ಎರಡು ಸೂಫಿ ಕತೆಗಳು.

ಎರಡು ಸೂಫಿ ಕತೆಗಳು.

ಗಿಳಿಮರಿ

ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ ಪ್ರವಾಸ ಬೆಳೆಸಬೇಕಾಗಿ ಬಂತು. ತನ್ನ ಮನೆಯವರೊಂದಿಗೆ ದೂರದ ಭಾರತದ ದೇಶದಿಂದ ಏನಾದರೂ ಉಡುಗೊರೆ ಬೇಕೇ ಎಂದು ಕೇಳಿದ. ತಕ್ಷಣವೇ ತನ್ನ ಗಿಳಿಮರಿಯ ನೆನಪಾಗಿ “ನಿನಗೇನಾದರೂ ಬೇಕೇ? ನಾನು ನಿನ್ನ ತಾಯ್ನಾಡಿಗೆ ಹೊರಡುತ್ತಿದ್ದೇನೆ”ಎಂದ. ಪಂಜರದ ಬದುಕಿನಿಂದ ಅದಾಗಲೇ ಬೇಸತ್ತು ಹೋಗಿದ್ದ ಗಿಳಿಯು ತನ್ನ ಒಡೆಯನಲ್ಲಿ ಒಂದು ಮನವಿಯನ್ನು ಮುಂದಿಟ್ಟಿತ್ತು. “ಒಡೆಯಾ, ನೀವು ನನ್ನ ತವರಿಗೆ ಹೋಗುತ್ತಿದ್ದೀರಿ. ಅಲ್ಲಿ ನನ್ನವರು ಧಾರಾಳವಾಗಿ ಸ್ವಚ್ಛಂದ ವಾತಾವರಣದಲ್ಲಿ ವಿಹರಿಸುತ್ತಿರುವರು. ನೀವು ಖಂಡಿತಾ ಅವರನ್ನು ಭೇಟಿಯಾಗಬೇಕು ಮತ್ತು ಅವರಲ್ಲಿ ನನ್ನದೊಂದು ಸಲಾಮನ್ನು ಹೇಳಬೇಕು. ನಿಮ್ಮ ಸ್ನೇಹಿತನೊಬ್ಬ ಪಂಜರದಲ್ಲಿರುವಾಗ ಅದು ಹೇಗೆ ನಿಮಗೆ ಆರಾಮವಾಗಿರಲು ಸಾಧ್ಯ ಎಂಬ ಪ್ರಶ್ನೆ ನನಗಾಗಿ ಅವರಲ್ಲಿ ಕೇಳಬೇಕು. ನನ್ನ ಸ್ಥಿತಿಯೇನೆಂಬುವುದನ್ನು ಅವರಿಗೆ ತಲುಪಿಸಬೇಕು” ಎಂದಿತು ಗಿಳಿಮರಿ.

ವ್ಯಾಪಾರಿಯು ತನ್ನ ವಹಿವಾಟುಗಳೆಲ್ಲ ಮುಗಿದ ಬಳಿಕ ಗಿಳಿಯ ಕೋರಿಕೆಯಂತೆ ಅರಣ್ಯವೊಂದನ್ನು ಪ್ರವೇಶಿಸಿ ತನ್ನ ಗಿಳಿಮರಿಯ ಸಮಾಚಾರವನ್ನು ಅಲ್ಲಿರುವ ಹಕ್ಕಿಗಳೊಂದಿಗೆ ಹಂಚಿಕೊಂಡನು. ವಿಷಯ ಕೇಳುತ್ತಿದ್ದಂತೆ ಮರದ ಮೇಲಿದ್ದ ಹಕ್ಕಿಯೊಂದು ತೊಪ್ಪನೆ ಕುಸಿದುಬಿತ್ತು. ಪಂಜರದಲ್ಲಿರುವ ಗಿಳಿಮರಿಯ ಸಂಬಂಧಿ ಹಕ್ಕಿ ಇದಾಗಿರಬಹುದೇ? ಆ ಕಾರಣದಿಂದಲೇ ಈ ಹಕ್ಕಿಯು ಆಘಾತಗೊಂಡು ತನ್ನ ಪ್ರಾಣ ಕಳೆದುಕೊಂಡಿತೇ? ಹೀಗೆಂದು ಊಹಿಸಿಕೊಂಡ ವ್ಯಾಪಾರಿಯು ಸುಮ್ಮನಾದ. ಆ ಹಕ್ಕಿಯ ಸಾವು ಅವನನ್ನು ಕಾಡದಿರಲಿಲ್ಲ. ಅವನಲ್ಲಿ ಒಂದು ತೆರನಾದ ಶೂನ್ಯ ಭಾವನೆ ಆವರಿಸಿತು. ಆತ ಭಾರವಾದ ಎದೆಯೊಂದಿಗೆ ತನ್ನೂರಿಗೆ ಹಿಂದಿರುಗಿದ. ಸ್ವದೇಶಕ್ಕೆ ಮರಳಿದ ನಂತರ ಪಂಜರದ ಗಿಳಿಯು “ನನ್ನ ತಾಯ್ನಾಡಿನ ಶುಭವಾರ್ತೆಯೇನು? ನನ್ನ ಸಂಬಂಧಿಕರು ಏನೆಂದರು?” ಎಂಬಿತ್ಯಾದಿ ಪ್ರಶ್ನೆಗಳನ್ನು ಒಡೆಯನಲ್ಲಿ ಕೇಳಿತು.

