ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಿಗೆ ಹಬ್ಬವೋ ಹಬ್ಬ....!
ಇಬ್ಬರು ಕಾರ್ಯಾಂಗದ ಪ್ರಭಾವಿ ಮತ್ತು ಉನ್ನತ ಅಧಿಕಾರಿಗಳು, ಮಾಧ್ಯಮಗಳಿಂದಲೇ ಲೇಡಿ ಸಿಂಗಂ ಎಂದು ಪ್ರಶಂಸೆಗೆ ಒಳಗಾದವರು, ಬೀದಿ ಜಗಳಗಳ ಹೊಸ ವೇದಿಕೆಯಾದ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಮೇಲೊಬ್ಬರು ಕೆಸರಾಟ ನಡೆಸಿರುವಾಗ ಸುದ್ದಿಯ ಸಂಭ್ರಮ ಹಬ್ಬವಾಗುವುದು ಇತ್ತೀಚಿನ ದಿನಗಳಲ್ಲಿ ಸಹಜವೇ ಅಲ್ಲವೇ? ಮಾಧ್ಯಮಗಳ ಜವಾಬ್ದಾರಿ ಸುದ್ದಿಗಳ ವಿಜೃಂಭಣೆಗೆ ಮಾತ್ರ ಸೀಮಿತವಾಗದೆ ಮತ್ತಷ್ಟು ಮೇಲ್ದರ್ಜೆಗೆ ಏರಬೇಕಾಗಿತ್ತು ಎಂಬ ನಿರೀಕ್ಷೆ ಜನಸಾಮಾನ್ಯರದ್ದು.
ಯಾವ ರೀತಿಯಲ್ಲಿ ಎಂದು ಕೇಳುವವರಿಗಾಗಿ.... ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾದ ಶ್ರೀಮತಿ ರೋಹಿಣಿ ಸಿಂಧೂರಿ ಮತ್ತು ಶ್ರೀಮತಿ ಡಿ. ರೂಪ ಮೌದ್ಗಿಲ್ ಅವರು ನಮ್ಮ ನಿಮ್ಮಂತೆ ಸ್ವತಂತ್ರ ಸಾಮಾನ್ಯ ನಾಗರಿಕರಲ್ಲ. ಸಾರ್ವಜನಿಕ ಹಣದಿಂದ ಸಂಬಳ ಪಡೆದು ಸರ್ಕಾರದ ಸೇವೆ ಸಲ್ಲಿಸುತ್ತಾ ಅದರ ನಿಯಮದಡಿ ಬದುಕು ಕಟ್ಟಿಕೊಂಡವರು. ಸರ್ಕಾರಿ ಅಧಿಕಾರಿಗಳ ಮೂಲಭೂತ ಕರ್ತವ್ಯಗಳಲ್ಲಿ ಶಿಸ್ತು ಸಹ ಬಹುಮುಖ್ಯವಾದುದು. ವಿಷಯ ಎಷ್ಟೇ ದೊಡ್ಡದಾಗಿರಲಿ ಬೀದಿ ಜಗಳಗಳಿಗೆ ಅವಕಾಶವೇ ಇಲ್ಲ. ಪ್ರೋಟೋಕಾಲ್ ಪ್ರಕಾರ ಅವರಿಗಿಂತ ಉನ್ನತ ಅಧಿಕಾರಿಗಳಿಗೆ ಅಥವಾ ಇಲಾಖೆಯ ಮಂತ್ರಿಗಳಿಗೆ ದೂರು ನೀಡಬಹುದು ಅಥವಾ ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು.
ಮಾಧ್ಯಮಗಳ ಮುಂದೆ ಇನ್ನೊಬ್ಬ ಅಧಿಕಾರಿಯ ಆಡಳಿತದ ಅಥವಾ ವೈಯಕ್ತಿಕ ನಿಂದನೆ ಅಶಿಸ್ತು ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಅದು ಅವರ ಹಕ್ಕು ಮತ್ತು ಸ್ವಾತಂತ್ರ್ಯ ಎಂದಾದರೆ ಅನೇಕ ಸರ್ಕಾರಿ ಅಧಿಕಾರಿಗಳು ಬೀದಿ ಬೀದಿಗಳಲ್ಲಿ ಬಹಿರಂಗವಾಗಿ ವಿವಿಧ ಕಾರಣಗಳಿಗಾಗಿ ಹೊಡೆದಾಡುವುದು ಸಾಮಾನ್ಯವಾಗುತ್ತದೆ. ಎಷ್ಟೋ ಅಧಿಕಾರಿಗಳು ವರ್ಗಾವಣೆಯ ನಂತರ ಸಹ ತಮ್ಮ ಖುರ್ಚಿ ಬಿಟ್ಟಕೊಡದೆ ಸತಾಯಿಸುವುದನ್ನು ನೋಡಿದ್ದೇವೆ. ಆದ್ದರಿಂದಲೇ ಸರ್ಕಾರಿ ಅಧಿಕಾರಿಗಳ ಪ್ರೋಟೋಕಾಲ್ ಮತ್ತು ಸೇವಾ ದಾಖಲಾತಿ ಪುಸ್ತಕ ಇರುತ್ತದೆ. ಅದರಲ್ಲಿ ಅವರ ಸಂಪೂರ್ಣ ನಡವಳಿಕೆ ದಾಖಲಾಗಿರುತ್ತದೆ.
