ಎಲಾನ್ ಮಸ್ಕ್ ನ ‘ಮಸ್ತ್’ ಮಾತುಗಳು !

ಎಲಾನ್ ಮಸ್ಕ್ ನ ‘ಮಸ್ತ್’ ಮಾತುಗಳು !

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ‘ಟೆಸ್ಲಾ' ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಎಲಾನ್ ಮಸ್ಕ್ ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇರುತ್ತದೆ. ಎಲಾನ್ ರೀವ್ ಮಸ್ಕ್ (Elon Reeve Musk) ಓರ್ವ ಪ್ರತಿಭಾವಂತ ಇಂಜಿನಿಯರ್, ಕೈಗಾರಿಕೋದ್ಯಮಿ ಹಾಗೂ ವಿನ್ಯಾಸಕಾರ. ಇವರು ಖಾಸಗಿ ಬಾಹ್ಯಾಕಾಶ ನೌಕೆ ‘ಸ್ಪೇಸ್ ಎಕ್ಸ್' ನ ಸ್ಥಾಪಕರು ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿದ್ದಾರೆ. ಇವರ ಖಾಸಗಿ ವಿವರಗಳು ನಿಮಗೆಲ್ಲಾ ತಿಳಿದೇ ಇರುತ್ತವೆ. ಆದುದರಿಂದ ನಾನು ಅವರು ಒಂದು ಸಮ್ಮೇಳನದಲ್ಲಿ ಆಡಿದ ಚೇತನದಾಯಕ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಕೆಲವು ವರ್ಷಗಳ ಹಿಂದೆ ಅಮೇರಿಕದಲ್ಲಿ ಹಣಕಾಸು ಹೂಡಿಕೆದಾರರ ಸಮ್ಮೇಳನ ನಡೆದಿತ್ತು. ಅದರಲ್ಲಿ ಎಲಾನ್ ಮಸ್ಕ್ ಪ್ರಮುಖ ಭಾಷಣಕಾರರಾಗಿದ್ದರು. ಮಸ್ಕ್ ಅವರ ಭಾಷಣವೆಲ್ಲಾ ಮುಗಿದ ಬಳಿಕ ಸಭಿಕರಿಂದ ಪ್ರಶ್ನೆಗಳ ಸುರಿಮಳೆಯಾಯಿತು. ಅಂದು ಓರ್ವ ವ್ಯಕ್ತಿ ಕೇಳಿದ ಪ್ರಶ್ನೆ ಬಹಳ ಸೊಗಸಾಗಿತ್ತು. ‘ಪ್ರಪಂಚದ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ತನ್ನ ಮಗಳ ಮದುವೆಯನ್ನು ಅತ್ಯಂತ ಬಡ ವ್ಯಕ್ತಿ ಜೊತೆಗೆ ಮಾಡಲು ತಯಾರಿದ್ದಾರೆಯೇ? ಎನ್ನುವುದೇ ಆ ಪ್ರಶ್ನೆ. ಈ ಪ್ರಶ್ನೆಗೆ ಸಭೆಯಲ್ಲಿ ಜೋರಾದ ನಗೆ ಉಕ್ಕಿತ್ತು.

ಈ ಪ್ರಶ್ನೆಗೆ ಎಲಾನ್ ಮಸ್ಕ್ ನೀಡಿದ ಉತ್ತರವು ಎಲ್ಲರ ಮನಸ್ಥಿತಿಯನ್ನು ಬದಲಿಸುವಂತಿತ್ತು. ಈ ಪ್ರಶ್ನೆಯ ಉತ್ತರವನ್ನು ಎಲಾನ್ ಮಸ್ಕ್ ಮಾತಿನಿಂದಲೇ ಕೇಳಿ “ನನ್ನ ಮಗಳ ಮದುವೆಯನ್ನು ನಾನು ಬಡ ವ್ಯಕ್ತಿಯ ಜೊತೆ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ನೀವು ಮೊದಲು ತಿಳಿದುಕೊಳ್ಳಬೇಕಾದ ಸಂಗತಿ ಎಂದರೆ ಬ್ಯಾಂಕ್ ಖಾತೆಯಲ್ಲಿ ಅಪಾರ ಹಣ, ಸಾಕಷ್ಟು ಆಸ್ತಿ ಇರುವವನು ಶ್ರೀಮಂತನಲ್ಲ. ಆ ಶ್ರೀಮಂತಿಕೆಯನ್ನು ಉಳಿಸುವವನು ನಿಜವಾದ ಶ್ರೀಮಂತ. ಬಡತನವೆಂದರೆ ಹಣದ ಬಡತನವಲ್ಲ. ಈ ಕುರಿತು ನಾನೊಂದು ನಿಮಗೆ ಉದಾಹರಣೆ ಕೊಡುತ್ತೇನೆ. 

