ಲಿದ್ದಾನಲ್ಲ ಅಂತ. ತಾನೇ ಮುಂದುವರೆಸಿದ"ಸರ್ ನಾನು ಪಿಯುಸಿ ಮುಗಿಸಿದ ಮೇಲೆ ತುಮಕೂರಿನಲ್ಲಿ ಡಿಪ್ಲೊಮಾ ಮಾಡಿದೆ. ಆಮೇಲೆ ಕೆಲದಿನ ಬೆಂಗಳೂರಿನಲ್ಲಿಯೇ ತಾತ್ಕಾಲಿಕವಾಗಿ ಕೆಲಸ ಮಾಡ್ತಿದ್ದೆ. ಅಷ್ಟರಲ್ಲಿಯೇ ಕೆಪಿಟಿಸಿಎಲ್ ನಲ್ಲಿ ಹುದ್ದೆ ಖಾಲಿ ಇರೋದರ ಅರ್ಜಿ ಕರೆದರು. ಅಲ್ಲಿ ಸೆಲೆಕ್ಟ್ ಆಗಿ ಈಗ ಇದೇ ತಾಲೂಕಿನಲ್ಲಿ ಕೆಲಸ ಮಾಡ್ತಿದೀನಿ ಸರ್" ಎಂದ. "ಇನ್ನೂ ಚೆನ್ನಾಗಿ ಬೆಳೆ, ಮತ್ತೆ ಪ್ರಮೋಷನ್ ಏನಾದರೂ ಇದೆಯಾ?" ಎಂದೆ. ಈಗಾಗಲೇ ಅದರ ಪರೀಕ್ಷೆಯನ್ನೂ ಬರೆದಿದೀನಿ ಸರ್ ಪಾಸಾಗಿದೀನಿ, ಇಷ್ಟರಲ್ಲಿಯೇ ಪ್ರಮೋಷನ್ ಬರುತ್ತೆ ಸರ್" ಎಂದ. "ಶಭಾಶ್" ಎಂದೆ. ಮನತುಂಬಿ ಬಂತು. "ಒಳ್ಳೆದಾಗಲಿ ಇನ್ನೂ ಎತ್ತರ ಬೆಳೆ" ಎಂದು ಹಾರೈಸಿ ಬೀಳ್ಕೊಟ್ಟೆ. ನನಗೆ ಮತ್ತೆ ಮತ್ತೆ ನೆನಪಾಗೋದು ಅಷ್ಟೆಲ್ಲ ಉದ್ಯೋಗದಲ್ಲಿದ್ದರೂ ಅವನ ಕಣ್ಣುಗಳಲ್ಲಿ ತುಳುಕುತ್ತಿದ್ದ ವಿನಯತೆ, ಗೌರವ. ಅದು ನನಗೆ ಹೆಮ್ಮೆ ತಂದಿತು. ಕಲಿಸಿದ ವಿದ್ಯಾರ್ಥಿಗಳು ಒಂದು ಹಂತಕ್ಕೇರಿ ಗೌರವಯುತವಾಗಿ ನೆಮ್ಮದಿಯ ಜೀವನ ಮಾಡುತ್ತಾರೆಂದರೆ ಒಬ್ಬ ಶಿಕ್ಷಕನಿಗೆ ಮತ್ತಿನ್ನೇನು ಬೇಕು. ವೃತ್ತಿಯ ಬಗ್ಗೆ ಅಭಿಮಾನ ಮೂಡುವುದೇ ಇಂಥ ಸಂದರ್ಭಗಳಲ್ಲಿ.

