ಎರಡು ರೂಪಾಯಿಯ ಹಸು !

ಎರಡು ರೂಪಾಯಿಯ ಹಸು !

ದೇವರು ಮಾನವನನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಮಾನವನು ದೇವರಿಗಿಂತಲೂ ಚಾಲಾಕಿ. ಕೆಲವೊಮ್ಮೆ ಅವನು ಈ ದೇವರನ್ನೇ ಯಾಮಾರಿಸುತ್ತಾನೆ. ದೇವರನ್ನು ಮಾನವ ಯಾಮಾರಿಸಿದ ಒಂದು ಪ್ರಸಂಗ ಹೀಗಿದೆ. ಒಬ್ಬ ರೈತನ ಹಸು ಕಳೆದುಹೋಯಿತು. ರೈತ ದೇವರಿಗೆ ಹರಕೆ ಹೊತ್ತ ಒಂದು ವೇಳೆ ನನ್ನ ಹಸು ದೊರೆತರೆ ಅದರ ಬೆಲೆಯ ಅರ್ಧದಷ್ಟನ್ನು ನಿನಗೆ ಅರ್ಪಿಸುತ್ತೇನೆ ಎಂದು.

ರೈತನ ಹಸು ದೊರೆಯಿತು. ಹಸುವಿನ ಬೆಲೆ ಸುಮಾರು ಎರಡು ಸಾವಿರ ರೂ.ಗಳಷ್ಟಾಗಿತ್ತು. ಹರಕೆ ಹೊತ್ತಂತೆ ಹಸುವಿನ ಅರ್ಧ ಬೆಲೆ ಅಂದರೆ ಒಂದು ಸಾವಿರ ರೂ.ಗಳನ್ನು ದೇವರಿಗೆ ಅರ್ಪಿಸಬೇಕಾಗಿತ್ತು. ರೈತನ ಮನದಲ್ಲಿ ದುರಾಲೋಚನೆ ಮೂಡಿತು. ಅಷ್ಟು ಹಣವನ್ನು ವೃಥಾ ದೇವರಿಗೆ ಏಕೆ ಅರ್ಪಿಸಬೇಕು ? ರೈತ ತುಂಬ ಯೋಚಿಸಿದ ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು. ಹರಕೆಯೂ ತೀರಬೇಕು ಹೆಚ್ಚು ಹಣ ದೇವರಿಗೆ ಸೇರಬಾರದು ಅದು ಅಂತಹ ಉಪಾಯ.

ರೈತ ಹಸುವನ್ನು ಮಾರಲು ಸಂತೆಗೆ ತೆಗೆದುಕೊಂಡು ಹೋದ. ಜೊತೆಗೆ ತಾನು ಸಾಕಿದ ಬೆಕ್ಕನ್ನೂ ತೆಗೆದುಕೊಂಡು ಹೋದ. ಬೆಕ್ಕಿಗೆ ಎರಡು ಸಾವಿರ ಬೆಲೆಯನ್ನು ಮತ್ತು ಹಸುವಿಗೆ ಎರಡು ರೂ ಬೆಲೆಯನ್ನು ನಿಗದಿಪಡಿಸಿದ. 

'ಬೆಕ್ಕಿಗೆ ಎರಡು ಸಾವಿರ, ಹಸುವಿಗೆ ಎರಡು ರೂ. ಎರಡನ್ನೂ ಒಟ್ಟಿಗೆ ಕೊಳ್ಳಬೇಕು' ಎಂದು ಸಂತೆಯಲ್ಲಿ ನಿಂತುಕೊಂಡು ಕೂಗತೊಡಗಿದ.

ಹಸುವನ್ನು ಕೊಳ್ಳಬೇಕೆಂದವರು ಯೋಚಿಸತೊಡಗಿದರು. ಹೇಗಿದ್ದರೂ ಹಸುವಿನ ಬೆಲೆಯಂತೂ ಎರಡು ರೂ. ಬೆಕ್ಕಿಗೆ ಎರಡು ಸಾವಿರ. ಎರಡನ್ನು ಒಟ್ಟಿಗೆ ಕೊಳ್ಳುವುದರಲ್ಲಿ ನಮಗೇನೂ ಮೋಸವಿಲ್ಲ. ಹೀಗೆಂದು ಯೋಚಿಸಿದ ಒಬ್ಬ ಗಿರಾಕಿ, ಎರಡು ಸಾವಿರದ ಎರಡು ರೂ.ಗಳನ್ನು ತೆತ್ತು ಎರಡನ್ನು ಒಟ್ಟಿಗೆ ಖರೀದಿಸಿದ.

ರೈತ ತಾನು ಹರಕೆ ಹೊತ್ತುಕೊಂಡಂತೆ ಹಸುವಿನ ಬೆಲೆಯ ಅರ್ಧದಷ್ಟು ಅಂದರೆ ಒಂದು ರೂಪಾಯಿಯನ್ನು ದೇವರಿಗೆ ಅರ್ಪಿಸಿ ತನ್ನ ಹರಕೆಯನ್ನು ತೀರಿಸಿಕೊಂಡ.

-ಮುರಲೀಧರ ಕುಲಕರ್ಣಿ, ಬೀದರ್