‘ಓರ್ವ ಬಡ ವ್ಯಕ್ತಿ ಲಾಟರಿಯಲ್ಲಿ ನೂರು ಮಿಲಿಯನ್ ಹಣವನ್ನು ಗಳಿಸುತ್ತಾನೆ ಎಂದು ಕೊಂಡರೆ ಅವನು ಶ್ರೀಮಂತ ವ್ಯಕ್ತಿಯಾಗಿರುವುದಿಲ್ಲ. ಅವನು ನಿಜವಾಗಿ ಸ್ವಲ್ಪ ಹಣವಿರುವ ಬಡ ವ್ಯಕ್ತಿಯಾಗಿರುತ್ತಾನೆ. ಏಕೆಂದರೆ ಮುಂದಿನ ಐದಾರು ವರ್ಷಗಳಲ್ಲಿ ಅವನು ಮತ್ತೆ ತನ್ನ ಮೊದಲಿನ ಬಡತನದ ದಯನೀಯ ಸ್ಥಿತಿಗೆ ಬಂದಿರುತ್ತಾನೆ. ಲಾಟರಿ ಅಥವಾ ಜೂಜಿನಲ್ಲಿ ಹಣವನ್ನು ಗಳಿಸಿ ದಿನಬೆಳಗಾಗುವುದರಲ್ಲಿ ಶ್ರೀಮಂತರಾದ ೯೦% ವ್ಯಕ್ತಿಗಳ ಸ್ಥಿತಿ ಕೆಲವು ವರ್ಷಗಳ ನಂತರ ದಯನೀಯವಾಗಿರುತ್ತದೆ. ಏಕೆಂದರೆ ಅವರಿಗೆ ದೊರೆತ ಹಣವನ್ನು ಉಳಿಸಿ, ಬೆಳೆಸುವ ಯೋಜನೆ - ಯೋಚನೆ ಅವರಲ್ಲಿ ಇರುವುದಿಲ್ಲ.’

ನನ್ನ ಪ್ರಕಾರ ಅತ್ಯಂತ ಶ್ರೀಮಂತ ವ್ಯಕ್ತಿಯ ಕೈ ಬರಿದಾಗಿರುತ್ತದೆ. ಉದಾಹರಣೆಗೆ ಉದಯೋನ್ಮುಖ ಉದ್ಯಮಿಗಳು. ಏಕೆಂದರೆ ಅವರ ಕೈಯಲ್ಲಿ ಹಣವಿಲ್ಲದೇ ಹೋದರೂ, ತಮ್ಮ ಸಂಸ್ಥೆಯನ್ನು ಬೆಳೆಸಿ - ಉಳಿಸುವ ದಾರಿ ಅವರಿಗೆ ತಿಳಿದಿರುತ್ತದೆ. ಅವರು ತಮ್ಮ ಬಳಿ ಇರುವ ಸೀಮಿತ ಸೌಲಭ್ಯವನ್ನು ಬಳಸಿಕೊಂಡು ಹಣ ಗಳಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ.   

ಹಾಗಾದರೆ ಶ್ರೀಮಂತ ಹಾಗೂ ಬಡ ವ್ಯಕ್ತಿಗಳ ನಡುವಿನ ವ್ಯತ್ಯಾಸವೇನು? ಎಂಬ ಸಂಶಯ ನಿಮಗೆ ಬಂದಿರಬಹುದು. ಒಬ್ಬ ಯುವಕ ತಾನು ಕಲಿತದನ್ನು ಬೇರೆಯವರಿಗೆ ತಿಳಿಸುವ, ತನಗೆ ತಿಳಿಯದ್ದನ್ನು ಬೇರೆಯವರಿಂದ ಕಲಿಯುವ ಮತ್ತು ಬೇರೆಯವರ ಉತ್ತಮ ಜೀವನಕ್ಕಾಗಿ ಶ್ರಮಿಸುವ ವ್ಯಕ್ತಿಯೇ ಶ್ರೀಮಂತ ವ್ಯಕ್ತಿ. ಅದೇ ರೀತಿ ಒಬ್ಬ ಯುವಕ ಜಗತ್ತಿನ ಶ್ರೀಮಂತರೆಲ್ಲಾ ಕಳ್ಳರು, ಎಲ್ಲರಿಗಿಂತ ತನಗೇ ಜಾಸ್ತಿ ತಿಳಿದಿದೆ. ಸ್ವಾರ್ಥಿಯಾಗಿ ಬದುಕುವುದರಲ್ಲೇ ತನ್ನ ಶ್ರೀಮಂತಿಕೆ ಇದೆ ಎಂದು ತಿಳಿಯುವವನು ಅತ್ಯಂತ ಬಡ ವ್ಯಕ್ತಿ.

