ಎರಡು ಬೌಲ್ ಹಲ್ವಾ...!

ಎರಡು ಬೌಲ್ ಹಲ್ವಾ...!

ಅಬುಧಾಬಿಯಲ್ಲಿರುವ ನನ್ನ ಶಾಲಾ ದಿನಗಳ ಮಿತ್ರ ದಿನೇಶ್ ನಿನ್ನೆ ನಮ್ಮ ಬಳಗಕ್ಕೆ ಸೊಗಸಾದ, ಭಾವನಾತ್ಮಕವಾದ ಹಿಂದಿ ಭಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದ. ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ನಿಮ್ಮ ಜೊತೆ ಹಂಚಿಕೊಳ್ಳಲು ಮನಸ್ಸಾಯಿತು. ನಮ್ಮ ಮನೆಯಲ್ಲಿನ ಅಥವಾ ಪರಿಚಯದ ಹಿರಿಯರಿಗೆ ಮತ್ತು ಅವರ ಅನುಭವದ ಮಾತುಗಳಿಗೆ ನಾವು ಸದಾ ಗೌರವ ನೀಡಬೇಕು. ಈ ವಿಡಿಯೋದ ಮೂಲ ಲೇಖಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಕಥಾ ರೂಪದಲ್ಲಿರುವ ಈ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಓದಿ.. ಚೆನ್ನಾಗಿದೆ…

ನಾನಾಗ ಎಂಟನೇ ತರಗತಿಯಲ್ಲಿದ್ದೆ. ಕಚೇರಿ ಕೆಲಸ ಇಲ್ಲದ ಸಮಯದಲ್ಲಿ ಮನೆಯಲ್ಲಿರುವಾಗ ಯಾವಾಗಲೂ ತನ್ನ ಪಾಡಿಗೇ ಇರುತ್ತಿದ್ದ ನನ್ನ ಅಪ್ಪ ಆ ಒಂದು ದಿನ ಅಡಿಗೆ ಮನೆಗೆ ಹೋಗಿ ಏನೋ ತಯಾರು ಮಾಡುತ್ತಿದ್ದರು. ಆ ಸಮಯ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನೂ ನನ್ನ ಪಾಡಿಗೆ ಓದಿಕೊಳ್ಳುತ್ತಿದ್ದೆ. ಅವರು ಹಲ್ವಾ ತಯಾರಿಸುತ್ತಿದ್ದರು. ಹಲ್ವಾ ತಯಾರಿಸಿದ ಬಳಿಕ ಅದನ್ನು ಎರಡು ಬೌಲ್ ಗಳಿಗೆ ಹಾಕಿ ನನ್ನ ಮುಂದೆ ತಂದು ಇರಿಸಿದರು ಮತ್ತು ಹೇಳಿದರು “ಮಗಾ, ಯಾವುದಾದರೂ ಒಂದು ಬೌಲ್ ತೆಗೆದುಕೋ”

ನಾನು ಆಶ್ಚರ್ಯ ಚಕಿತನಾಗಿ “ಏನಪ್ಪಾ ವಿಶೇಷ? ಹಲ್ವಾ ಮಾಡಿದ್ದೀಯಾ?”

ತಂದೆ ನಗುತ್ತಾ “ ಏನಿಲ್ಲ, ನಿನ್ನ ಬಾಯಿ ಸಿಹಿ ಮಾಡೋಣ ಅಂತ ಕಣೋ” ಅಂದರು.

