ಎರಡು ಮಹತ್ವದ ಸುದ್ದಿಗಳು ಮತ್ತು ನಮ್ಮ ಅಭಿಪ್ರಾಯಗಳು...
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರಲ್ಲಿ ಒಬ್ಬನಾದ ಪೆರಾರಿವಲನ್ ಎಂಬ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು 31 ವರ್ಷಗಳ ಸೆರೆವಾಸದ ನಂತರ ಅನೇಕ ಪರ ವಿರೋಧದ ವಾದಗಳ ನಡುವೆ ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ. ಹಾಗೆಯೇ ಇನ್ನೂ ಕೆಲವು ಅದೇ ಕೇಸಿನ ಹಂತಕರು ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ಇದು ಕೆಲವರ ಅಸಮಾಧಾನಕ್ಕೂ ಮತ್ತೆ ಕೆಲವರ ಸಮಾಧಾನಕ್ಕೂ ಕಾರಣವಾಗಿದೆ. ಈ ಅಪರಾಧಿಗಳ ಮನೆಯವರು ಮತ್ತು ಅಪರಾಧದಿಂದ ಜೀವ ಕಳೆದುಕೊಂಡ ಮನೆಯವರ ಅಭಿಪ್ರಾಯ ಹೊರತುಪಡಿಸಿ..
ಏಕೆಂದರೆ ಅದರಲ್ಲಿ ಭಾಗಿಗಳಾದವರ ಅಭಿಪ್ರಾಯ ಭಾವನಾತ್ಮಕ ಮತ್ತು ವೈಯಕ್ತಿಕ ನೆಲೆಯಲ್ಲಿ ಹೆಚ್ಚು ಮಹತ್ವ ಪಡೆಯುವುದರಿಂದ ಅದನ್ನು ಅವರ ವಿವೇಚನೆಗೆ ಬಿಡುತ್ತಾ,
ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ ಎಂದರೆ ಸುಮಾರು 14 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ವಿಶೇಷ ಪ್ರಕರಣಗಳಲ್ಲಿ ಮರಣದಂಡನೆ ಸಾಧ್ಯವಾಗದಿದ್ದರೆ ಗರಿಷ್ಠ 30 ಅಥವಾ ಜೀವ ಹೋಗುವವರಿಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಾಜೀವ್ ಗಾಂಧಿ ಹತ್ಯೆ ವಿಷಯದಲ್ಲಿ ಇದನ್ನು ನೀಡಲಾಗಿದೆ. ನಾವು ನಾಗರಿಕ ಸಮಾಜದಲ್ಲಿ ವಾಸ ಮಾಡುತ್ತಿದ್ದೇವೆ. ಜೊತೆಗೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಹೊಂದಿದ್ದೇವೆ. ಇದರ ಹೊರತಾಗಿಯೂ ನಾವು ಮನುಷ್ಯರು ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುತ್ತೇವೆ. " ಜೀವ ನೀಡಲು ಸಾಧ್ಯವಿಲ್ಲದಿರುವಾಗ ಇನ್ನೊಬ್ಬರ ಜೀವ ತೆಗೆಯುವುದು ಮಹಾಪರಾಧ " ಎಂಬುದು ಸಾರ್ವತ್ರಿಕ ಸತ್ಯ. ಅದನ್ನು ಹಿನ್ನೆಲೆಯಾಗಿ ನೆನಪು ಮಾಡಿಕೊಳ್ಳುತ್ತಾ...
ಮನುಷ್ಯನ ಸರಾಸರಿ ಆಯಸ್ಸು ಸುಮಾರು 65 ರಿಂದ 75. ಯಾವುದೋ ಕಾರಣದಿಂದಾಗಿ ಒಬ್ಬ ವ್ಯಕ್ತಿ ಅತ್ಯಂತ ಕ್ರೂರ ಅಪರಾಧ ಮಾಡಿದಾಗ ಅವನನ್ನೂ ಅಧಿಕೃತವಾಗಿಯೇ ಶಿಕ್ಷೆಯ ಹೆಸರಿನಲ್ಲಿ ಮತ್ತೊಂದು ಕೊಲೆ ಮಾಡಲಾಗುತ್ತದೆ. ಅದು ಕೊಲೆಯಾದವನಿಗೆ ನ್ಯಾಯ ಒದಗಿಸುವುದಕ್ಕಿಂತ ಮತ್ತೆ ಸಮಾಜದಲ್ಲಿ ಸಾವಿನ ಭಯದಿಂದ ಮತ್ತಷ್ಟು ಕೊಲೆಗಳಾಗುವುದನ್ನು ತಡೆಯುವ ಕೆಲವು ಕ್ರಮಗಳು. ಆದರೂ...
