ಎಲೆ ಮರೆಯ ಹಣ್ಣುಗಳು
“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ.
"ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ್ಲರೂ, ಮುಖ್ಯವಾಗಿ ಮಹಿಳೆಯರು ಓದಲೇ ಬೇಕಾದ ಪುಸ್ತಕವಿದು. ಇವುಗಳ ಹಿನ್ನೆಲೆಯ ಬಗ್ಗೆ "ಓದುವ ಮುನ್ನ”ದಲ್ಲಿ ಲೇಖಕಿ ಬರೆದಿರುವ ಮಾತುಗಳು: “ಜೀವನದಲ್ಲಿ ಎಂದೋ ಕೇಳಿದ ಸುದ್ದಿಗಳು, ನಡೆದ ಘಟನೆಗಳು, ಭೆಟ್ಟಿಯಾದ ವ್ಯಕ್ತಿಗಳು ಎಲ್ಲವೂ ನನ್ನ ನೆನಪಿನ ಅಂತರಾಳದಲ್ಲಿ ಹುದುಗಿ ಕುಳಿತಿದ್ದವು. ಈಗ ಅವು ತಲೆ ಎತ್ತಿ ನನ್ನ ಕಲ್ಪನಾಧಾರೆಗೆ ಸಿಲುಕಿ, ಕಥಾಸಾಗರ ಸೇರಿದ್ದರ ಫಲವೇ “ಎಲೆ ಮರೆಯ ಹಣ್ಣುಗಳು”.
ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಸಮಾಜ ಎಂಬುದು ಮಾನವ ನಿರ್ಮಿತವಾದದ್ದು... ಪ್ರತಿ ಸಮಾಜವೂ ತನ್ನದೇ ಆದ ರೀತಿ, ನೀತಿ, ನಡವಳಿಕೆ, ಕಾನೂನಿನ ಚೌಕಟ್ಟನ್ನು ನಿರ್ಮಿಸಿರುತ್ತದೆ. ಈ ಚೌಕಟ್ಟಿನ ಒಳಗೆ ಹೊಂದಿಕೊಂಡು ಜೀವಿಸುವವರಿಗೆ, ಜೀವನ ಸುಗಮವಾಗಿ ಸಾಗುತ್ತದೆ. ಇಲ್ಲದಿದ್ದಲ್ಲಿ, ಸಮಾಜದ ಬಿರುಗಾಳಿಯನ್ನು ಎದುರಿಸಲು ಸಿದ್ಧರಾಗ ಬೇಕಾಗುತ್ತದೆ. ಆ ಬಿರುಗಾಳಿಯ ಕಾರಣಕರ್ತರು ಗಂಡಂದಿರೋ, ಬಂಧುಗಳೋ, ಕೊನೆಗೆ ವಿಧಿಯೋ, ಯಾರಾದರೂ ಆಗಿರಬಹುದು. ಇಂತಹ ಸಮಾಜದ ಬಿರುಗಾಳಿಯನ್ನು ಒಂಟಿಯಾಗಿ ನಿಂತು ಎದುರಿಸಿದ ಒಂಬತ್ತು ಮಹಿಳೆಯರ ವ್ಯಕ್ತಿಚಿತ್ರದಂತಿರುವ ಕಥೆಗಳು ಇವು…"
ಇಲ್ಲಿನ ಕಥೆಗಳ ಎಲ್ಲ ಮಹಿಳೆಯರೂ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಬದುಕಿ ಬಾಳಿದವರು. ಇವರಿಗೆ ಅಕ್ಷರಜ್ನಾನವಿರಲಿಲ್ಲ; ಆರ್ಥಿಕ ಸ್ವಾತಂತ್ರ್ಯವೂ ಇರಲಿಲ್ಲ. ಆದರೆ ತಮ್ಮ ಜೀವನಾನುಭವದಿಂದ ಗಟ್ಟಿಯಾದ ಆತ್ಮವಿಶ್ವಾಸದಿಂದ ಜೀವಿಸಿದವರು. ಮೊದಲನೆಯ ಕಥೆ “ಕಾಡಜ್ಜಿ". ಇದೊಂದು ಸತ್ಯಕತೆ ಎಂದು ತಿಳಿಸಿದ್ದಾರೆ ಲೇಖಕಿ. ಈಕೆ ಆಯುರ್ವೇದ ಮತ್ತು ಯುನಾನಿ ಔಷಧಿಗಳ ತಯಾರಿ ವಿಧಾನ ಕಲಿತರು. ಆಗಿನ ಕಾಲದಲ್ಲಿಯೇ ಕುಟುಂಬ ಯೋಜನೆಯ ಮಹತ್ವವನ್ನು ತಿಳಿದು, ಹಳ್ಳಿಯವರಿಗೆ ಫಲಾಪೇಕ್ಷೆಯಿಲ್ಲದೆ ಚಿಕಿತ್ಸೆ ನೀಡಿದವರು. ಇಂಥವರಿಗೂ ಗಂಡ ತೀರಿಕೊಂಡಾಗ ಒತ್ತಾಯದಿಂದ ಕೇಶಮುಂಡನ ಮಾಡಲಾಯಿತು. ಆ ನೋವನ್ನು ನುಂಗಿಕೊಂಡೇ ಕೊನೆಯವರೆಗೂ ಕರ್ಮಯೋಗಿಯಾಗಿ ಬಾಳಿದರು.