ವ್ಯಾಪಾರಿ ತನ್ನ ಗಿಳಿಯಲ್ಲಿ ಮರದ ಮೇಲಿನಿಂದ ಬಿದ್ದು ಸತ್ತುಹೋದ ಹಕ್ಕಿಯ ಸಮಾಚಾರವನ್ನು ಅಲ್ಪ ಹಿಂಜರಿಕೆಯಿಂದಲೇ ತಿಳಿಸಿದ. ಇದನ್ನು ಕೇಳುತ್ತಲೇ ಆ ಗಿಳಿಮರಿಯೂ ಪಂಜರದಲ್ಲಿ ಪಟ್ಟನೆ ಕುಸಿದು ಬಿತ್ತು. ತನ್ನ ಸಂಬಂಧಿಯ ಅಕಾಲಿಕ ಮರಣವಾರ್ತೆಯನ್ನು ಕೇಳಿ ಈ ಗಿಳಿಯೂ ಸತ್ತುಹೋಯಿತೇ? ಎಂದು ವ್ಯಾಪಾರಿಯು ಖೇದಗೊಂಡ. ಗಿಳಿಯನ್ನು ತನ್ನ ಬೊಗಸೆಯಲ್ಲಿ ಎತ್ತಿಕೊಂಡವನು ಮೆತ್ತಗೆ ಪಂಜರದಿಂದ ಹೊರತೆಗೆದು ಮೇಜಿನ ಮೇಲಿರಿಸಿದ. ಹೊರಗಿಡುತ್ತಿದ್ದಂತೆ ಗಿಳಿಮರಿಯು ಥಟ್ಟನೆ ತನ್ನ ಪುಟಾಣಿ ರೆಕ್ಕೆಗಳನ್ನು ಹೊಡೆದುಕೊಂಡು ಕಿಟಕಿಯಿಂದ ಹೊರಕ್ಕೆ ಹಾರಿ ಮರದ ರೆಂಬೆಯೊಂದರಲ್ಲಿ ಕುಳಿತುಕೊಂಡಿತು.

ಆಶ್ಚರ್ಯಗೊಂಡ ವ್ಯಾಪಾರಿಯು ಗಿಳಿಯನ್ನೇ ನೋಡುತ್ತ ನಿಂತಿರುವಾಗ ಮರದ ಕೊಂಬೆಯೊಂದರ ಮೇಲೆ ಕುಳಿತ ಗಿಳಿಯು “ಓ ನನ್ನ ಒಡೆಯನೇ, ನಾನು ಪಂಜರದಲ್ಲಿದ್ದೇನೆ ಎಂಬ ಸಂದೇಶದಲ್ಲಿ ನನ್ನ ಬಿಡುಗಡೆಗೆ ದಾರಿ ಯಾವುದಾದರೂ ಇದೆಯೇ ಎನ್ನುವ ಪ್ರಶ್ನೆಯೂ ಅಡಕವಾಗಿತ್ತು. ಅದನ್ನು ಕೇಳಿದ ನನ್ನ ತವರಿನ ಹಕ್ಕಿಯು ಉಪಾಯವೊಂದನ್ನು ನಿನ್ನ ಮೂಲಕವೇ ಕಳುಹಿಸಿಕೊಟ್ಟಿತು! ಜೊತೆಗೆ, ನೀನು ವಯ್ಯಾರದ ಮಾತನ್ನು ನಿಲ್ಲಿಸಿಬಿಡು. ನಿನ್ನ ಶಬ್ಧವನ್ನು ಕರ್ಕಶಗೊಳಿಸಿಬಿಡು. ಮುದ್ದಾದ ಮಾತುಗಳೇ ನಿನ್ನ ಹಿತ ಶತ್ರುಗಳು. ಅವುಗಳನ್ನು ತ್ಯಜಿಸಿ ಬಂಧನ ಮುಕ್ತಿಯನ್ನು ಪಡೆಯಬೇಕು ಎಂಬುದೇ ಆ ನನ್ನ ಸಂಗಾತಿ ನಿನ್ನ ಮೂಲಕ ರವಾನಿಸಿದ ಉಪಾಯ.