ಬೌದ್ಧಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ ತನಗೆ ಸಿಕ್ಕ ಉಪಯುಕ್ತ ಮಾಹಿತಿಯನ್ನು ಬೇರೆಯವರಿಗೆ ಹಂಚುತ್ತಾನೆ. ಆದರೆ ಹಣ ಇಲ್ಲದೇ ಬಡವನಾದವ ತನಗೆ ಯಾರಾದರೂ ಹಣ ನೀಡಿದರೆ ತಾನು ಏನಾದರೂ ಸಾಧಿಸ ಬಲ್ಲೆ ಎಂದು ಯೋಚನೆ ಮಾಡುತ್ತಾನೆ. ಆದರೆ ಅವನು ಬೌದ್ಧಿಕವಾಗಿ ದಿವಾಳಿಯಾಗಿರುತ್ತಾನೆ. ಅವನಿಗೆ ಯಾರು ಎಷ್ಟು ಹಣ ನೀಡಿದರೂ ಅವನು ಕೆಲವೇ ದಿನಗಳಲ್ಲಿ ಅದನ್ನು ಕಳೆದುಕೊಂಡು ಬಿಡುತ್ತಾನೆ. 

ನಾನು ಈಗ ನೀವು ಕೇಳಿದ ಪ್ರಶ್ನೆಗೆ ಬರುತ್ತೇನೆ. ನಾನು ಬಡ ವ್ಯಕ್ತಿಗೆ ನನ್ನ ಮಗಳನ್ನು ವಿವಾಹ ಮಾಡಿಕೊಡುವುದಿಲ್ಲ ಎಂದಿದ್ದೆ. ಪ್ರತೀ ಕ್ಷಣ ಹಣದ ಬಗ್ಗೆ ಯೋಚಿಸುವವ ನನ್ನ ಅಭಿಪ್ರಾಯದಲ್ಲಿ ಬಡವ. ಯಾರು ತನ್ನ ಸ್ವಂತ ಸಾಮರ್ಥ್ಯವನ್ನು ಬಳಸಿ ಸಿರಿವಂತಿಕೆಯನ್ನು ಗಳಿಸಿಕೊಳ್ಳುತ್ತಾನೆ ಮತ್ತು ಉಳಿಸಿಕೊಳ್ಳುತ್ತಾನೆ ಅವನೇ ಶ್ರೀಮಂತ. ನನ್ನ ಮಗಳಿಗೆ ವಿವೇಚನೆಯಿಲ್ಲದ, ಪರರ ಬಗ್ಗೆ ಕಾಳಜಿ ಇಲ್ಲದ ಬಡ ವ್ಯಕ್ತಿ ಗಂಡನಾಗುವುದು ಖಂಡಿತಾ ನನಗೆ ಇಷ್ಟವಿಲ್ಲ. 

ನಾನು ಹೀಗೆ ಹೇಳುತ್ತಿರುವೆ ಎಂದು ಸಭಿಕರು ಬೇಸರ ಮಾಡಬಾರದು. ಕಳ್ಳತನ ಮುಂತಾದ ಕ್ರಿಮಿನಲ್ ಕೃತ್ಯವನ್ನು ಮಾಡುವ ಅಧಿಕಾಂಶ ಮಂದಿ ಬಡವರೇ ಆಗಿರುತ್ತಾರೆ. ಅವರು ಸದಾ ಹಣದ ಹಿಂದೆಯೇ ಓಡುತ್ತಿರುತ್ತಾರೆ. ಹಣ ಗಳಿಸಲು ಇರುವ ಸುಲಭ ಅಡ್ಡದಾರಿಗಳನ್ನು ಹುಡುಕುತ್ತಾರೆ. ಅದಕ್ಕಾಗಿ ಅವರು ದರೋಡೆ, ಪಿಕ್ ಪಾಕೆಟ್, ಕಳ್ಳತನ ಮಾಡುತ್ತಾ ಇರುತ್ತಾರೆ. ಅವರು ಶ್ರೀಮಂತರಾಗಲು ತಮ್ಮ ಸ್ವಂತ ಯೋಚನೆಯನ್ನು ಬಳಸಿಕೊಳ್ಳುವುದೇ ಇಲ್ಲ. ಅಡ್ಡದಾರಿಯಲ್ಲಿ ಗಳಿಸಿದ ಶ್ರೀಮಂತಿಕೆ ಅಧಿಕ ಸಮಯ ಉಳಿಯಲಾರರು. ಈ ವ್ಯಕ್ತಿಗಳು ನನ್ನ ಅಭಿಪ್ರಾಯದಲ್ಲಿ ಅತ್ಯಂತ ಬಡ ವ್ಯಕ್ತಿಗಳು. 