ಈಗ ನಡೆದಿರುವ ಇಬ್ಬರು ಅಧಿಕಾರಿಗಳ ಜಗಳಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೇಲ್ನೋಟಕ್ಕೆ ಅಶಿಸ್ತು ಎಂದು ಪ್ರಥಮ ಮಾಹಿತಿಯ ಆಧಾರದ ಮೇಲೆ ಪರಿಗಣಿಸಿ ಇಬ್ಬರನ್ನೂ ತಾತ್ಕಾಲಿಕ ಅಮಾನತು ಮಾಡಬೇಕು ಅಥವಾ ಅದಕ್ಕೆ ಸಂಬಂಧಪಟ್ಟವರಿಗೆ ತಕ್ಷಣ ಕ್ರಮಕ್ಕೆ ಶಿಫಾರಸು ಮಾಡಬೇಕು. ಹಾಲಿ ನ್ಯಾಯಾಧೀಶರು ಅಥವಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ತನಿಖೆ ನಡೆಸಿ ಒಂದೇ ತಿಂಗಳಲ್ಲಿ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಕ್ರಮ ಸರ್ಕಾರಿ ಅಧಿಕಾರಿಗಳನ್ನು ಹೆದರಿಸುವ ಅಥವಾ ಭ್ರಷ್ಟಾಚಾರ ಮುಚ್ಚಿಹಾಕುವ ಅಥವಾ ಅವರ ಅಭಿಪ್ರಾಯ ಸ್ವಾತಂತ್ರ್ಯ ಹರಣ ಮಾಡುವ ಕ್ರಮವಾಗದೆ ಅಶಿಸ್ತಿನ ಅಥವಾ ವೈಯಕ್ತಿಕ ತೆವಲಿನ ಮೇಲೆ ನಿಯಂತ್ರಣ ಸಾಧಿಸಿ ಸರ್ಕಾರಿ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸಂಯಮ - ಸಭ್ಯತೆ ಪಾಲಿಸಲು ಇತರರಿಗೆ ಮಾದರಿ ಆಗುವಂತೆ ಇರಬೇಕು.
ಮಾಧ್ಯಮಗಳು ಒತ್ತು ಕೊಡಬೇಕಾಗಿರುವುದು ಪ್ರಜಾಪ್ರಭುತ್ವದ ಈ ಅಂಶಗಳಿಗೇ ಹೊರತು ಯಾರದೋ ಖಾಸಗಿ ಪೋಟೋಗಳು, ಊಹಾತ್ಮಕ ಪ್ರೀತಿ ಪ್ರೇಮದ ಗುಸುಗುಸು ಮಾತುಗಳು, ಬಾಯಿ ಚಪಲದ ಮಾತುಗಳಿಗೆ ಅಲ್ಲ. ವ್ಯವಸ್ಥೆಯ ಸುಧಾರಣೆಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಬೇಕೆ ಹೊರತು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುದ್ದಿಗಳ ಆಕರ್ಷಕ ವಿವರಗಳನ್ನು ಮಾತ್ರ ನೋಡಿ ಅದಕ್ಕೆ ಪ್ರಚಾರ ನೀಡಬಾರದು. ಸುದ್ದಿಗಳ ಒಳಗಿನ ಸೂಕ್ಷ್ಮತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯೇ ಮಾಧ್ಯಮಗಳ ಮೊದಲ ಮತ್ತು ಕೊನೆಯ ಜವಾಬ್ದಾರಿ. ಸುದ್ದಿ ಮಾಧ್ಯಮಗಳು ಜನರನ್ನು ಮನರಂಜಿಸಲು ಪ್ರಯತ್ನಿಸುವುದು ವ್ಯಭಿಚಾರಕ್ಕೆ ಸಮ ಎಂದು ಭಾವಿಸಬಹುದು.