ಇಷ್ಟು ದಿನ ಬಂಧನದಲ್ಲಿ ಇಟ್ಟಿದ್ದರೂ ಈ ನಿಗೂಢವಾದ ಉಪಾಯವನ್ನು ಹೊತ್ತು ತಂದ ಒಡೆಯನೇ ನಿನಗೆ ಅನಂತ ಧನ್ಯವಾದಗಳು”. ಆ ಬಳಿಕ ಗಿಳಿಯು ತನ್ನೊಡೆಯನಲ್ಲಿ ಹೀಗೆಂದು ಹೇಳುತ್ತದೆ; “ಒಡೆಯಾ, ನಶ್ವರ ಬದುಕಿನ ಕ್ಷಣಿಕ ಆನಂದವನ್ನು ತ್ಯಜಿಸಿಬಿಡು. ಐಹಿಕ ಬದುಕಿನ ಸೆರೆಮನೆಯಿಂದ ಪಲಾಯನಗೈದು ಸ್ವತಂತ್ರಗೊಳ್ಳು. ಇಲಾಹೀ ಪ್ರೇಮದಿಂದ ಮಾತ್ರವೇ ಮನವು ತನ್ನ ಅಭೀಷ್ಠೆಯನ್ನು ತಲುಪಲು ಸಾಧ್ಯ.”

ಅಂತಿಮವಾಗಿ ಗಿಳಿ ತನ್ನ ಮಾಲಿಕನಿಗೆ ಕೆಲವೊಂದು ಹಿತೋಪದೇಶವನ್ನು ನೀಡುತ್ತದೆ; “ನಿನ್ನ ದಾರಿಯು ಪರಮಾತ್ಮನನ್ನು ಸೇರುವ ಕಡೆಗಿರಬೇಕು. ನಾನೀಗ ನಿನ್ನಿಂದ ಸ್ವತಂತ್ರಗೊಂಡತೆ ನೀನೂ ಸ್ವತಂತ್ರಗೊಂಡು ಮುಂದಕ್ಕೆ ನೈಜ ಜಗತ್ತಿಗೆ ನಿನ್ನನ್ನು ನೀನು ಅನಾವರಣಗೊಳಿಸಬೇಕು. ರೇಷ್ಮೆ ಹುಳದಂತೆ ನಿನ್ನ ಸುತ್ತ ನೀನೇ ಚೌಕಟ್ಟನ್ನು ಕಟ್ಟಿಕೊಂಡಿರುವೆ. ಆ ಚೌಕಟ್ಟನ್ನು ಒದೆದು ಬದಿಗೆ ಸರಿಸಿಬಿಡಬೇಕು‌. ಬಿಡುಗಡೆಗಿರುವ ಏಕೈಕ ಮಾರ್ಗ ಇವುಗಳನ್ನೆಲ್ಲ ತೊರೆದು ಹೃದಯ ಮಂದಿರದಲ್ಲಿ ಪರಮಾತ್ಮನನ್ನು ಪ್ರತಿಷ್ಠಾಪಿಸಿ ಪ್ರೇಮದಾಹಿಯಾಗುವುದು. ಇದನ್ನು ಅನುಸರಿಸಿದರೆ‌ ಮಾತ್ರ ಇಹದ ಕಬಂಧ ಬಾಹುಗಳಿಂದ ಕಳಚಿಕೊಂಡು ಪಾರಾಗಬಹುದು.”