ನಾನು ಕೊನೆಯಲ್ಲಿ ಒಂದು ಉದಾಹರಣೆಯನ್ನು ನೀಡುವ ಮೂಲಕ ಶ್ರೀಮಂತ-ಬಡವ ಚರ್ಚೆಗೆ ಅಂತ್ಯ ಹಾಡುತ್ತೇನೆ. ಒಂದು ಬ್ಯಾಂಕನ್ನು ಓರ್ವ ಸೆಕ್ಯುರಿಟಿ ಗಾರ್ಡ್ ಕಾವಲು ಕಾಯುತ್ತಿದ್ದ. ಒಂದು ದಿನ ಅವನಿಗೆ ಓರ್ವ ಗ್ರಾಹಕ ತಿಳಿಯದೇ ಕೆಳಕ್ಕೆ ಬೀಳಿಸಿದ ಯಥೇಚ್ಚ ಹಣ ಇರುವ ಚೀಲ ದೊರೆಯುತ್ತದೆ. ಅವನು ಅದನ್ನು ತನಗಾಗಿ ಇರಿಸಿಕೊಳ್ಳದೇ, ಬ್ಯಾಂಕಿನ ವ್ಯವಸ್ಥಾಪಕರ ವಶಕ್ಕೆ ಒಪ್ಪಿಸುತ್ತಾನೆ. ಅವನ ಸುತ್ತಮುತ್ತಲಿನವರು, ಗೆಳೆಯರು ಅವನನ್ನು ಮೂರ್ಖ, ಬದುಕಲು ತಿಳಿಯದವ ಎಂದೆಲ್ಲಾ ಮೂದಿಸಿದರು. ಆದರೆ ಅವನು ಪ್ರಾಮಾಣಿಕತೆಯ ಮೇಲೆ ನಂಬಿಕೆ ಇಟ್ಟಿದ್ದ. ಕಾಲ ಕಳೆದಂತೆ ಬ್ಯಾಂಕ್ ಆಡಳಿತ ಮಂಡಳಿ ಅವನಿಗೆ ಭಡ್ತಿ ನೀಡಿ ಸೆಕ್ಯೂರಿಟಿ ಮ್ಯಾನೇಜರ್ ಮಾಡಿತು. ಆತ ಬ್ಯಾಂಕಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಪಾಸ್ ಮಾಡಿ ಕ್ರಮೇಣ ಬ್ಯಾಂಕಿನ ಗ್ರಾಹಕ ಸಂಬಂಧೀ ವಿಭಾಗದಲ್ಲಿ ಗುಮಾಸ್ತನಾದ. ಹತ್ತು ವರ್ಷಗಳ ನಂತರ ಅವನು ಅದೇ ಬ್ಯಾಂಕಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಅವನೀಗ ಅಂದು ಸೆಕ್ಯೂರಿಟಿ ಗಾರ್ಡ್ ಆಗಿರುವ ಸಮಯದಲ್ಲಿ ಸಿಕ್ಕಿದ ಚೀಲದಲ್ಲಿದ್ದ ಹಣಕ್ಕಿಂತ ಅಧಿಕ ಹಣವನ್ನು ನ್ಯಾಯಯುತವಾಗಿ ದುಡಿದು, ಸಂಬಳದ ರೂಪದಲ್ಲಿ ಗಳಿಸುತ್ತಿದ್ದಾನೆ. ಇದು ಅವನ ಪ್ರಾಮಾಣಿಕತೆಗೆ ಸಂದ ಗೌರವ ಮತ್ತು ಬೌದ್ಧಿಕ ಶ್ರೀಮಂತಿಕೆಗೆ ಉತ್ತಮ ಉದಾಹರಣೆ.” ಇಷ್ಟು ಹೇಳಿ ಎಲಾನ್ ಮಸ್ಕ್ ತಮ್ಮ ಮಾತುಗಳನ್ನು ಮುಗಿಸುತ್ತಾರೆ. ಈಗ ನೀವು ಹೇಳಿ ನೀವು ಬಡವರೋ, ಶ್ರೀಮಂತರೋ?!