ಎರಡು ಬೌಲ್ ಗಮನಿಸಿದಾಗ ಒಂದರಲ್ಲಿ ಹಲ್ವಾ ಮೇಲ್ಗಡೆ ಎರಡು ತುಂಡು ಬಾದಾಮಿಗಳಿದ್ದುವು. ಮತ್ತೊಂದರ ಮೇಲ್ಗಡೆ ಏನೂ ಇರಲಿಲ್ಲ. ನಾವು ಸಾಧಾರಣ ಕುಟುಂಬದಲ್ಲಿದ್ದುದರಿಂದ ಬಾದಾಮಿ ಮುಂತಾದ ಡ್ರೈಫ್ರುಟ್ಸ್ ಗಳನ್ನು ಅಪರೂಪಕ್ಕೇ ನೋಡುತ್ತಿದ್ದುದು. ಆ ಕಾರಣದಿಂದ ನಾನು ಆಸೆಯಿಂದ ಬಾದಾಮಿ ಇರುವ ಬೌಲ್ ಅನ್ನೇ ಆಯ್ಕೆ ಮಾಡಿಕೊಂಡೆ. ಅಪ್ಪ ಇನ್ನೊಂದು ತೆಗೆದುಕೊಂಡರು. ಅಪ್ಪ ತಿನ್ನುತ್ತಿದ್ದ ಹಲ್ವಾದ ಕೆಳಗಡೆ ಸುಮಾರು ಬಾದಾಮಿ ತುಂಡುಗಳಿದ್ದವು. ಅದನ್ನು ನೋಡಿ ನನಗೆ ಅಚ್ಚರಿಯಾಯಿತು. ನನ್ನ ಸ್ವಾರ್ಥ ಬುದ್ಧಿಯ ಬಗ್ಗೆ ನನಗೆ ನಾಚಿಗೆಯಾಯಿತು. ಆದರೆ ಅಪ್ಪ ಈ ವಿಷಯವಾಗಿ ಏನೂ ಮಾತನಾಡಲಿಲ್ಲ, ನನಗೂ ಮಾತುಗಳು ಬರಲಿಲ್ಲ. ಅವರ ಪಾಡಿಗೆ ಹಲ್ವ ತಿಂದು ಮುಗಿಸಿದರು.  ನಂತರ ನನ್ನನ್ನು ಕರೆದು ಹೇಳಿದರು, ‘ಮಗೂ, ನಾವು ಯಾವುದನ್ನು ನೋಡುತ್ತೇವೆಯೋ ಅದು ಯಾವಾಗಲೂ ಪೂರ್ಣವಾಗಿ ಸತ್ಯವಾಗಿರುವುದಿಲ್ಲ. ಅದರ ಒಳಾರ್ಥ ಬೇರೆಯೇ ಇರಬಹುದು. ಸ್ವಾರ್ಥವನ್ನು ನಾವು ಬಾಳಿನಲ್ಲಿ ತುಂಬಿಕೊಂಡರೆ ಮುಂದೆ ಭವಿಷ್ಯದಲ್ಲಿ ನಾವು ಗೆದ್ದರೂ ನಮ್ಮ ಅಂತರಾತ್ಮ ನಾವು ಸೋತಿದ್ದೇವೆ ಎಂದೇ ಹೇಳುತ್ತದೆ. ನಿನಗೆ ಈಗಾಗಲೇ ಇದರ ಅನುಭವವಾಗಿರಬಹುದು ಅಲ್ಲವೇ?” ಎಂದು ನನ್ನ ಮುಖವನ್ನೇ ದಿಟ್ಟಿಸಿದರು. ನಾನು ಸುಮ್ಮನೇ ತಲೆಯಾಡಿಸಿದೆ.

ಮರು ದಿನ ಅಪ್ಪ ಮತ್ತೆ ಹಲ್ವಾ ಮಾಡಿದರು. ಈ ಸಲವೂ ಎರಡು ಬೌಲ್ ಗೆ ಹಾಕಿ ನನ್ನ ಮುಂದೆ ಇರಿಸಿದರು. ಈ ಸಲವೂ ಒಂದರ ಮೇಲೆ ಬಾದಾಮಿ ಚೂರುಗಳು ಇದ್ದರೆ ಮತ್ತೊಂದರಲ್ಲಿ ಇರಲಿಲ್ಲ. ಮೊದಲ ದಿನದ ಅನುಭವದ ಅರಿವಿದ್ದ ನಾನು ಬಾದಾಮಿಗಳಿಲ್ಲದ ಬೌಲ್ ಎತ್ತಿಕೊಂಡೆ. ನಿನ್ನೆ ಅಪ್ಪ ಹೇಳಿದ ಮಾತುಗಳನ್ನು ನಾನು ಮರೆತೇ ಬಿಟ್ಟಿದ್ದೆ. ಅಪ್ಪ ಮರು ಮಾತನಾಡದೇ ಮತ್ತೊಂದು ಬೌಲ್ ಎತ್ತಿಕೊಂಡರು. ನಾನು ತಿನ್ನುತ್ತಾ ತಿನ್ನುತ್ತಾ ಬೌಲ್ ನ ತಳಭಾಗಕ್ಕೆ ಬಂದರೂ ನನಗೆ ಯಾವುದೇ ಬಾದಾಮಿ ಚೂರುಗಳು ಸಿಗಲಿಲ್ಲ. ನನಗೆ ಬಹಳ ಬೇಸರವಾಯಿತು. ಅಪ್ಪ ಸೊಗಸಾಗಿ ಬಾದಾಮಿ ಚೂರುಗಳನ್ನು ಚಪ್ಪರಿಸುತ್ತಾ ಹಲ್ವಾ ಮುಗಿಸಿದರು. ನಂತರ ನನ್ನ ಹತ್ತಿರ ಬಂದು ಹೇಳಿದರು “ಮಗೂ, ನಾವು ಯಾವಾಗಲೂ ನಮ್ಮ ಅನುಭವಗಳ ಮೇಲೆ ಕುರುಡು ನಂಬಿಕೆ ಇಡಬಾರದು. ಏಕೆಂದರೆ ಜೀವನ ನಮಗೆ ಬಹಳಷ್ಟು ಸಲ ಮೋಸ ಮಾಡುತ್ತದೆ. ಅನಿರೀಕ್ಷಿತ ತಿರುವುಗಳನ್ನು ತಂದೊಡ್ಡುತ್ತದೆ. ಅದಕ್ಕಾಗಿ ನೀನು ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಬೇಸರ ಮಾಡಬೇಡ. ಅನುಭವಗಳನ್ನು ಜೀವನದ ಒಂದು ಪಾಠ ಎಂದು ತಿಳಿದುಕೋ, ಇದು ನಿನಗೆ ಯಾವುದೇ ಪಾಠ ಪುಸ್ತಕಗಳು ಕಲಿಸುವುದಿಲ್ಲ' ಎಂದರು. ನಾನು ಮತ್ತೊಮ್ಮೆ ಸುಮ್ಮನೇ ತಲೆಯಾಡಿಸಿದೆ.