ಎರಡನೆಯದು “ಪುಟ್ಟತಾಯಿ"ಯ ಕಣ್ಣೀರಿನ ಕತೆ. ಶೋಕೀಲಾಲ ಮತ್ತು ದುರಾಚಾರಿ ಗಂಡನಿಂದಾಗಿ ಬದುಕಿನುದ್ದಕ್ಕೂ ನಲುಗಿದಳು ಅವಳು. ರಂಗಣ್ಣ ಅವಳ ಪತಿ ಎನಿಸಿಕೊಂಡ ನರಾಧಮ. ನಂಬಿ ಬಂದ ಕೋಮಲಾಂಗಿ ಹೆಂಡತಿಯನ್ನೇ ಮಾರಿ ಬದುಕಿದವನು. ಅಂತಹ ಗಂಡನಿಂದಾಗಿ ತನ್ನ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ ಎನಿಸಿದಾಗ ಆಕೆ ಹುಚ್ಚಿಯಂತೆ ನಟಿಸಬೇಕಾಯಿತು. ಕೊನೆಗೆ ಆಕೆ ಹುಚ್ಚಾಸ್ಪತ್ರೆಯಲ್ಲಿಯೇ ನರಳಿನರಳಿ ಜೀವ ತೊರೆದಳು.
ಕಂಟ್ರಾಕ್ಟರ್ ರಘುನಾಥರಾಯರಿಗೆ ಎರಡನೇ ಹೆಂಡತಿಯಾಗಿ ಬಂದವಳು “ಸುಬ್ಬಕ್ಕ". ಅವರ ಮೊದಲ ಪತ್ನಿಯ ನಾಲ್ವರು ಮಕ್ಕಳು ಮತ್ತು ಸೊಸೆಯಂದಿರ ಜೊತೆಗೆ ದೊಡ್ಡಸ್ತಿಕೆಯಲ್ಲೇ ಮನೆ ನಡೆಸಿದಳು. ಆದರೆ ರಾಯರು ನಿಧನರಾದಾಗ ಬದುಕು ಬದಲಾಯಿತು. ಆ ನಾಲ್ವರು ಮಗಂದಿರೂ ಸೊಸೆಯಂದಿರೂ ಮಲತಾಯಿಯ ತಿಜೋರಿಯಲ್ಲಿದ್ದ ಒಡವೆವಸ್ತುಗಳಿಗಾರಿ ರಂಪ ಮಾಡಿದರು. ಆದರೂ ಅದರ ಬಹುಪಾಲನ್ನು ತನ್ನಲ್ಲಿಯೇ ಉಳಿಸಿಕೊಂಡಳು ಸುಬ್ಬಕ್ಕ. ಕೊನೆಗೆ ವಿಲ್ ಬರೆಯಿಸಿ, ಒಡವೆ, ಮನೆ, ತೆಂಗಿನತೋಟವನ್ನು ತನ್ನನ್ನು ನೋಡಿಕೊಂಡ ಗೌರಿಗೂ, ಗದ್ದೆ-ಮನೆ ಮಾರಿ ಬಂದ ಹಣವನ್ನು ಸೈನಿಕರ ಫಂಡಿಗೂ ದಾನವಿತ್ತಳು.
