ಎರಡು ಮಹತ್ವದ ಪಾದಯಾತ್ರೆಗಳು
ಇದೇ ತಿಂಗಳು ಕರ್ನಾಟಕದಲ್ಲಿ ಅತ್ಯಂತ ಉಪಯುಕ್ತ - ಸಾಮಾಜಿಕ ಜಾಗೃತಿಯ ಎರಡು ಮಹತ್ವದ ಪಾದಯಾತ್ರೆಗಳು ನಡೆಯುತ್ತಿವೆ.
1) ವಿಜ್ಞಾನದೆಡೆಗೆ ನಮ್ಮ ನಡಿಗೆ: 2025 ರ ಜನವರಿ 27 ರಿಂದ ಜನವರಿ 31 ರವರೆಗೆ, ಸೋಮವಾರದಿಂದ ಶುಕ್ರವಾರದವರೆಗೆ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹೊಸೂರಿನವರೆಗೆ.
2) ನಮ್ಮ ನಡಿಗೆ ಸರ್ವೋದಯದೆಡೆಗೆ; 2025 ರ ಜನವರಿ 27 ರಿಂದ 30 ರವರೆಗೆ, ಸೋಮವಾರದಿಂದ ಗುರುವಾರದವರೆಗೆ, ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಿಂದ ಸಂತೇಬೆನ್ನೂರಿನವರೆಗೆ.
ವಿಜ್ಞಾನದೆಡೆಗೆ ನಮ್ಮ ನಡಿಗೆ : ಇದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಖ್ಯಾತ ವೈಜ್ಞಾನಿಕ ಚಿಂತಕರು, ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾಕ್ಟರ್ ಎಚ್. ನರಸಿಂಹಯ್ಯನವರ (1920 - 2005 ) 104 ನೇ ಜನ್ಮ ದಿನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಪಾದಯಾತ್ರೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ನೇತೃತ್ವದಲ್ಲಿ, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್, ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ, ಆಹಾರ ಸಂರಕ್ಷಣಾ ಅಭಿಯಾನ, ಬ್ರೈಟ್ ಫೌಂಡೇಶನ್ ಇನ್ನೂ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳು, ಚಿಂತಕರು, ವಿಚಾರವಾದಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.
ಈ ಆಧುನಿಕ ಕಾಲಘಟ್ಟದಲ್ಲಿ ಅಕ್ಷರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಅವಿದ್ಯಾವಂತರು, ಅಜ್ಞಾನಿಗಳು, ಮೌಢ್ಯಕ್ಕೆ ಬಲಿಯಾಗುವವರು, ಮೂಢನಂಬಿಕೆಗಳನ್ನು ಆಚರಿಸುವವರು ಹೆಚ್ಚಾಗುತ್ತಿದ್ದಾರೆ. ಆಶ್ಚರ್ಯವೆಂಬಂತೆ ಸಂಕೀರ್ಣ ಬದುಕಿನ ಏರಿಳಿತಗಳನ್ನು ಅರ್ಥಮಾಡಿಕೊಳ್ಳದೆ ಅನಾದಿ ಕಾಲದಲ್ಲಿ ಪ್ರಾಕೃತಿಕ ವಿಕೋಪಗಳ ಭಯಕ್ಕೆ ದೇವರನ್ನು ಸೃಷ್ಟಿ ಮಾಡಿದಂತೆ, ಇದೀಗ ಸಾವು ನೋವು ಸೋಲು ಅಪಘಾತ ಅನಾರೋಗ್ಯ ಅಪರಾಧ ಮುಂತಾದವುಗಳ ಭಯಕ್ಕೆ ಜನ ಮೂಡನಂಬಿಕೆಗಳಿಗೆ ಬಲಿಯಾಗುತ್ತಿರುವುದು ಈ ಕಾಲದ ಬಹುದೊಡ್ಡ ದುರಂತ.