ಒಬ್ಬ ಅಧಿಕಾರಿಗೆ ಹತ್ತಿರವಾದವರು ಅವರ ಪರವಾಗಿ, ಇನ್ನೊಬ್ಬ ಅಧಿಕಾರಿಗೆ ಪರಿಚಯದವರು ಅವರ ಪರವಾಗಿ ಸುದ್ದಿ ಪ್ರಸಾರ ಮಾಡಿ ಕೊನೆಗೆ ಚುನಾವಣಾ ಸಮಯದಲ್ಲಿ ರಾಜಕೀಯ ಬಣ್ಣ ಹಚ್ಚಿ ಅದನ್ನು ಪರ ವಿರೋಧ ವಿಷಯ ಮಾಡಲು ಇದು ಖಾಸಗಿ ವಿಷಯವಲ್ಲ. ಆಡಳಿತದ ಶಿಸ್ತಿನ ವಿಷಯ. ಇಲ್ಲದಿದ್ದರೆ ಮುಂದೆ ಸಾರ್ವಜನಿಕರಿಗೆ ವ್ಯವಸ್ಥೆಯ ಬಗ್ಗೆ ನಂಬಿಕೆ ಕಡಿಮೆಯಾಗಿ ತಮ್ಮ ವೈಯಕ್ತಿಕ ಗಲಾಟೆಗಳಲ್ಲಿ ಇದನ್ನೇ ಉದಾಹರಣೆ ಕೊಡುತ್ತಾ ಸಮರ್ಥಿಸಿಕೊಳ್ಳತೊಡಗುತ್ತಾರೆ. ಆದ್ದರಿಂದ ಸಂಬಂಧ ಪಟ್ಟವರು ಮತ್ತು ಮಾಧ್ಯಮಗಳು ಇದನ್ನು ಒಂದು ಮನರಂಜನೆ ಎಂದು ನೋಡದೆ, ವೈಯಕ್ತಿಕ ವಿಷಯ ಎಂದು ಪರಿಗಣಿಸದೆ ಸಾರ್ವಜನಿಕ ಸೇವಕರ ಅಶಿಸ್ತು ಎಂದು ಪರಿಗಣಿಸಿ ಅವರನ್ನು ಅಮಾನತು ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದು ಸರಿ ಎನಿಸುತ್ತದೆ.
ಅಧಿಕಾರಿಗಳು ಸಹ ತಾವು ಐಎಎಸ್ ಅಥವಾ ಐಪಿಎಸ್ ಪಾಸು ಮಾಡಿದ ಕಾರಣದಿಂದ ನಾವೇ ಅತ್ಯಂತ ಬುದ್ದಿವಂತರು ಎಂಬ ಅಹಂಮಿನ ಚಿಪ್ಪಿನೊಳಗೆ ಬಂಧಿಯಾಗದೆ " ಸಾಮಾನ್ಯ ಜ್ಞಾನ - ತಾಳ್ಮೆ ಮತ್ತು ಹೃದಯವಂತಿಕೆಯಿಂದ " ಕೆಲಸ ಮಾಡಬೇಕು. ಸರ್ಕಾರಿ ಅಧಿಕಾರಿಗಳು ಲಂಚ ಪಡೆಯದಿರುವುದು ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಡುವುದು ಪ್ರಾಮಾಣಿಕತೆಯಲ್ಲ. ಅದು ಸಹಜ ಸೇವೆ ಮಾತ್ರ. ಅದಕ್ಕಾಗಿ ಸಂಬಳ ಪಡೆಯುತ್ತಾರೆ. ಪ್ರಾಮಾಣಿಕತೆ ಎಂಬುದು ದುರಹಂಕಾರ ಅಥವಾ ಜನಪ್ರಿಯತೆಯ ಸರಕಲ್ಲ. ಅದು ಕರ್ತವ್ಯ.
ಆ ಇಬ್ಬರು ಅಧಿಕಾರಿಗಳು ಮಾಧ್ಯಮಗಳ ಪ್ರಚೋದನೆಗೆ ಒಳಗಾಗದೆ ತಮ್ಮ ಇತಿಮಿತಿಗಳನ್ನು ಅರಿತು ತಾವು ಸರ್ಕಾರಿ ಸೇವಕರು - ಸಂಬಳದ ಕಾರ್ಮಿಕರು ಎಂಬುದನ್ನು ಅರಿತು ಕೆಲಸ ಮಾಡಲಿ. ಮಾಧ್ಯಮಗಳು, ತಮಗಿರುವ ಸಾಮರ್ಥ್ಯ ಬೇರೆಯವರ ಮಾನ ಹರಾಜಾಕುವುದಕ್ಕೆ ಅಲ್ಲ ಪ್ರಜಾಪ್ರಭುತ್ವದ ರಕ್ಷಣೆಗೆ ಉಪಯೋಗಿಸುವುದು ಎಂಬುದನ್ನು ಅರಿತು ನಡೆದುಕೊಳ್ಳಲಿ. ಬೇರೆಯವರ ಜಗಳಗಳು ನೋಡಲು - ಕೇಳಲು ಕುತೂಹಲ ಮತ್ತು ಚೆನ್ನ. ಆದರೆ ಅದರ ಪರಿಣಾಮಗಳು - ಮಾದರಿಗಳು ಮುಂದಿನ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂಬ ಪ್ರಜ್ಞೆ ಸದಾ ಜಾಗೃತವಾಗಿರಲಿ. ಇದಕ್ಕೆ ಇನ್ನೂ ಕೆಲವು ಆಯಾಮಗಳು ಇರಬಹುದು. ಅದನ್ನು ಸಹ ಮುಕ್ತವಾಗಿ ಸ್ವಾಗತಿಸುತ್ತಾ....
-ವಿವೇಕಾನಂದ ಹೆಚ್ ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