ಎರಡು ಹನಿ "ಹರಟೆ"ಗಳು
೧. "ಟ್ಯಾಕ್ಸಿ ಡ್ರೈವರ್ಗಳು ಶೌಚಾಲಯಕ್ಕಿಂತಲೂ ಗಬ್ಬು". ಇದು ನಾನು ಹೇಳುತ್ತಿರುವುದಲ್ಲ, ಮಲೇಷ್ಯಾದ ಕ್ಯಾಬಿನೆಟ್ ದರ್ಜೆಯ ಸಚಿವರ ಬಾಯಿಂದ ಉದುರಿದ್ದು. ಮಲೇಷ್ಯಾದ ಪ್ರವಾಸ ಉದ್ಯಮಕ್ಕೆ ಒರಟಾಗಿ ನಡೆದುಕೊಳ್ಳುವ, ಬೇಕಾಬಿಟ್ಟಿ ಚಾರ್ಜ್ ಮಾಡುವ, ಮೀಟರ್ ಉಪಯೋಗಿಸಲೊಲ್ಲದ ಚಾಲಕರಿಂದ ಗಂಡಾಂತರ ಎಂದು ಸಚಿವರ ಅಭಿಪ್ರಾಯ. ಇದನ್ನು ಓದಿದಾಗ ನಮ್ಮ ನಗರಗಳೂ ಅದರಲ್ಲೂ ವಿಶೇಷವಾಗಿ ನಮ್ಮ ನೆಚ್ಚಿನ ಗಾರ್ಡನ್ ಸಿಟಿ ಬೆಂಗಳೂರಿನ ಆಟೋ ಚಾಲಕರು ಕಣ್ಣಿನ ಮುಂದೆ ಬಂದು ನಿಲ್ಲುತ್ತಾರೆ ಅಲ್ಲವೇ? ಅವರು ಹೋಗುವ ಕಡೆ ನಾವು ಹೋಗಬೇಕು. ಹಾಗೆ ಹೋದರೆ ಒಂದೆರಡು ಆಟೋಗಳು ಮತ್ತು ನಾಲ್ಕಾರು ಬಡಾವಣೆಗಳ ಟೂರ್ ಮುಗಿಸಿ ನಮ್ಮ ನೆಲೆಗೆ ನಾವು ಬಂದು ತಲುಪಬಹುದು.
ಮಲೇಷ್ಯಾದ ಶೌಚಾಲಯಗಳು ಮೊದಲೇ ಗಬ್ಬು ಎನ್ನುವುದು ಮಂತ್ರಿ ಮಹೋದಯರ ಅಳಲು. ಅದನ್ನೂ ಮೀರಿಸಿ ಈ ಚಾಲಕರು ಬೆಳೆಯಬೇಕೆಂದರೆ ವ್ಯವಸ್ಥೆಯಲ್ಲೇ ಇದೆ ಎಡವಟ್ಟು. ನಾವೂ ಮಲೆಷ್ಯದವರೂ ಕೂತು ಏನಾದರೂ ಮಾಡಲೇಬೇಕು. ಮಂತ್ರಿಗಳ ಪ್ರಕಾರ ಈ ಪೀಡೆ ಚೀನಾ ದೇಶದಲ್ಲಿ ಇಲ್ಲವಂತೆ. ಹೇಗೆ ಇದ್ದೀತು? ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡುವರು ಜನರನ್ನು ಅದರಲ್ಲೂ ಡಾಲರ್ ತರುವ ಪ್ರವಾಸಿಗರನ್ನು ಕಾಡುವವರು. ಕೊನೆಗೆ ಸಮಾಧಾನಕ್ಕಾಗಿ (ವೋಟಿನ ಮೇಲೆ ಒಂದು ಕಣ್ಣು ?) ಒಂದು ಮಾತನ್ನು ಸೇರಿಸಲು ಮರೆಯಲಿಲ್ಲ ಮಂತ್ರಿಗಳು. ಎಲ್ಲಾ ಚಾಲಕರೂ ಹೀಗಲ್ಲವಂತೆ.
