ಎರಡು ಮನಮೋಹಕ ಕವನಗಳು

ಎರಡು ಮನಮೋಹಕ ಕವನಗಳು

ಕವನ

ಮೇದುರ ಮಾನಿನಿ

(ಚೈತ್ರ ಷಟ್ಪದಿ)

ಮಾನಿನಿ ನಗುವು

ಕಾನನದಿಂದ

ಬಾನಿಗೆ ತಾಗಿ ಹೊಮ್ಮುತಿದೆ

ಗಾನದ ಮೇಳ

ಮೇನೆಯ ತುಂಬ

ಸೋನೆಯು ಮೊಗದಿ ಚಿಮ್ಮುತಿದೆ||

 

ಬಳ್ಳಿಯ ಹೂವು

ತೆಳ್ಳಗೆ ಬಾಗಿ

ಪಳ್ಳನೆ ಚಿಗುರಿ ಮಿರುಗುತಿದೆ

ತಳ್ಳುತ ನೆಗೆದು

ಹಳ್ಳಿಯ ಸೊಬಗ

ಹಳ್ಳದಿ ಬೆಳೆದು ನಲಿಯುತಿದೆ||

 

ಕಿಂಕಿಲ ಮನದಿ

ಪಂಕವ ತಿರುಗಿ

ಡಂಕಣ ನುಡಿಸಿ ಮೆರೆದಿಹಳು

ಝೆಂಕಣೆ ಕಲರವ

ಡೊಂಕನು ತೆಗೆದು

ಪಂಕಜ ಮೊಗದಿ ನಗುತಿಹಳು||

 

ಅಂದದ ಚೆಲುವೆ

ಗಂಧದಿ ಮಿಂದು

ತಂದಳು ಹಸಿರ ಸಿರಿಗೌರಿ

ನಂದನ ವನದಿ

ಕಂದನ ಹಾಗೆ

ವಂದಿತ ಲತೆಗೆ ನಿತ್ಯದಲಿ||

 

ಕದಪಲಿ ಲಜ್ಜೆ

ಕದನದ ಗೆಜ್ಜೆ

ನದಿಯಲಿ ಕುಣಿದು ಜಿಗಿದಿಹಳು

ಪದಗಳ ಜೊತೆ

ವದನದ ಕಳೆಯು

ಸದನದ ಸುತ್ತ ಹರಡಿರಲು||

-ಅಭಿಜ್ಞಾ ಪಿ ಎಮ್ ಗೌಡ 

*********************

ಮನೋರಮೆ

(ಚೈತ್ರ ಷಟ್ಪದಿ )

ಚೆಂದದ ಮನದಿ

ಬಂಧವ ತೊಡಿಸಿ

ಕಂದರವಿಲ್ಲ ಹೃದಯದಲಿ|

ನಂದನ ಮಾಡಿ

ಚಂದನ ಹಚ್ಚಿ

ದುಂದುಭಿ ನಾದ ತುಂಬಿತಲಿ||

 

ಕುಂಚದಿ ಬಿಡಿಸಿ

ಮಂಚದ ಮೇಲೆ

ಲಂಚವ ಕೊಡದೆ ಕುಳಿತಿಹಳು|

ಸಂಚಿಯನಗಿದು

ಬಂಚವನರುಹಿ

ಮಿಂಚುತ ನಡೆದು ಬಂದಿಹಳು||

 

ಅರಿವಿನಲೆಯಲಿ

ಮರೆಯದ ನೆನಪು

ಕರೆಯದೆ ಬರುವೆ ಕನಸಿನಲಿ|

ವಿರಹದ ಭಾವ

ಕೊರೆದಿದೆ ಮನವ

ತರುವದು ಹೊಸ ಚೇತನವಲಿ||

 

ಭಾಮಿಯ ತೆರದಿ

ನಾಮವ ನುತಿಸಿ

ರಾಮನ ಭಜಿಸಿ ಚಣದಲ್ಲಿ|

ತಾಮಸ ಬುದ್ದಿ

ಕೋಮಲ ನುಡಿಯು

ಕಾಮದ ವಾಂಛೆ ಮನದಲ್ಲಿ||

-ಶಂಕರಾನಂದ ಹೆಬ್ಬಾಳ

 

ಚಿತ್ರ್