ಎರಡು ವರುಷ ಮುಂಚೇನೇ ಮಾಡ್ಬೇಕಿತ್ತು !

ಎರಡು ವರುಷ ಮುಂಚೇನೇ ಮಾಡ್ಬೇಕಿತ್ತು !

"ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ ನೆಲೆಸಿತ್ತು.

ಆ ಪ್ರಶ್ನೆಗೆ ಉತ್ತರವೆಂಬಂತೆ ಅವರು ಹೇಳಿದ ಮಾತು,"ಮುಂಚೆ ಹಿಂಗಾರಿನಲ್ಲಿ ಉಳುಮೆ ಮಾಡಿ, ಮಾಗಿಯಲ್ಲಿ ಅಡ್ಡ ಮಳೆ ಬಂದ್ರೆ ನೀರೆಲ್ಲ ಮಣ್ಣು ಕುಡಿಯೋ ಹಂಗೆ ಮಾಡ್ತಿದ್ವಿ." ಅದನ್ನು ಕೇಳುತ್ತಿದ್ದಂತೆ ದಶಕಗಳ ಹಿಂದೆ ಬಯಲು ಸೀಮೆಯಲ್ಲಿ ಮಳೆ ನೀರಿಂಗಿಸುತ್ತಿದ್ದ ಪರಿ ನಮ್ಮ ಕಣ್ಣಿಗೆ ಕಟ್ಟಿತು. ಅವರ ಮುಂದಿನ ಮಾತು ನಮ್ಮನ್ನು ಬಡಿದೆಬ್ಬಿಸಿತು,"ನಮ್ ಹಳೆ ಪದ್ಧತಿಗಳನ್ನ ಉಳಿಸ್ಕೋಬೇಕಾಗಿದೆ. ಇಲ್ಲಾಂದ್ರೆ ನಮ್ ಮಕ್ಳಿಗೆ ಕುಡಿಯೋಕ್ಕು ನೀರಿಲ್ಲ, ನಮ್ ಹೊಲಕ್ಕೂ ನೀರಿಲ್ಲ ಅಂತಾಗ್ತದೆ"

ಚಿಕ್ಕಮಗಳೂರಿನಿಂದ ೧೦ ಕಿಮೀ ದೂರದ ಲಕ್ಯದಲ್ಲಿ ಅಂದು ಸುಮಾರು ಇನ್ನೂರು ಹಳ್ಳಿಗರು ಶಿಸ್ತಿನಿಂದ ಕುಳಿತ್ತಿದ್ದರು - ಅರುಣೋದಯ ರೈತ ಮತ್ತು ಬ್ಯಾಂಕ್ ಮಿತ್ರಕೂಟವು (ಆಗಿನ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಪ್ರಾಯೋಜಿತ) ಏರ್ಪಡಿಸಿದ "ಮಳೆನೀರ ಕೊಯ್ಲು ಮತ್ತು ಕೊಳವೆಬಾವಿ ಜಲ ಮರುಪೂರಣ" ವಿಚಾರಸಂಕಿರಣದಲ್ಲಿ. ಅವರಲ್ಲಿ ಅರೆಪಾಲು ಮಹಿಳೆಯರು.

ಅದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದ ನಾನು, ಕೊಳವೆಬಾವಿಗಳ ಅನಾಹುತವನ್ನೂ ಅಂತರ್ಜಲ ಮರುಪೂರಣದ ಅಗತ್ಯವನ್ನೂ ಮರಿಗೌಡರ ಮಾತಿನ ಮುಂಚೆ ತಿಳಿಸಿ ಹೇಳಿದ್ದೆ. ೧೯೮೦ರ ಮುಂಚೆ ಕೊಳವೆಬಾವಿಗಳ ಸುದ್ದಿಯೇ ಇರಲಿಲ್ಲ. ಅನಂತರ ಕೊಳವೆಬಾವಿಯೇ ನೀರಿನ ಸಮಸ್ಯೆಗೆ ಉತ್ತರ ಎಂಬ ಭ್ರಾಂತಿಗೆ ಬಿದ್ದೆವು. ತೆರೆದ ಬಾವಿ ಒಣಗಿದಾಗ, ಮಳೆ ಕೈಕೊಟ್ಟಾಗ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆದೆವು.  ಒಂದು ಎಕರೆ ಜಾಗದಲ್ಲಿ ಒಂದಲ್ಲ, ಎರಡಲ್ಲ, ನಾಲ್ಕು ಕೊಳವೆಬಾವೆಗಳು! ಒಂದು ಕೊಳವೆಬಾವಿ ಬತ್ತಿದರೆ ಅದಕ್ಕಿಂತ ಆಳವಾದ ಇನ್ನೊಂದು ಕೊಳವೆಬಾವಿ! ಪ್ರಕೃತಿಯೊಂದಿಗೆ ಪೈಪೋಟಿಗೆ ಬಿದ್ದು, ಈ ಪರಿಯಲ್ಲಿ ಅಂತರ್ಜಲದ ಕೊಳ್ಳೆ ಹೊಡೆಯುವಾಗ ನಾವು ಗಮನಿಸದಿದ್ದ ಒಂದು ಸಂಗತಿ: ಕೊಳವೆಬಾವಿಗಳಿಂದ ನಾವು ಎತ್ತುತ್ತಿರುವುದು ಶತಮಾನಗಳಿಂದ ಶೇಖರವಾದ ನೆಲದಾಳದ ನೀರು, ಅದು ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ನಾವು ಉಳಿಸಿ ಹೋಗಬೇಕಾದ ಆಪತ್ಕಾಲಕ್ಕಾಗುವ ಸಂಪತ್ತು ಎಂಬುದನ್ನು. ಹಾಗಾಗಿ, ಅದನ್ನು ಮತ್ತೆ ತುಂಬಿಕೊಡುವ ಜವಾಬ್ದಾರಿ ನಮ್ಮದೇ ಆಗಿದೆ ಎಂದು ಅಲ್ಲಿ ಕುಳಿತಿದ್ದ ಹಳ್ಳಿಗರಿಗೆ ವಿವರಿಸಿದ್ದೆ.

