ಎರಡು ಸಾಲಿನ ಕಥೆಗಳು

ಎರಡು ಸಾಲಿನ ಕಥೆಗಳು


ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ.
ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ.

 

***

 

ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ ಅಂತ ಬದುಕೋದು? ಆ ಬೆಟ್ಟದಲ್ಲಿ ತುಂಬಾ ಹುಲ್ಲು ಬೆಳೆದಿದೆ, ಅಲ್ಲಿ ಹೋಗಿ ತಿಂದುಕೊಂಡು ಆರಾಮಾಗಿ ಇರೋಣವೇ?"
ಇನ್ನೊಂದು ಎತ್ತು ಹೇಳಿತು "ಅಲ್ಲಿ ಸಂಜೆಯಾದ ನಂತರ ನಮ್ಮನ್ನು ಕಟ್ಟಿ ಹಾಕಲು ಯಾರೂ ಇರಲ್ಲ, ಏನು ಮಾಡೋದು ?"

 

***

 

ಅಳುತ್ತಾ ಕುಳಿತಿದ್ದ ಮಗನನ್ನು ಸಮಾಧಾನ ಪಡಿಸುತ್ತಾ ಅಪ್ಪ ಹೇಳಿದ.. "ಅಳಬೇಡ ಕಂದ, ಅವಳು ಹೋದರೆ ಏನಂತೆ. ಇನ್ನೊಬ್ಬಳನ್ನು ಮನೆಗೆ ತಂದರಾಯ್ತು."
ಮಗ ಅಳುತ್ತಾ ನುಡಿದ.. "ತರಬಹುದು ಅಪ್ಪಾ.. ಆದರೆ ಆಕೆ ನನಗೆ ಚಿಕ್ಕಮ್ಮ ಆಗುತ್ತಾಳೆಯೇ ಹೊರತೂ ಹೆತ್ತಮ್ಮ ಆಗುವುದಿಲ್ಲವಲ್ಲ?"

 

***

 

ಹದಿನೈದು ವರ್ಷದ ಹಿಂದೆ ನಾನು ಬಾಲಕನಾಗಿದ್ದಾಗ ಆ ದೀಪಾವಳಿಯನ್ನು ತುಂಬಾ ಖುಶಿಯಿಂದ ಪಟಾಕಿ ಸಿಡಿಸಿ ಕೊಂಡಾಡಿದೆ. ಎಷ್ಟೊಂದು ಕೊಂಡಾಡಿದೆನೆಂದರೆ ಇಂದಿಗೂ ನನಗೆ ದೃಷ್ಟಿ ಬಂದಿಲ್ಲ.

 

***

 

"ನೀನು ತುಂಬಾ ಸುಂದರಿ"
"ನೀನು ತುಂಬಾ ತುಂಟ"

 

***

 

"ನಿನಗೆ ವಯಸ್ಸಾಯ್ತು ಕಣೆ"
"ನಿಮಗೆ ಕೈಲಾಗಲ್ಲ"

 

***

 

ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ.
ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ"

 

***

 

ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ.

 

***

 

"ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು.
ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ.

 

***

 

"ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು.

 

***

 

ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ.

***

Comments