ಎರೆಹುಳುಗಳ ಮೇಲೆ ಡಾರ್ವಿನ್ ಪ್ರಯೋಗ !

ಚಾರ್ಲ್ಸ್ ಡಾರ್ವಿನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಜೀವಿಗಳ 'ವಿಕಾಸವಾದ' ಬಗ್ಗೆ ಈತ ನಡೆಸಿದ ಅಧ್ಯಯನಗಳನ್ನು ನಾವು ಈಗಲೂ ಕಲಿಯುತ್ತಿದ್ದೇವೆ. ಆದರೆ ಈ ಚಾರ್ಲ್ಸ್ ಡಾರ್ವಿನ್ ನಮ್ಮ 'ರೈತ ಮಿತ್ರ' ಎರೆಹುಳುಗಳ ಬಗ್ಗೆ ಅಧ್ಯಯನ ನಡೆಸಿ ತಿಳಿಸಿದ ವಿಷಯಗಳ ಬಗ್ಗೆ ನಿಮಗೆ ಗೊತ್ತೇ? ಡಾರ್ವಿನ್ ಎರೆಹುಳುಗಳ ಜೀವನದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿ ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಯಲು ಮಾಡಿದ್ದಾನೆ. ಬನ್ನಿ, ಒಂದೊಂದಾಗಿ ತಿಳಿದುಕೊಳ್ಳುವ.
ಎರೆಹುಳುಗಳು ಸಂಗೀತಕ್ಕೆ ಪ್ರತಿಕ್ರಿಯಿಸುತ್ತವೆಯಾ ಎಂದು ಗಮನಿಸಲು ಡಾರ್ವಿನ್ ಆ ಸಮಯದ ಖ್ಯಾತ ಸಂಗೀತಕಾರ ಬಿಥೋವನ್ ನ ಸಿಂಫನಿಯನ್ನು ನುಡಿಸಿದರೂ ಅದು 'ಕೋಣನ ಮುಂದೆ ಕಿನ್ನರಿ' ಬಾರಿಸಿದಂತೆ ಆಯಿತಂತೆ. ಹೊರ ಪ್ರಪಂಚದಿಂದ ಬರುವ ಯಾವುದೇ ಶಬ್ಧಗಳಿಗೆ ಎರೆಹುಳುಗಳು ಪ್ರತಿಕ್ರಿಯೆ ನೀಡಲೇ ಇಲ್ಲ. ಆದರೆ ಮಣ್ಣಿನಲ್ಲಿ ಮೇಯುವಾಗ ಬರುವ ಸಣ್ಣ ಪುಟ್ಟ ತರಂಗಗಳಿಗೂ ಅದು ಪ್ರತಿಕ್ರಿಯೆ ನೀಡುತ್ತಿತ್ತು. ಎರೆಹುಳುಗಳಿಗೆ ಕಿವಿಯಿಲ್ಲ ಎಂದು ಡಾರ್ವಿನ್ ಅರಿತರು. ನಂತರ ಕ್ರಮೇಣ ಅವುಗಳಿಗೆ ಕಣ್ಣೂ ಇಲ್ಲ ಎಂಬ ವಿಷಯದ ಅರಿವಾಯಿತು. ಆದರೂ ತೀಕ್ಷ್ಣವಾದ ಬೆಳಕಿನ ಕಿರಣಗಳಿಗೆ ಎರೆಹುಳುಗಳು ಪ್ರತಿಕ್ರಿಯಿಸುವುದು ಡಾರ್ವಿನ್ ಅವರಿಗೆ ಅಚ್ಚರಿಯಾಗಿ ಕಂಡಿತು.