೨. ಬನ್ನಿ, ಟು ಲ್ಯಾಂಡ್ ಆಫ್ ಹ್ಯಾಪೆನಿಂಗ್. ಅದೇ ರೀ ಅಮೇರಿಕಾ.
ಒಹಾಯೋ ರಾಜ್ಯದ ನಗರವೊಂದರಲ್ಲಿ ನಡೆದ ಘಟನೆ. ೧೯೪೯ ರಲ್ಲಿ ಓರ್ವ ವ್ಯಕ್ತಿ ಬಂದು "ನೆಪೋಲಿಯನ್" ನ ಜೀವನ ಚರಿತೆ ಪುಸ್ತಕವನ್ನು ಗ್ರಂಥಾಲಯದಿಂದ ತೆಗೆದುಕೊಂಡು ಹೋದ. ಇದರಲ್ಲೇನು ವಿಶೇಷ, ಗ್ರಂಥಾಲಯಗಳು ಇರುವುದೇ ಪುಸ್ತಕಗಳನ್ನು ಆಸಕ್ತರಿಗೆ ಎರವಲು ಕೊಡಲು ಅಲ್ಲವೇ ಎಂದಿರಾ? ಇಲ್ಲೇ ಇರೋದು ಗಮ್ಮತ್ತು. ೧೯೪೯ ರಲ್ಲಿ ಈ ಪುಣ್ಯಾತ್ಮನ ಜೊತೆ ಸವಾರಿ ಬೆಳೆಸಿದ ಪುಸ್ತಕ ವಾಪಸಾಗಿದ್ದು 2009 ರಲ್ಲಿ. ಹಾಂ? ೨೦೦೯ ರಲ್ಲಾ? ಅಂದರೆ ಸರಿಯಾಗಿ ೬೦ ವರ್ಷಗಳ ನಂತರವೇ? ಹೌದು ೬೦ ವರ್ಷಗಳ ನಂತರ. ಖುದ್ದಾಗಿ ತಂದು ಕೊಡಲು ಸ್ವಲ್ಪ ಸಂಕೋಚವಾಗಿ ಪೋಸ್ಟ್ ನಲ್ಲಿ ಕಳಿಸಿದ ಒಂದು ಚಿಕ್ಕ ಟಿಪ್ಪಣಿಯೊಂದಿಗೆ; ಪುಸ್ತಕ ತುಂಬಾ ಚೆನ್ನಾಗಿದೆ. ನಾನು ರೆಜಿಸ್ಟರ್ ಮಾಡದೆ ಪುಸ್ತಕ ತೆಗೆದು ಕೊಂಡು ಹೋದದ್ದಕ್ಕೆ ಕ್ಷಮೆ ಇರಲಿ ಅಂತ ಟಿಪ್ಪಣಿ. ಗ್ರಂಥಾಲಯದ ವಕ್ತಾರ ( ಆಕೆ ಹೆಣ್ಣು, ವಕ್ತಾರದ ಸ್ತ್ರೀಲಿಂಗ ನನಗೆ ಗೊತ್ತಿಲ್ಲ) ಹೇಳಿದರು. ಇದು holiday season (christmas) ಆದ್ದರಿಂದ ಈಗ ತಪ್ಪಿನ ಅರಿವಾಗಿ ಆದ ಪ್ರಮಾದವನ್ನು ಸರಿಪಡಿಸಲು ಈಗ ಪುಸ್ತಕವನ್ನು ಹಿಂದಿರುಗಿಸಿದ್ದಾನೆ ಓದುಗ ಎಂದು ಹೇಳಿಕೆ ನೀಡಿದರು. better late than never, ಅಲ್ಲವೇ? ಆದರೆ ಆರು ದಶಕಗಳು ಸ್ವಲ್ಪ ಜಾಸ್ತಿಯೇ ಆಯ್ತೇನೋ?