ಇಷ್ಟು ಹೇಳಿದ ಬಳಿಕ ಬಂಧಮುಕ್ತನಾದ ಆನಂದದಿಂದ ಗಿಳಿಮರಿಯು ನೀಲಾಕಾಶದತ್ತ ಹಾರುತ್ತಾ ಹೋಯಿತು. ಆ ಹಾರಾಟದಲ್ಲಿದ್ದ ಉತ್ಸಾಹವನ್ನು ನೋಡುತ್ತಾ ವ್ಯಾಪಾರಿಯು ಚಕಿತಗೊಂಡು ನಿಂತುಬಿಟ್ಟನು. ಆತ, ತನ್ನ ಸಾಕುಗಿಣಿಯಲ್ಲಿ “ನಿನ್ನ ಉಪದೇಶಗಳು ನನ್ನನ್ನು ದೇವರ ಬಳಿಗೆ ಹಿಂದಿರುಗಿಸಿದವು” ಎಂದು ಕೃತಜ್ಞತೆ ಸಲ್ಲಿಸಿದನು. 

***

ಮನೆ ಮತ್ತು ಬೆಕ್ಕು

ಒಮ್ಮೆ ಬಹಳ ತೊಂದರೆಗೆ ಸಿಕ್ಕಿಕೊಂಡ ಮನುಷ್ಯ ತನ್ನ ತೊಂದರೆಗಳೆಲ್ಲಾ ನಿವಾರಣೆಯಾದರೆ ಮನೆಯನ್ನು ಮಾರಿ ಅದರಿಂದ ಬಂದ ಹಣವನ್ನು ಬಡಬಗ್ಗರಿಗೆ ಹಂಚುವುದಾಗಿ ಪ್ರಮಾಣ ಮಾಡಿದ.ಕೊನೆಗೆ ಒಂದು ದಿನ ಅವನ ತೊಂದರೆಗಳೆಲ್ಲ ನಿವಾರಣೆಯಾದವು.ಅವನಿಗೆ ತಾನು ಮಾಡಿದ ಪ್ರಮಾಣವನ್ನು ನಡೆಸಿಕೊಡ ಬೇಕಾಗಿ ಬಂತು ಬೇಕಾಗಿ  ಬಂದಿತು.ಅವರೆ ಮನೆ ಮಾರಿ ಬಂದ ಹಣವನ್ನು ಬಡ ಬಗ್ಗರಿಗೆ ಹಂಚಲು ಅವನಿಗೆ ಮನಸ್ಸು ಬರಲಿಲ್ಲ.ಅದಕ್ಕಾಗಿ ಅವನೊಂದು ಉಪಾಯ ಮಾಡಿದ.

ತನ್ನ  ಮನೆ ಹಾಗು ತನ್ನ ಬೆಕ್ಕನ್ನು ಆತ ಮಾರಾಟಕ್ಕೆ ಇಟ್ಟನು.ಮನೆಯ ಬೆಲೆ ಒಂದು ಬೆಳ್ಳಿಯ ನಾಣ್ಯ.ಬೆಕ್ಕಿನ ಬೆಲೆ ಒಂದು ಸಾವಿರ ನಾಣ್ಯ.ಆದರೆ ಕೊಳ್ಳುವವರು ಎರಡನ್ನು ಒಟ್ಟಿಗೆ ಕೊಂಡುಕೊಳ್ಳಬೇಕು. ಯಾರೊ ಒಬ್ಬ ಎರಡನ್ನು ಕೊಂಡುಕೊಂಡ.ಈತ  ಮನೆ ಮಾರಿ ಬಂದ  ಒಂದು ಬೆಳ್ಳಿಯ ನಾಣ್ಯವನ್ನು ಬಡ ಬಗ್ಗರಿಗೆ  ಹಂಚಿ ತಾನು ಮಾಡಿದ ಪ್ರಮಾಣ ಉಳಿಸಿಕೊಂಡ.ಬೆಕ್ಕು ಮಾರಿ ಬಂದ ಹಣದಿಂದ ಹೊಸ ಮನೆಯನ್ನು ಕೊಂಡುಕೊಂಡನು.ಬೆಕ್ಕು

(ವಿವಿಧ ಮೂಲಗಳಿಂದ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