ನಾಲ್ಕನೆಯ ಕಥೆ ಮುಂಬೈಯ “ಆಜಿ"ಯದು. ಅವಳ ಹೆಸರು ಪಾರ್ವತೀ ಬಾಯಿ. ಮಗನನ್ನು ಓದಿಸಿ, ಮದುವೆ ಮಾಡಲಿಕ್ಕಾಗಿ ಮಹಿಳಾ ಮಂಡಲಿಯಲ್ಲಿ ದುಡಿದು ಜೀವತೇದವಳು. ಅವಳ ಗಂಡ ಮಹಾ ಕುಡುಕ. ದಿನದಿನವೂ ಹೆಂಡತಿಗೆ ಹೊಡೆದು, ಅವಳ ದುಡಿಮೆಯ ಹಣದಲ್ಲಿ ಕುಡಿದು, ಅವಳ ಬದುಕನ್ನು ನರಕವಾಗಿಸಿದವನು. ಅವನು ಸತ್ತ ನಂತರ, ಧಾರಾವಿ ಸ್ಲಮ್‌ನಲ್ಲಿ ಜೋಪಡಿಯಲ್ಲಿ ವಾಸವಿದ್ದ ಇವಳಿಗೊಂದು ಪುಟ್ಟ ಮನೆ ಒದಗಿಸಿತು ಸರಕಾರ. ಆದರೆ ಅದುವೇ ಅವಳಿಗೆ ಮುಳುವಾಯಿತು. ಅದನ್ನು ತನ್ನ ಹೆಸರಿಗೆ ಮಾಡಬೇಕೆಂದು ಅವಳ ಮಗ ಅವಳಿಗೆ ಹೊಡೆದು ಬಡಿಯತೊಡಗಿದ. ಕೊನೆಗೆ ಮುಂಬೈಯ ಗಲಭೆಯಲ್ಲಿ ಹಿಂಸಾಚಾರಕ್ಕೆ ಬಲಿಯಾದಳು ಆಜಿ. ಆದರೆ ಆ ಮುನ್ನ ತನ್ನ ಮನೆ ಮಗನಿಗೆ ಸಿಗದಂತೆ ಅದನ್ನು ಮಾರಿದಳು!
“ಅಜ್ಜವ್ವ (ನಾಗವ್ವ)” ಎಂಬ ಐದನೆಯ ಕತೆ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇವಳ ಮಗ-ಸೊಸೆ-ಮೊಮ್ಮಗನನ್ನು ರಾಕ್ಷಸರಂತೆ ಕೊಲೆಗೈದರು ದಾಯಾದಿಗಳು - ಫಲವತ್ತಾದ ಜಮೀನಿನ ಆಸೆಗಾಗಿ. ಆ ಹತ್ಯಾಕಾಂಡದಲ್ಲಿ ಉಳಿದವಳು ಪುಟ್ಟ ಮೊಮ್ಮಗಳು ಮಾತ್ರ. ಅವಳನ್ನು ಕಣ್ಣಪಾಪೆಯಂತೆ ಕಾಪಾಡಿದಳು ಅಜ್ಜವ್ವ. ಕಲ್ಲುಬಂಡೆಯಂತೆ ನಿಂತು, ಪುಟ್ಟ ಮೊಮ್ಮಗಳಿಂದ ಕೋರ್ಟಿನಲ್ಲಿ ಕೊಲೆಗಡುಕರ ವಿರುದ್ಧ ಸಾಕ್ಷಿ ಹೇಳಿಸಿ, ಅವರು ನಾಲ್ವರಿಗೂ ಗಲ್ಲು ಶಿಕ್ಷೆಯಾಗಲು ಕಾರಣಳಾದಳು. ಗಂಡೆದೆ ಎಂದರೆ ಇದು!
ನಂತರದ ಕತೆ “ರಾಧಮ್ಮ"ನದು. ಆಕೆಗೆ ಬದುಕಿನಲ್ಲಿ ಆಘಾತದ ಮೇಲೆ ಆಘಾತ. ಗಂಡ ತೀರಿಕೊಂಡರೂ ಮೂರು ಮಕ್ಕಳ ಸಂಸಾರವನ್ನು ಅವರಿವರ ಮನೆಗೆಲಸ ಮಾಡುತ್ತಾ ಸರಿದೂಗಿಸಿಕೊಂಡು ಹೋಗುತ್ತಿದ್ದಳು. ಆಗ ಹಿರೇಮಗ ವೆಂಕಣ್ಣ ಲಾರಿ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಮಲಗಿದಲ್ಲೇ ಇರುವಂತಾಯಿತು. ಎರಡನೇ ಮಗ ಮನೆ ಬಿಟ್ಟು ಹೋದ. ಮೂರನೇ ಮಗನಿಗೆ ಹುಟ್ಟಿದಾಗಿನಿಂದಲೂ ಫಿಟ್ಸ್. ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದ ರಾಧಮ್ಮನಿಗೆ ಇವೆಲ್ಲ ಸಾಲದೆಂಬಂತೆ ಮೈಸೂರಿನ ಹೆಸರುವಾಸಿ ಜೋಯಿಸರಿಂದ ದೊಡ್ಡ ಅನ್ಯಾಯವಾಯಿತು. ಇದನ್ನೆಲ್ಲ ಹಲ್ಲುಕಚ್ಚಿ ಸಹಿಸಿಕೊಂಡ ರಾಧಮ್ಮ ಕೊನೆಗೂ ವಿಧಿಯ ಆಟಕ್ಕೆ ಬಲಿಯಾಗುತ್ತಾಳೆ.