ಮರುದಿನ ಮತ್ತೆ ನನ್ನ ಅಪ್ಪ ಹಲ್ವಾ ಮಾಡಿದ್ದರು. ಈ ಸಲವೂ ಅವರು ಎರಡು ಬೌಲ್ ಗೆ ಹಲ್ವಾವನ್ನು ಬಡಿಸಿ ನನ್ನ ಮುಂದೆ ತಂದು ಇರಿಸಿದರು. ನಾನು ನೋಡಿದೆ. ಮೊದಲ ಎರಡು ದಿನಗಳಂತೆಯೇ ಈ ಸಲವೂ ಒಂದರ ಮೇಲೆ ಬಾದಾಮಿ ಇತ್ತು. ಮತ್ತೊಂದರಲ್ಲಿ ಇರಲಿಲ್ಲ. ಎರಡು ದಿನಗಳ ಅನುಭವ ಮತ್ತು ಅಪ್ಪ ಹೇಳಿದ ಪಾಠ ನನ್ನ ಮನಸ್ಸಿನಲ್ಲಿತ್ತು. ನಾನು ಅಪ್ಪನಿಗೆ ಹೇಳಿದೆ “ಅಪ್ಪಾ, ನೀವು ನಮ್ಮ ಕುಟುಂಬದ ಹಿರಿಯರು, ನೀವೇ ಮೊದಲು ನಿಮಗೆ ಬೇಕಾದ ಬೌಲ್ ತೆಗೆದುಕೊಳ್ಳಿ” ಎಂದೆ. ಅಪ್ಪ ಮರು ಮಾತನಾಡದೇ ನಸುನಕ್ಕು ಮೇಲ್ಗಡೆ ಬಾದಾಮಿ ಇರುವ ಬೌಲ್ ಅನ್ನು ಆಯ್ಕೆ ಮಾಡಿಕೊಂಡರು. ಉಳಿದ ಮತ್ತೊಂದು ಬೌಲ್ ನಾನು ತೆಗೆದುಕೊಂಡೆ. ಅಚ್ಚರಿಯೆಂದರೆ ನನ್ನ ಬೌಲ್ ಕೆಳಗಡೆ ಬಹಳಷ್ಟು ಬಾದಾಮಿಗಳು ಇದ್ದುವು. ನನಗೆ ಬಹಳ ಸಂತೋಷವಾಯಿತು. ಅಪ್ಪನ ಮುಖ ನೋಡಿದೆ. ಅವರೂ ಪ್ರಸನ್ನ ವದನರಾಗಿದ್ದರು.