ತೀವ್ರವಾದ ಬೆಳಕಿರುವಾಗ ಮಣ್ಣಿನ ಅಡಿಯಲ್ಲಿರುವ ತಮ್ಮ ಗೂಡುಗಳನ್ನು ಸೇರಿಕೊಳ್ಳುವ ಎರೆಹುಳುಗಳು ಬೆಳಕಿನ ಪ್ರಭಾವ ಕಡಿಮೆಯಾದ ಬಳಿಕ ಹೊರಬಂದು ಮಣ್ಣಿನಲ್ಲಿರುವ ಯಾವುದೇ ಅವಶೇಷಗಳನ್ನು ಮೆಲ್ಲಲು ಪ್ರಾರಂಭಿಸುತ್ತದೆ. ಯಾವುದನ್ನು ಬೇಕಾದರೂ ತಿಂದರೂ ಎರೆಹುಳುಗಳಿಗೆ ಇಷ್ಟವಾಗುವುದು ಕ್ಯಾರೆಟ್, ಕ್ಯಾಬೇಜ್ ನಂತಹ ತರಕಾರಿಗಳು. ಇವುಗಳು ಮಣ್ಣಿನಲ್ಲಿ ಕಂಡು ಬಂದರೆ ಎರೆಹುಳುಗಳುಗಳಿಗೆ ಭೂರಿ ಭೋಜನ. ಕೆಲವೊಂದು ಸೊಪ್ಪುಗಳನ್ನು ಅವುಗಳು ಇಷ್ಟ ಪಡುವುದಿಲ್ಲ ಎಂಬ ಸಂಗತಿಯನ್ನೂ ಡಾರ್ವಿನ್ ಕಂಡುಕೊಂಡರು. ಅವರಿಗೆ ಬಹಳ ಅಚ್ಚರಿಯೆನಿಸಿದ ಸಂಗತಿ ಎಂದರೆ ಎರೆಹುಳುಗಳುಗಳಿಗೆ ಕಣ್ಣಿಲ್ಲದೇ ಇದ್ದರೂ ಅವುಗಳು ಯಾವುದೇ ವಸ್ತುಗಳನ್ನು ತಿನ್ನಲು ಪ್ರಾರಂಭಿಸುವಾಗ, ಉದಾಹರಣೆಗೆ ಎಲೆಯನ್ನು ತೆರೆದುಕೊಂಡರೆ, ಅದರ ಚೂಪಾದ ತುದಿಯಿಂದಲೇ ಹೆಚ್ಚಾಗಿ ತಿನ್ನಲು ಪ್ರಾರಂಭಿಸುತ್ತದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಡಾರ್ವಿನ್ ಎರೆಹುಳುಗಳಿಗೆ ತ್ರಿಕೋನಾಕೃತಿಯ ಕಾಗದದ ಚೂರುಗಳನ್ನು ತಿನ್ನಲು ಕೊಟ್ಟಾಗ ಅವುಗಳು ಆ ಚೂರುಗಳ ತುದಿಯಿಂದಲೇ ಮೊದಲು ತಿನ್ನಲು ಪ್ರಾರಂಭ ಮಾಡಿದವು.
ಬಹಳಷ್ಟು ಸಂಶೋಧನೆಗಳನ್ನು ಮಾಡಿದ ಬಳಿಕ ಚಾರ್ಲ್ಸ್ ಡಾರ್ವಿನ್ ಎರೆಹುಳುಗಳ ಬಗ್ಗೆ ಹೇಳಿದ ಮಾತುಗಳೇನು ಗೊತ್ತೇ? ಜಗತ್ತಿನಲ್ಲಿ ಅದೆಷ್ಟೋ ಮಾನವನಿರ್ಮಿತ ಕಟ್ಟಡಗಳು ನಿರ್ಮಾಣವಾಗಿವೆ, ಕಾಲಾಂತರದಲ್ಲಿ ಅವು ನಿರ್ನಾಮವೂ ಆಗಿದೆ. ಮಣ್ಣಿನಲ್ಲಿ ಮಣ್ಣಾದ ಈ ಕಟ್ಟಡಗಳನ್ನು ಎರೆಹುಳುಗಳು ನೋಡಿವೆ. ನಾವು ಬುದ್ಧಿವಂತರೆಂದು ಹೇಳಿಕೊಳ್ಳುವ ಮನುಷ್ಯರು ಊಹಿಸಲೂ ಸಾಧ್ಯವಿಲ್ಲದಷ್ಟು ಕೆಲಸಗಳನ್ನು ಎರೆಹುಳುಗಳು ಮಾಡಿವೆ. ನಮ್ಮ ಭೂಮಿಯ ಮಣ್ಣು ಸಾರಯುಕ್ತವಾಗಲು ಅವುಗಳು ಖಂಡಿತವಾಗಿಯೂ ಎರೆಹುಳುಗಳ ಹೊಟ್ಟೆಯನ್ನು ಹೊಕ್ಕು ಹೊರಬಂದಿವೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೆಯೂ ಈ ಕೆಲಸವನ್ನು ಎರೆಹುಳುಗಳು ಮಾಡಿವೆ, ಈಗಲೂ ಮಾಡುತ್ತಿವೆ, ಮುಂದೆಯೂ (ಮಾನವನು ಬದುಕಲು ಬಿಟ್ಟರೆ) ಎರೆಹುಳುಗಳು ಮಾಡಲಿವೆ. ಮಾನವನ ದುಷ್ಟ ಬುದ್ದಿಗೆ ಸಿಲುಕಿ, ರಾಸಾಯನಿಕಗಳ ಪ್ರಭಾವದಿಂದ ಒಂದು ದಿನ ಎರೆಹುಳುಗಳು ನಿರ್ನಾಮವಾದರೆ ಆ ದಿನದಿಂದ ನಮ್ಮ ಪಾಲಿನ ದುರ್ದಿನಗಳು ಪ್ರಾರಂಭವಾದುವು ಎಂದು ನಿಸ್ಸಂಕೋಚವಾಗಿ ಹೇಳಬಹುದು ಎಂದು ಡಾರ್ವಿನ್ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ.