ಮುಂದಿನದು, ರಾಜಮನೆತನದ ಅಮ್ಮಾಜಿಯ ಕತೆ. 95ನೇ ವಯಸ್ಸಿನಲ್ಲಿಯೂ ಅಬಲಾಶ್ರಮದ ಆಗುಹೋಗುಗಳಲ್ಲಿ ಭಾಗಿಯಾಗುತ್ತಾ, ಅದರ ಮೇಲುಸ್ತುವಾರಿ ನೋಡುತ್ತಾ, ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡವರು. ಎಂಟನೆಯ ಕತೆ "ಕಾಕೂ" ಎಂಬ ಮುಂಬೈಯ ಮಹಿಳೆಯದು. ಅವರ ಒಬ್ಬಳೇ ಮಗಳು ಚಂದ್ರ. ಮದುವೆಯಾಗಿ ಅಳಿಯನೊಂದಿಗೆ ಆಫ್ರಿಕಾಕ್ಕೆ ಹೋದಳು. ಕೊನೆಗೆ ಅಲ್ಲಿಯ ದರೋಡೆಕೋರರ ಕ್ರೌರ್ಯಕ್ಕೆ ಬಲಿಯಾದಳು. ನೆಲಕಚ್ಚಿದ ತನ್ನ ಬದುಕನ್ನು ಕಾಕೂ ಅವಡುಗಚ್ಚಿ ಒಂದು ನೆಲೆಗೆ ತಂದದ್ದನ್ನು ಓದುವಾಗ, ಆ ಯಾತನೆಯ ಎದುರು ನಮ್ಮೆಲ್ಲ ಕಷ್ಟಗಳು ಏನೂ ಅಲ್ಲ ಅನಿಸುತ್ತದೆ.
ಕೊನೆಯದು "ಮಾಮಿ ಗ್ರೇನ್” ಎಂಬ ಮಹಿಳೆಯ ಕತೆ. ಮುಂಬೈಯಲ್ಲಿದ್ದಾಗ ದಿನವೂ ಮಾತುಂಗಾದ ಕ್ಲಬ್‌ನಲ್ಲಿ ಆಟವಾಡುತ್ತಾ, ದುಬಾರಿ ಕಾರಿನಲ್ಲಿ ಓಡಾಡುತ್ತಾ ಆರಾಮವಾಗಿ ಬದುಕಿದಾಕೆ. ಅಡುಗೆ ಮಾಡುತ್ತಿದ್ದುದೇ ಅಪರೂಪ. ಆ ಮಾಮ ಮತ್ತು ಮಾಮಿಯದು “ಮೇಡ್ ಫಾರ್ ಈಚ್ ಅದರ್” ಎಂಬಂತಹ ಜೋಡಿ. ಗಂಡನ ನಿಧನವಾಗಿ ಒಂದು ವರುಷದ ನಂತರ ನಂತರ ಅಮೇರಿಕಾಗೆ ಹೋಗಿ ಮಗಳು ಮಾಲಿನಿ ಜೊತೆ ವಾಸ ಮಾಡತೊಡಗಿದರು. ಕ್ರಮೇಣ “ಇಡ್ಲಿ ಮತ್ತು ದೋಸೆ ಹಿಟ್ಟು” ತಯಾರಿಸಿ, ಸುತ್ತಮುತ್ತಲು ವಾಸವಿದ್ದ ಅನಿವಾಸಿ ಭಾರತೀಯರಿಗೂ ಪ್ರವಾಸ ಬರುವ ಭಾರತೀಯರಿಗೂ ಮಾರಾಟ ಮಾಡತೊಡಗಿದರು. ಹೀಗೆ ಇಳಿವಯಸ್ಸಿನಲ್ಲಿ ಹೊಸಬದುಕು ಬಾಳತೊಡಗಿದರು!
ಇಲ್ಲಿನ ಪ್ರತಿಯೊಂದು ಮಹಿಳೆಯ ಕಥೆಯಲ್ಲಿಯೂ ಬದುಕಿನ ಹಲವು ಪಾಠಗಳಿವೆ. ಚಿಂತೆ ಮಾಡುತ್ತಾ, ಖಿನ್ನತೆಗೆ ಜಾರುತ್ತಾ ಬದುಕು ಸವೆಸುವ ಬದಲಾಗಿ ಇಂತಹ ಕಥೆಗಳಿಂದ ಸ್ಫೂರ್ತಿ ಪಡೆದು ಬದುಕು ಸಾಗಿಸಬಹುದು, ಅಲ್ಲವೇ?