ನಮ್ಮ ಒಟ್ಟು ನೀರಿನ ಬಳಕೆಯ ಶೇಕಡಾ ೭೦ ಕಬಳಿಸುತ್ತಿರುವ ಕೃಷಿಯಲ್ಲಿ ನೀರಿನ ಉಳಿತಾಯ ಹೇಗೆ? ಕಡಿಮೆ ನೀರು ಬೇಡುವ ಬೆಳೆಗಳನ್ನು ಯಾಕೆ ಬೆಳೆಸಬೇಕು? ಬಹುವಾರ್ಷಿಕ ಬೆಳೆಗಳಿಗೆ ಕಡಿಮೆ ನೀರುಣಿಸಿ, ಫಸಲಿನ ಪ್ರಮಾಣ ಉಳಿಸಿಕೊಳ್ಳುವುದು ಹೇಗೆ? ಬಾವಿಯಲ್ಲಿ ಅಥವಾ ಹೊಂಡದಲ್ಲಿ ಇರುವ ನೀರಿನಿಂದ ಅಲ್ಪಾವಧಿ ಬೆಳೆಗಳನ್ನು ಬೆಳೆಸುವುದು ಹೇಗೆ?

ಇಂತಹ ಪ್ರಶ್ನೆಗಳ ಉತ್ತರಗಳ ಹುಡುಕಾಟವೇ ಜಲ ಸಾಕ್ಷರತೆ. ನಾವು ಜಲಸಾಕ್ಷರರಾಗಿ ನಮ್ಮ ನೀರಿನೆಚ್ಚರವನ್ನು ಸಮುದಾಯಕ್ಕೆ ಹಬ್ಬಿಸುವುದೇ ಜಲಜಾಗೃತಿ. ಇದರೊಂದಿಗೆ ಮನೆಮನೆಗಳಲ್ಲಿ ಹಾಗೂ ಸಮುದಾಯದ ನೆಲೆಯಲ್ಲಿ ಮಳೆ ನೀರಿಂಗಿಸುವ ಮತ್ತು ನೀರು ಸಂರಕ್ಷಿಸುವ ಕೆಲಸಗಳನ್ನು ಮಾಡುವುದೇ ಜಲ ಸಂರಕ್ಷಣೆ. ಇವನ್ನೆಲ್ಲ ನಾನು ವಿವರಿಸುತ್ತ ಹೋದಂತೆ  ತೊಟ್ಟಿಯಿಂದ ನೀರು ತೊಟ್ಟಿಕ್ಕುವ ಸದ್ದು ಕೇಳುವಷ್ಟು ನಿಶ್ಶಬ್ದ ಅಲ್ಲಿ ನೆಲೆಸಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಮಿತ್ರಕೂಟದ ಅಧ್ಯಕ್ಷರಾದ ಎಲ್. ಜಿ. ಶಿವಸ್ವಾಮಿ ಹೇಳಿದ ಮಾತು ಅಲ್ಲಿ ಸೇರಿದ್ದ ಹಳ್ಳಿ ಜನರ ದನಿಯಾಗಿತ್ತು, "ನಾವು ಎರಡು ವರುಷ ಮುಂಚೇನೇ ಈ ಕಾರ್ಯಕ್ರಮ ನಡೆಸಿದ್ದರೆ, ಕಳೆದ ಎರಡು ವರುಷಗಳ ಬರಗಾಲದ ಸಂಕಟ ಕಡಿಮೆಯಾಗ್ತಿತ್ತು. ನಮಗೆ ಇವೆಲ್ಲ ಸಂಗತಿಗಳು ಗೊತ್ತಿರಲೇ ಇಲ್ಲ. ಈಗ ಅರ್ಥವಾಗಿದೆ. ಇನ್ನು ಮಳೆ ನೀರಿಂಗಿಸುವ ಕೆಲಸ ಶುರು ಮಾಡ್ತೀವಿ."