ನೀವೇ ಗಮನಿಸಿ. ಮೊದಲಾದರೆ ಗದ್ದೆಯ ಬದಿಗಳಲ್ಲಿರುವ ಸಡಿಲವಾದ ಮಣ್ಣುಗಳಲ್ಲಿ ಎರೆಹುಳುಗಳು ಸಾಕಷ್ಟು ಸಿಗುತ್ತಿದ್ದವು. ಮೀನು ಹಿಡಿಯಲು ಬಳಸುವ ಗಾಳಕ್ಕೆ ಈ ಎರೆಹುಳುಗಳೇ ಆಹಾರವಾಗುತ್ತಿದ್ದವು. ಆದರೆ ಇಂದು ನೆಲವನ್ನು ಎಷ್ಟು ಆಳಕ್ಕೆ ಅಗೆದರೂ ಎರೆಹುಳುಗಳು ಕಾಣ ಸಿಗುವುದಿಲ್ಲ. ನಾವು ಭೂಮಿಗೆ ಅಷ್ಟೊಂದು ರಾಸಾಯನಿಕಗಳನ್ನು ಸುರಿದಿದ್ದೇವೆ. ಈ ಕಾರಣದಿಂದ ಎರೆಹುಳುಗಳು ಒಂದೋ ನಾಶವಾಗುತ್ತಿವೆ ಅಥವಾ ಭೂಮಿಯ ಇನ್ನಷ್ಟು ಆಳಕ್ಕೆ ಇಳಿಯುತ್ತಿವೆ. ಈ ಕಾರಣದಿಂದ ಈಗಿನ ಮಕ್ಕಳಿಗೆ ಎರೆಹುಳುಗಳು ಒಂದು ಅಪರೂಪದ ಜೀವಿಯಾಗಿ ಉಳಿದು ಬಿಟ್ಟಿವೆ.
ಎರೆಹುಳುಗಳ ಬಗೆ ಇನ್ನೂ ಸಂಪೂರ್ಣ ಸಂಶೋಧನೆಗಳು ಮುಗಿದಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಜಗತ್ತಿನ ಎಲ್ಲಾ ಬಗೆಯ ವಿವಿಧ ಎರೆಹುಳುಗಳ ವರ್ಗೀಕರಣ ಇನ್ನೂ ಮುಗಿದಿಲ್ಲವಂತೆ. ನಿಮಗೊಂದು ವಿಶೇಷ ಸಂಗತಿ ಗೊತ್ತೇ? ಎರೆಹುಳುಗಳನ್ನು ನೀವು ಎಲ್ಲಿಂದ ಬೇಕಾದರೂ ಕತ್ತರಿಸಿದರೂ ತಲೆ ಇರುವ ಭಾಗ ಬದುಕುಳಿದು, ಮತ್ತೆ ಬೆಳೆದು ಮೊದಲಿನಂತೆ ಪೂರ್ಣ ಎರೆಹುಳುವಾಗುತ್ತದೆ. ತುಂಡಾದ ಬಾಲದ ಭಾಗ ಮಾತ್ರ ಸತ್ತುಹೋಗುತ್ತದೆ. ಇದರಿಂದ ಒಂದು ರೀತಿಯಲ್ಲಿ ಇದು ಚಿರಂಜೀವಿಯೇ. ಎರೆಹುಳುಗಳು ಕೇವಲ ರೈತ ಮಿತ್ರ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಮಿತ್ರನೇ. ಆದುದರಿಂದ ಭೂಮಿಯ ಸಾರವನ್ನು ಉಳಿಸಿ, ರಾಸಾಯನಿಕಗಳ ಬಳಕೆಯನ್ನು ತಗ್ಗಿಸಿ, ಎರೆಹುಳುಗಳನ್ನು ಉಳಿಸಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