ಒಬ್ಬ ವ್ಯಕ್ತಿ ಜೈಲಿನ ಗೋಡೆಗಳ ನಡುವೆ ಜೀವಿತಾವಧಿಯ ಶಿಕ್ಷೆಗೆ ಗುರಿಯಾಗಿ ಸುಮಾರು 11,300 ದಿನಗಳನ್ನು ಕಳೆದಿರುವನು ಎಂದಾಗ ಆತನ ಮಾನಸಿಕ ಸ್ಥಿತಿಯನ್ನು ಊಹಿಸಲೂ ಅಸಾಧ್ಯ. ಒಂದು ವೇಳೆ ಆತನಿಗೆ ಮರಣದಂಡನೆ ಶಿಕ್ಷೆಯಾಗಿ ಆತ ಇಲ್ಲವಾಗಿದ್ದರೆ ಆ ವಿಷಯ ಬೇರೆ. ಆದರೆ ಜೀವಂತವಾಗಿ ಇಷ್ಟೊಂದು ದಿನಗಳು ಜೈಲಿನಲ್ಲಿ ಕಳೆದಿರುವುದು ಬಹುಶಃ ಅದಕ್ಕಿಂತ ಘನಘೋರ ಶಿಕ್ಷೆ. ಮಾನವೀಯ ನೆಲೆಯಲ್ಲಿ ಆತನ ಬಿಡುಗಡೆಯನ್ನು ಸ್ವಾಗತಿಸುವುದು ನಾಗರಿಕ ಸಮಾಜದ ಉತ್ತಮ ಬೆಳವಣಿಗೆ ಎಂದು ಅನಿಸುತ್ತದೆ. ಶಿಕ್ಷೆಗೂ ಒಂದು ಮಿತಿ ಇರಬೇಕು. ಏಕೆಂದರೆ ಅಪರಾಧ ಆ ಕ್ಷಣದ ಭಾವೋದ್ವೇಗ. ಶಿಕ್ಷೆ ದೀರ್ಘಕಾಲದ ಅನುಭವ ಮತ್ತು ಚಿಂತನೆಯ ನಿಯಮ. ಹಾಗೆಯೇ ಮತ್ತೊಂದು ಸುದ್ದಿ ಸಹ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಹೈದರಾಬಾದಿನಲ್ಲಿ ನಡೆದ ದಿಶಾ ಅಥವಾ ಪ್ರಿಯಾಂಕಾ ರೆಡ್ಡಿ ಎಂಬ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್ ಕೌಂಟರ್ ನಕಲಿ ಮತ್ತು ಅದನ್ನು ಮಾಡಿದವರನ್ನು ಕೊಲೆ ಆರೋಪದಲ್ಲಿ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಾಂಗ ತನಿಖಾ ತಂಡ ವರದಿ ನೀಡಿದೆ. ಜೊತೆಗೆ ವರದಿಯಲ್ಲಿ ಯಾವುದೇ ಶಿಕ್ಷೆ ಕಾನೂನಿನ ಅಡಿಯಲ್ಲಿ ಆಗಬೇಕೆ ಹೊರತು ಪೋಲೀಸರ ಸ್ವಯಂ ನಿರ್ಧಾರ ಅರಾಜಕತೆಗೆ ಕಾರಣವಾಗುತ್ತದೆ ಎಂಬ ಗಂಭೀರ ಆರೋಪ ಸಹ ಮಾಡಿದೆ.
ಇದನ್ನು ಸಹ ಭಾವನಾತ್ಮಕವಾಗಿ ಎನ್ ಕೌಂಟರ್ ಸಮರ್ಥಿಸುವ ನಾಗರಿಕ ಸಮಾಜ ಮತ್ತೊಮ್ಮೆ ಪರಿಶೀಲಿಸಬೇಕು. ಏಕೆಂದರೆ ಇದೊಂದು ಚಲನಶೀಲ ಸಮಾಜ. ನಿರಂತರ ಬದಲಾವಣೆಗಳ ಮೂಲಕ ಪ್ರಗತಿಯೆಡೆಗೆ ನಡೆಯುತ್ತಾ ಜನರ ನೆಮ್ಮದಿ ಮತ್ತು ಜೀವನಮಟ್ಟ ಸುಧಾರಣೆಯ ಭಾಗವಾಗಿ ಮಾನವೀಯ ಮೌಲ್ಯಗಳನ್ನು ಮತ್ತೆ ಮತ್ತೆ ಪುನರ್ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಾನೂನಿನ ಲೋಪದೋಷಗಳನ್ನು ಗಮನಿಸಿ ಅದನ್ನು ತಿದ್ದುಪಡಿ ಮಾಡಿ ಸರಿಪಡಿಸಬೇಕೆ ಹೊರತು ಅದಕ್ಕೆ ಪರ್ಯಾಯವಾಗಿ ಅನಾಗರಿಕ ನಿಯಮಗಳ ಜಾರಿ ಅತ್ಯಂತ ಅಪಾಯಕಾರಿ ಎಂಬುದನ್ನು ಸಹ ಅರ್ಥಮಾಡಿಕೊಳ್ಳಬೇಕು. ಸಾಮಾನ್ಯ ಜನ ಬೆಲೆ ಏರಿಕೆಯ ಬಿಸಿಯಲ್ಲಿ, ಧರ್ಮಗಳ ಸಂಘರ್ಷದಲ್ಲಿ, ಕೌಟುಂಬಿಕ ಸಮಸ್ಯೆಗಳಲ್ಲಿ, ಮನರಂಜನೆಯ ಮತ್ತಿನಲ್ಲಿ ಕಳೆದುಹೋಗಿರುವಾಗ ಈ ಸುದ್ದಿಗಳು ಸಹ ಸ್ವಲ್ಪ ನೆನಪಿನ ಮೂಲೆಯಲ್ಲಿ ಸ್ಥಾನ ಪಡೆಯಲಿ ಎಂಬ ಕಾರಣದಿಂದ...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