ಅಪ್ಪ ಖುಷಿಯಿಂದ ನನ್ನನ್ನು ತಬ್ಬಿಕೊಂಡು ಹೇಳಿದರು ‘ಮಗಾ, ಈ ದಿನ ನೀನು ನನಗೇ ಮೊದಲ ಬೌಲ್ ತೆಗೆದುಕೊಳ್ಳಲು ಹೇಳಿದಾಗಲೇ ನನಗೆ ಬಹಳ ಆನಂದವಾಗಿತ್ತು. ಏಕೆಂದರೆ ಹಿರಿಯರಿಗೆ ಗೌರವ ನೀಡುವುದು ನಮ್ಮ ಮೊದಲ ಕರ್ತವ್ಯವಾಗಬೇಕು. ನಾವು ದೇವರ ಮೇಲೆ ಭಾರ ಹಾಕಿ ಯಾವುದಾದರೂ ಕೆಲಸ ಮಾಡಲು ಹೊರಟಾಗ ಅವನು ನಿನಗಾಗಿ ಅತ್ಯುತ್ತಮವಾದುದನ್ನೇ ಆಯ್ಕೆ ಮಾಡಿ ನೀಡುತ್ತಾನೆ. ನಿನಗೆ ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ತಾಳ್ಮೆ ಮಾತ್ರ. ನೀನು ಬೇರೆಯವರ ಒಳಿತನ್ನು ಬಯಸುವಿಯಾದರೆ ಸ್ವಾಭಾವಿಕವಾಗಿ ನಿನಗೆ ಒಳ್ಳೆಯದು ಆಗಿಯೇ ತೀರುತ್ತದೆ. ನೀನು ಯಾರಿಗೆ ಉಪಕಾರ ಮಾಡುವೆಯೋ ಅವರು ನಿನಗೆ ಸಹಾಯ ಮಾಡದೇ ಹೋದರೂ, ಬೇರೊಂದು ರೀತಿಯಲ್ಲಿ, ಯಾರೋ ಒಬ್ಬರು ನಿನಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ. ಒಂದು ಮಾತು ನೆನಪಿಡು, ನೀನು ಯಾವಾಗ ಹಿರಿಯರಿಗೆ ಗೌರವ ನೀಡಲು ಕಲಿಯುತ್ತೀಯೋ ಆಗ ಇಡೀ ಜಗತ್ತೇ ನಿನ್ನನ್ನು ಗೌರವಿಸುತ್ತದೆ.”

ಈ ಮಾತುಗಳನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಅಪ್ಪನನ್ನು ನಾನು ತಬ್ಬಿಕೊಂಡು ಹೇಳಿದೆ “ಅಪ್ಪಾ, ನೀವು ಈ ಮೂರು ದಿನಗಳಲ್ಲಿ ನನಗೆ ನೂರು ವರ್ಷಕ್ಕೆ ಬೇಕಾದ ಪಾಠವನ್ನು ತಿಳಿಸಿಕೊಟ್ಟಿರುವಿರಿ. ಥ್ಯಾಂಕ್ಯೂ ಅಪ್ಪಾ.."

ಅಪ್ಪ ಮರು ಮಾತನಾಡದೇ ನನ್ನನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡರು.

ಮಾಹಿತಿ ಸಹಕಾರ: ದಿನೇಶ್, ಅಬುಧಾಬಿ (ಯು.ಎ.ಇ)

ಚಿತ್ರ ಕೃಪೆ: ಅಂತರ್ಜಾಲ ತಾಣ

 

Comments

Submitted by ಬರಹಗಾರರ ಬಳಗ Sun, 06/20/2021 - 18:51

ಪ್ರೇರಣಾದಾಯಕ ಲೇಖನ

'ಎರಡು ಬೌಲ್ ಹಲ್ವಾ' ಹೆಸರೇ ತುಂಬಾ ಪಂಚಿಂಗ್ ಆಗಿದೆ. ಓದುತ್ತಾ ಓದುತ್ತಾ ನನ್ನ ಕಣ್ಣುಗಳು ತೇವವಾದವು. ಲೇಖಕರು ಬಹಳ ಸೊಗಸಾಗಿ ಭಾವಾನುವಾದ ಮಾಡಿದ್ದಾರೆ. ನಾನು ಈಗ ನಿವೃತ್ತ ಶಿಕ್ಷಕಿ. ಇಲ್ಲವಾದಲ್ಲಿ ನನ್ನ ಶಾಲಾ ಮಕ್ಕಳಿಗೆ ಈ ಲೇಖನದ ಸಾರವನ್ನುನ್ನು ನೀತಿ ಕಥೆಯಾಗಿ ಖಂಡಿತಾ ಹೇಳುತ್ತಿದ್ದೆ. ನಿಜಕ್ಕೂ ಇದು ಪ್ರೇರಣದಾಯಕ ಲೇಖನ. ಲೇಖಕರಿಗೆ ಅಭಿನಂದನೆಗಳು

-ರತ್ನಾ ಭಟ್ ತಲಂಜೇರಿ (ನಿವೃತ್ತ ಶಿಕ್ಷಕಿ)