ಚಿತ್ರ ಕೃಪೆ: ಅಂತರ್ಜಾಲ ತಾಣ

 

Comments

Submitted by shreekant.mishrikoti Tue, 11/16/2021 - 03:09

"ತಾನು ಕಲಿತದನ್ನು ಬೇರೆಯವರಿಗೆ ತಿಳಿಸುವ, ತನಗೆ ತಿಳಿಯದ್ದನ್ನು ಬೇರೆಯವರಿಂದ ಕಲಿಯುವ ಮತ್ತು ಬೇರೆಯವರ ಉತ್ತಮ ಜೀವನಕ್ಕಾಗಿ ಶ್ರಮಿಸುವ ವ್ಯಕ್ತಿ " ನಾವಾಗಬೇಕು. ತುಂಬ ಒಳ್ಳೆಯ ಮಾತು. ತಮಗೆ ವಂದನೆಗಳು.

 

ಎಲಾನ್  ಮಸ್ಕ್ ಬಗ್ಗೆ ತಿಳಿಸಿದ್ದಕ್ಕೂ ಧನ್ಯವಾದಗಳು.

Submitted by ಸಂತೋಷ್ ನಾಗರತ್ನಮ್ಮಾರ Tue, 11/16/2021 - 23:58

ತಾನು ಕಲಿತದನ್ನು ಬೇರೆಯವರಿಗೆ ತಿಳಿಸುವ, ತನಗೆ ತಿಳಿಯದ್ದನ್ನು ಬೇರೆಯವರಿಂದ ಕಲಿಯುವ ಮತ್ತು ಬೇರೆಯವರ ಉತ್ತಮ ಜೀವನಕ್ಕಾಗಿ ಶ್ರಮಿಸುವ ವ್ಯಕ್ತಿಯೇ ಶ್ರೀಮಂತ ವ್ಯಕ್ತಿ.

ಪ್ರೇರಣಾತ್ಮಕ ನುಡಿಗಳು ಬೌದ್ಧಿಕ ಶ್ರೀಮಂತಿಕೆ ಮಾತಿನಲ್ಲಿದೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು 🙏🙏🙏🙏🙏🙏

Submitted by ಬರಹಗಾರರ ಬಳಗ Wed, 11/17/2021 - 10:28

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ನನ್ನ 'ಎಲಾನ್ ಮಸ್ಕ್' ಬಗೆಗಿನ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ನಿಮಗಿದೋ ಧನ್ಯವಾದಗಳು. ಮುಂದೆಯೂ ನಿಮ್ಮ ಸಲಹೆ ಸಹಕಾರ ಇರಲಿ.

-ಅಶ್ವಿನ್

Submitted by venkatesh Fri, 12/31/2021 - 07:12

ಬೇರೆಯವರಿಂದ ಕಲಿಯುವುದಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ನಮ್ಮ ಪರಿಸರದಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ, ಪಶು ಪಕ್ಷಿಗಳಲ್ಲಿ ಒಳ್ಳೆಯದನ್ನು ಕಾಣುವ ದಿವ್ಯ ಕಣ್ಣುಗಳನ್ನು ಹೊಂದಬೇಕು. ಅಂದರೆ ನಮ್ಮ ಕಣ್ಣುಗಳನ್ನು ತೆರೆದು ನೋಡಬೇಕು. ಒಳ್ಳೆಯದೇನಾದರೂ ಇದ್ದಾರೆ ಬೇರೆಯವರು ನಮ್ಮಲ್ಲಿಕಾಣಲಿ  ಬಿಡಿ. 

-ಎಚ್. ಆರ್. ಎಲ್. 

Submitted by venkatesh Fri, 12/31/2021 - 07:18

ನಮ್ಮ ಎಲ್ಲಾ ಸಂಪಾದಿಯರಿಗೂ  '೨೦೨೨-ಹೊಸವರ್ಷದ ಶುಭಾಶಯಗಳು'. ಮೇಲೆ ಹೇಳಿದಂತೆ, ಒಳ್ಳೆಯದನ್ನು ಎಲ್ಲಾ ಮಾಧ್ಯಮಗಳಲ್ಲಿಯೂ ನೋಡುವ, ತಿಳಿಯುವ, ಆಸ್ವಾದಿಸುವ, ಮತ್ತು ಅದನ್ನು ಪಸರಿಸುವ ಕಾರ್ಯ ನಮ್ಮಿಂದಲೂ ನಡೆಯಲಿ,  ಎಂದು ಭಗವಂತನನ್ನು ಬೇಡಿಕೊಳ್ಳುತ್ತೇನೆ.