ಕೇವಲ ಅನಕ್ಷರಸ್ಥರು, ಗ್ರಾಮೀಣ ಭಾಗದ ಜನರು, ಮುಗ್ಧ ಮನಸ್ಥಿತಿಯವರು ಮಾತ್ರ ಮೌಡ್ಯಕ್ಕೆ ದಾಸರಾಗುತ್ತಿಲ್ಲ. ಆಧುನಿಕ ತಂತ್ರಜ್ಞಾನ, ವಿಶ್ವಮಟ್ಟದ ವೈಜ್ಞಾನಿಕ ಕ್ರಾಂತಿ ಎಲ್ಲವನ್ನೂ ತಿಳಿದ ನಂತರವೂ ಮೌಢ್ಯಕ್ಕೆ ಬಲಿಯಾಗುತ್ತಿರುವುದು ಅತ್ಯಂತ ವಿಷಾದನೀಯ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳೆಂಬ ಮೂರ್ಖರ ಪೆಟ್ಟಿಗೆ ಈ ಮೌಢ್ಯಗಳು ಸಮಾಜದಲ್ಲಿ ಮತ್ತಷ್ಟು ಆಳಕ್ಕೆ ಬೇರೂರಲು ಕಾರಣವಾಗಿದೆ. ಆದ್ದರಿಂದ ಜನರಲ್ಲಿ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ, ಕರ್ತವ್ಯಗಳ ಬಗ್ಗೆ, ಅದರ ಪೀಠಿಕೆಯಲ್ಲಿ ಹೇಳಿರುವಂತೆ ವೈಜ್ಞಾನಿಕ, ವೈಚಾರಿಕ, ಮನೋಭಾವ ಜನರಲ್ಲಿ ಜಾಗೃತವಾಗುವಂತೆ ಎಚ್ಚರಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ನಡಿಗೆ ಸರ್ವೋದಯದೆಡೆಗೆ : ಇದು ಮತ್ತೊಂದು ಮಹತ್ವದ ಪಾದಯಾತ್ರೆ. "ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ " " ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು " ಈ ತತ್ವಗಳ ಆಧಾರದ ಮೇಲೆ, " ಸಂವಿಧಾನದ ಯಶಸ್ಸು ಅದನ್ನು ಅನುಷ್ಠಾನಗೊಳಿಸುವವರ ನೈತಿಕತೆಯನ್ನು ಅವಲಂಬಿಸಿದೆ " ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಮಹಾತ್ಮ ಗಾಂಧಿಯವರ " ಸರ್ವೋದಯ " ತತ್ವದ ಆಧಾರದ ಮೇಲೆ, ಇಂದು ಮಲಿನವಾಗುತ್ತಿರುವ ಗಾಳಿ, ನೀರು, ಆಹಾರ, ಮಾನವೀಯ ಮೌಲ್ಯಗಳು ಇಡೀ ಸಮಾಜದ ಅಧೋಗತಿಗೆ ಕಾರಣವಾಗಿದೆ. ಇಂದಿನ ಪ್ರಾಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಮೌಲ್ಯಗಳು ನಾಶವಾಗುತ್ತಿಲ್ಲ, ಅದಕ್ಕೆ ಪರ್ಯಾಯವಾಗಿ ವಿರುದ್ಧ ಮೌಲ್ಯಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿವೆ. ಇದು ಅತ್ಯಂತ ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ.
ಸಂಸ್ಕೃತಿಯ ವಿನಾಶ ವ್ಯಕ್ತಿಗತವಾಗಿ ದೇಹ ಮತ್ತು ಮನಸ್ಸುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ದೇಶದ ಭವಿಷ್ಯ ಮಸುಕಾಗಿಸುತ್ತಿದೆ. ಅದನ್ನು ಪುನರುಜ್ಜೀವನಗೊಳಿಸಲು ಸಮಾಜ ಎಚ್ಚೆತ್ತುಕೊಂಡು ಜಾಗೃತಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನಮಾನಸದಲ್ಲಿ ಅರಿವು ಮೂಡಿಸಲು ರಾಜ್ಯದ ಅನೇಕ ಗಣ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಈ ಎರಡೂ ಪಾದಯಾತ್ರೆಗಳು ರಾಜ್ಯದ ಜನರ ಚಿಂತನೆಗಳಲ್ಲಿ, ನಡವಳಿಕೆಗಳಲ್ಲಿ ಒಂದಷ್ಟು ಬದಲಾವಣೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಆಸಕ್ತರು ಆಯಾಯ ಭಾಗದಲ್ಲಿ ಸಾಧ್ಯವಿರುವವರು ದಯವಿಟ್ಟು ಭಾಗವಹಿಸಿ.
ವಿಜ್ಞಾನದೆಡೆಗೆ ನಮ್ಮ ನಡಿಗೆ, ಬೆಂಗಳೂರು. ಭಾಗವಹಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ. ಈ. ಬಸವರಾಜು 94489 57666
ನಮ್ಮ ನಡಿಗೆ ಸರ್ವೋದಯದೆಡೆಗೆ ದಾವಣಗೆರೆ. ಭಾಗವಹಿಸಲು ಸಂಪರ್ಕಿಸಬೇಕಾದ ದೂರವಾಣಿ. ಶ್ರೀ ಶಿವನಕೆರೆ ಬಸವಲಿಂಗಪ್ಪ 9886645880
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