***

ಈ ಮೇಲಿನ ಎರಡೂ ಪ್ರಸಂಗಗಳಲ್ಲಿ ಯುವಕರು ಹೇಗಿದ್ದಾರೆ ಎಂಬುದನ್ನು ತಿಳಿಸುತ್ತದೆ. ಒಂದೆಡೆ ದುರ್ವರ್ತನೆ ಮತ್ತೊಂದೆಡೆ ಸದ್ವರ್ತನೆ. ಮನೆಯಲ್ಲಿ ಪಾಲಕರೂ ಸಹ ತಮ್ಮ ಮಕ್ಕಳ ವಿಷಯದಲ್ಲಿ ಜವಾಬ್ದಾರಿ ವಹಿಸಬೇಕಾಗುತ್ತದೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿದೀವಿ ಎಂದರೆ ಅದರರ್ಥ ಸ್ವೇಚ್ಛಾಚಾರವಲ್ಲ. ಅದಕ್ಕೂ ಒಂದು ನಿಯಮ, ಕಟ್ಟುಪಾಡುಗಳಿರುತ್ತವೆ. ಅದನ್ನು ಮೀರಿದರೆ ಅದು ದುರ್ವರ್ತನೆಯೇ ಆಗುತ್ತದೆ.

ಮೊದಲನೇ ಪ್ರಸಂಗದಲ್ಲಿ ಶಿಕ್ಷಕರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಗೌರವಿಸಬೇಕೆಂದು ತಿಳಿಯಲಾರದ ನಡತೆ. ಇದನ್ನು ರೂಪಿಸುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರವೂ ಇದೆ. ಯಾವುದು ಸರಿ ಯಾವುದು ತಪ್ಪೆಂದು ತಿಳಿಸದಿದ್ದರೆ ಅವೇ ಬೆಳೆದು ಹೆಮ್ಮರವಾಗುತ್ತವೆ, ಸಮಾಜಕ್ಕೆ ಕಂಟಕಪ್ರಾಯವಾಗುತ್ತವೆ. ದುರಂತವೆಂದರೆ ಪಾಲಕರೂ ಮಕ್ಕಳ ಬಗ್ಗೆ ಇಂಥ ವಿಷಯಗಳಲ್ಲಿ ನಿರ್ಲಕ್ಷ್ಯಧೋರಣೆ ಬೆಳೆಸಿಕೊಂಡಿರೋದು, ಶಿಕ್ಷಕರು ಸಹ ಉಳಿದೆಲ್ಲ ಯಾಕೆ ನಮ್ಮ ಪಾಠ ನಮ್ಮ ಸಂಬಳ ಎಂಬಂತಾಗಿಬಿಟ್ಟಿರುವುದು.

ಎರಡನೇ ಪ್ರಸಂಗದಲ್ಲಿ ನಾವು ಕಲಿಸಿದ ನಾಲ್ಕಕ್ಷರಕ್ಕೆ ಹೀಗೆ ಎಲ್ಲೆಂದರಲ್ಲಿ ನಮಗರಿಯದಂತೇ ನಮಗೆ ಮನತುಂಬಿದ ಗೌರವ ಸಿಗುತ್ತಲ್ಲ ಅದು ಎಷ್ಟು ಕೋಟಿ ಕೊಟ್ಟರೂ ಸಿಗದು. ಯಾವ ಪ್ರಶಸ್ತಿ, ಸನ್ಮಾನ, ಬಿರುದುಬಾವಲಿಗಳಿಗಿಂತ ದೊಡ್ಡದು. ಇಲ್ಲಿ ಮನೆ, ಸುತ್ತಲ ಪರಿಸರ, ಕಲಿಕೆಯಿಂದಾಗಿ ವ್ಯಕ್ತಿಯೊಳಗೆ ತನ್ನಲ್ಲಿ ತಾನೇ ಉತ್ತಮ ವರ್ತನೆ ಬೆಳೀತಾ ಹೋಗುತ್ತದೆ ಎಂಬುದು.

ಈ ಎರಡೂ ಪ್ರಸಂಗಗಳಿಂದ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ನೀವೇ ನಿರ್ಧರಿಸಿ.

-ಸಿದ್ಧರಾಮ ಕೂಡ್ಲಿಗಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